ಉಡುಪಿ: ಪರ್ಕಳ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್169ಎ) ಕಾಮಗಾರಿ ಆರಂಭದಿಂದಲೂ ಒಂದಲ್ಲ ಒಂದು ಬಗೆಯ ವಿವಾದದಿಂದ ಅಚ್ಚುಕಟ್ಟಾಗಿ ಕಾಮಗಾರಿ ನಡೆಯಲು ಸಾಧ್ಯವಾಗಿರಲಿಲ್ಲ. ಭೂಸ್ವಾಧೀನ, ಪರಿಹಾರ ವಿತರಣೆ ಸಹಿತ ಮೊದಲಾದ ತಾಂತ್ರಿಕ ಕಾರಣಗಳಿಂದ ಇಲ್ಲಿನ ಕಾಮಗಾರಿ ವಿಳಂಬವಾಗುತ್ತಲೆ ಇತ್ತು. ಇದೀಗ ಭೂ ಸ್ವಾಧೀನ ಮತ್ತು ಪರಿಹಾರ ವಿಷಯಕ್ಕೆ ಸಂಬಂಧಿಸಿ ಕೋರ್ಟ್‌ನಲ್ಲಿದ್ದ ಎರಡು ಪ್ರಕರಣದಲ್ಲಿ ಒಂದು ಪ್ರಕರಣ ಇತ್ಯರ್ಥಗೊಂಡಿದೆ.
ಇನ್ನೊಂದು ಪ್ರಕರಣ ಇತ್ಯರ್ಥಗೊಳ್ಳಬೇಕಿದೆ. ಇತ್ಯರ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೆ ಕಾಮಗಾರಿ ಆರಂಭಿಸಲಾಗಿದೆ. ಈ ಹಿಂದೆ ತಡೆಯಾಜ್ಞೆ ಪರಿಣಾಮ ಕಾಮಗಾರಿ ಕೆಲವು ತಿಂಗಳು ಸ್ಥಗಿತಗೊಂಡಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೆದ್ದಾರಿ ಸಚಿವಾಲಯ ಹೈಕೋರ್ಟ್ ತಡೆಯಾಜ್ಞೆ ಇರುವ ಪ್ರದೇಶ ಹೊರತುಪಡಿಸಿ ಉಳಿದ ಭಾಗದ 540 ಮೀಟರ್ ಹೆದ್ದಾರಿ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಈಗಾಗಲೇ ಪೂರ್ಣಗೊಳಿಸಿದೆ.
ಕೆನರಾ ಬ್ಯಾಂಕ್ ಸಮೀಪದ ತಂಪು ಪಾನೀಯ ಘಟಕದವರೆಗೆ ಕಾಂಕ್ರೀಟ್ ರಸ್ತೆ ಪೂರ್ಣಗೊಂಡಿದ್ದು ಇಲ್ಲಿಂದ ನೇರ ಮಾರ್ಗದಲ್ಲಿ ನಗರಸಭೆಯ ನೀರಿನ ಟ್ಯಾಂಕ್‌ವರೆಗೆ ವ್ಯವಸ್ಥಿತ ರಸ್ತೆ ನಿರ್ಮಾಣಗೊಳ್ಳಲಿದೆ. ಇಲ್ಲಿ ಆರಂಭಿಕ ಹಂತದ ಕಾಮಗಾರಿ ಸಾಗುತ್ತಿದೆ. ಯಂತ್ರಗಳು ಸ್ಥಳಕ್ಕಾಗಮಿಸಿದ್ದು, ಕಾರ್ಮಿಕರು ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದನ್ನು ಸಾವಿರಾರು ಲೋಡ್ ಮಣ್ಣು ತುಂಬಿಸಿ ಎತ್ತರ ಮಾಡಿ ಬಳಿಕ ಕಾಂಕ್ರೀಟ್ ರಸ್ತೆ ನಿರ್ಮಿಸಬೇಕು. 390 ಮೀಟರ್ ವ್ಯಾಪ್ತಿಯಷ್ಟು ತಡೆಯಾಜ್ಞೆ ಇದ್ದು, ಇದರಲ್ಲಿ ಈಗಾಗಲೇ ಇತ್ಯರ್ಥಗೊಂಡ ಪ್ರಕರಣದ ವ್ಯಾಪ್ತಿಯಲ್ಲಿ 150 ಮೀಟರ್‌ನಷ್ಟು ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದ್ದಾರೆ.
ಮಳೆ ನೀರು ಚರಂಡಿ, ಬಸ್‌ಬೇ ನಿರ್ಮಾಣ ಬಾಕಿ
ಪರ್ಕಳ ಪೇಟೆ ಭಾಗದಲ್ಲಿ 540 ಮೀಟರ್‌ನಷ್ಟು ರಸ್ತೆ ಕಾಮಗಾರಿ ವ್ಯವಸ್ಥಿತವಾಗಿ ಮುಗಿಸಲಾಗಿದ್ದು, ಇನ್ನೂ ಮಳೆ ನೀರು ಹರಿಯುವ ತೋಡು, ಪಾದಚಾರಿ ಮಾರ್ಗ, ರಸ್ತೆ ವಿಭಾಜಕ ಮತ್ತು ಬಸ್ ಬೇ ನಿರ್ಮಾಣವನ್ನು ಅಚ್ಚುಕಟ್ಟಾಗಿ ಕಾಮಗಾರಿ ನಡೆಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಗಾಲ ಶುರುವಾಗಲಿದ್ದು, ಅಷ್ಟರೊಳಗೆ ಕೆಲಸ ಮುಗಿಸಿಕೊಡಬೇಕು. ಕಾಮಗಾರಿ ಮುಗಿಯುತ್ತಿದ್ದಂತೆ ಲೈಟ್ ವ್ಯವಸ್ಥೆಯೂ ಶೀಘ್ರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಎರಡು ಪ್ರಕರಣ
ಭೂಸ್ವಾಧೀನ ಪ್ರಕ್ರಿಯೆ ಸಂಬಂಧಿಸಿ ಎರಡು ಪ್ರಕರಣ ಹೈಕೋರ್ಟ್‌ನಲ್ಲಿದ್ದು, ಒಂದು ಪ್ರಕರಣ ಇತ್ಯರ್ಥಗೊಂಡು ನೇರ ರಸ್ತೆ ನಿರ್ಮಾಣಕ್ಕೆ ಕಾಮಗಾರಿ ಆರಂಭಗೊಂಡಿದೆ. ಇನ್ನೊಂದು ಪ್ರಕರಣವು ಶೀಘ್ರ ಇತ್ಯರ್ಥಗೊಳ್ಳಲಿದೆ.
– ಕೆ. ರಘುಪತಿ ಭಟ್, ಶಾಸಕ