ಬೆಂಗಳೂರು: ನವೆಂಬರ್ ತಿಂಗಳಿಂದ ನಡೆಸಲುದ್ದೇಶಿಸಿರುವ ನವ ಕರ್ನಾಟಕ ಪರಿವರ್ತನ ರಥಯಾತ್ರೆಯನ್ನೇ ಚುನಾವಣಾ ಪ್ರಚಾರ ಯಾತ್ರೆಯನ್ನಾಗಿ ಪರಿವರ್ತಿಸಲು ಬಿಜೆಪಿ ನಿರ್ಧರಿಸಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರೇ ಸ್ಟಾರ್‌ಗಳು! ಮಿಷನ್ 150 ಪ್ಲಸ್ ಗುರಿಯೊಂದಿಗೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಬಿಜೆಪಿ, ಮೋದಿ ಮಾತುಗಾರಿಕೆ ಮತ್ತು ಶಾ ಅವರ ತಂತ್ರಗಾರಿಕೆಯನ್ನೇ ಮುಂದಿಟ್ಟುಕೊಂಡು ಪ್ರಚಾರಕ್ಕೆ ಇಳಿಯುವುದು ಸ್ಪಷ್ಟವಾಗಿದೆ. ಹೀಗಾಗಿ ರಥಯಾತ್ರೆಯಲ್ಲಿ ಕನಿಷ್ಠ 25 ಕಡೆ ಪ್ರಧಾನಿ ಮೋದಿ ಹಾಗೂ 50 ಕಡೆ ಅಮಿತ್ ಶಾ ಅವರನ್ನು ಕರೆಸಲು ರಾಜ್ಯ ಬಿಜೆಪಿ ಪ್ರಯತ್ನಿಸುತ್ತಿದೆ.
ರಥಯಾತ್ರೆಯ ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮದಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಭಾಗವಹಿಸುವುದು ಖಚಿತವಾಗಿದೆ. ಕನಿಷ್ಠ ಜಿಲ್ಲಾ ಕೇಂದ್ರಗಳಿಗಾದರೂ ಇಬ್ಬರ ಪೈಕಿ ಒಬ್ಬರು ಬರಲೇಬೇಕೆಂಬ ನಿರ್ಧಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ನಾಯಕರು, ಅದಕ್ಕಾಗಿ ದಿನಗಳ ಹೊಂದಾಣಿಕೆಗಾಗಿ ಪ್ರಧಾನಿ ಕಚೇರಿ ಮತ್ತು ಬಿಜೆಪಿ ರಾಷ್ಟ್ರೀಯ ಕಚೇರಿ ಜತೆ ಸಂಪರ್ಕದಲ್ಲಿದ್ದಾರೆ. ಅವರಿಬ್ಬರ ದಿನಾಂಕ ನಿಗದಿಯಾದ ಮೇಲೆ ರಾಜ್ಯದ ಎಲ್ಲ ಭಾಗಗಳಿಗೂ ಆದ್ಯತೆ ನೀಡುವ ಉದ್ದೇಶದಿಂದ ಪ್ರಧಾನಿ ಮತ್ತು ರಾಷ್ಟ್ರೀಯ ಅಧ್ಯಕ್ಷರು ಹಳೇ ಮೈಸೂರು, ಕರಾವಳಿ -ಮಲೆನಾಡು, ಹೈದರಾಬಾದ್ ಕರ್ನಾಟಕ ಮತ್ತು ಮುಂಬಯಿ ಕರ್ನಾಟಕ ಪ್ರದೇಶ ಗಳಲ್ಲಿ ಆದ್ಯತೆ ಮೇಲೆ ಪಾಲ್ಗೊಳ್ಳಲು ಅನುಕೂಲವಾಗುವಂತೆ ರಥಯಾತ್ರೆ ಮಾರ್ಗ ಸಿದ್ಧಪಡಿಸಲಾಗು ವುದು ಎಂದು ಮೂಲಗಳು ಹೇಳಿವೆ.
125 ಬೃಹತ್ ಸಮಾವೇಶಕ್ಕೆ ತಯಾರಿ: ನವೆಂಬರ್ 2ರಿಂದ ಆರಂಭವಾಗುವ ರಥಯಾತ್ರೆ ಬಹುತೇಕ 2018ರ ಜನವರಿ ಮಧ್ಯಂತರಕ್ಕೆ ಕೊನೆಗೊಳ್ಳುತ್ತದೆ. 224 ವಿಧಾನಸಭಾ ಕ್ಷೇತ್ರಗಳಲ್ಲೂ ರಥಯಾತ್ರೆ ಇರಲಿದ್ದು, ಈ ವೇಳೆ ವಿಧಾನಸಭಾ ಕ್ಷೇತ್ರಗಳಲ್ಲಿ ನವಶಕ್ತಿ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ. ಈ ಪೈಕಿ 30 ಜಿಲ್ಲಾ ಕೇಂದ್ರಗಳ ಸಹಿತ 125 ಕಡೆ ಬೃಹತ್ ಸಮಾವೇಶಗಳನ್ನು ಏರ್ಪಡಿಸಲು ತೀರ್ಮಾನಿಸಲಾಗಿದ್ದು, ಇದರಲ್ಲಿ ಪ್ರಧಾನಿ, ಅಮಿತ್ ಶಾ ಸಹಿತ ಕೇಂದ್ರದ ಸಚಿವರು, ಪಕ್ಷದ ರಾಷ್ಟ್ರೀಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಒಂದೆರಡು ಕಡೆಗಳಿಗೆ ಎಲ್.ಕೆ. ಆಡ್ವಾಣಿ ಅವರನ್ನೂ ಕರೆತರುವ ಪ್ರಯತ್ನ ನಡೆದಿದೆ ಎಂದು ತಿಳಿದುಬಂದಿದೆ.
ರಾಜ್ಯಾದ್ಯಂತ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ರಥಯಾತ್ರೆ ನಡೆಯಲಿದ್ದು, ವಿಧಾನಸಭೆ ವಿಪಕ್ಷ ನಾಯಕ ಜಗದೀಶ ಶೆಟ್ಟರ್, ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಪಕ್ಷದ ರಾಜ್ಯ ಪದಾಧಿಕಾರಿಗಳು ಜತೆಯಲ್ಲಿರುತ್ತಾರೆ. ಉಳಿದಂತೆ ಆಯಾ ಜಿಲ್ಲೆಗಳಲ್ಲಿ ಅಲ್ಲಿನ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಪಾಲ್ಗೊಳ್ಳುವುದು ಕಡ್ಡಾಯ ಎಂದು ಸೂಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ರಥಯಾತ್ರೆ ಆರಂಭ ನ.1 ಅಲ್ಲ 2
ಕರ್ನಾಟಕ ರಾಜ್ಯೋತ್ಸವದ ಕಾರಣ ಮತ್ತು ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರಬೇಕೆಂಬ ಉದ್ದೇಶದಿಂದ ಬಿಜೆಪಿ ಹಮ್ಮಿಕೊಂಡಿರುವ ನವ ಕರ್ನಾಟಕ ನಿರ್ಮಾಣ ಪರಿವರ್ತನಾ ರಥಯಾತ್ರೆ ನ.1ರ ಬದಲು ನ.2ರಂದು ಆರಂಭವಾಗಲಿದೆ. ನ.1ರ ಕರ್ನಾಟಕ ರಾಜ್ಯೋತ್ಸವ ದಿನದಂದೇ ರಥಯಾತ್ರೆ ಆರಂಭಿಸಿ 2018ರ ಜ.15ಕ್ಕೆ ಕೊನೆಗೊಳಿಸಬೇಕು ಎಂದು ಈ ಹಿಂದೆ ನಿರ್ಧರಿಸಲಾಗಿತ್ತು.