ಕೊರಟಗೆರೆ:ರೈತರನ್ನು ಆರ್ಥಿಕವಾಗಿ ಅಭಿವೃದ್ಧಿಯಲ್ಲಿ ಮುಂದೆ ತರಬೇಕೆಂಬ ದೃಷ್ಟಿಯಿಂದ ಪ್ರಾರಂಭಗೊಂಡ ಪರಿವರ್ತನ ಮಾರ್ಟ್ ಕಂಪನಿಯು ಕೃಷಿ ಉತ್ಪನ್ನ ಪದಾರ್ಥಗಳನ್ನು ರೈತರಿಂದಲೇ ನೇರವಾಗಿ ಖರೀದಿಸಿ ಶುದ್ಧ ಆಹಾರ ಪದಾರ್ಥಗಳನ್ನು ತಯಾರಿಸಿ ಸಂಸ್ಥೆಯಿಂದ ಮಾರಾಟ ಮಾಡಲು ಮುಂದಾಗಿರುವುದು ನಿಜಕ್ಕೂ ಪ್ರತಿಯೊಂದು ಸಂಘ ಸಂಸ್ಥೆಗಳಿಗೆ ಮಾದರಿ ಎಂದು ಸಿದ್ಧರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪರಿವರ್ತನ ಇಕೋ ರೈತ ಉತ್ಪಾದಕರ ಕಂಪನಿ ಉದ್ಘಾಟನಾ ಹಾಗೂ ಪರಿವರ್ತನ ಸೂಪರ್ ಮಾರ್ಟ್ ಪ್ರಾರಂಭೋತ್ಸವದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಯಾವುದೇ ವ್ಯಕ್ತಿ ತನಗೆ ಬೇಕಾದನ್ನು ಕಡಿಮೆ ಸಮಯದಲ್ಲಿ ಪಡೆಯುವಷ್ಣು ಇಂದು ಟೆಕ್ನಾಲಜಿ ಮುಂದುವರೆದಿದೆ. ರೈತರು ತಾವುಗಳು ಬೆಳೆದಿರುವಂತಹ ಆಹಾರ ಪದಾರ್ಥಗಳನ್ನು ಮಾರುಕಟ್ಟೆಯಲ್ಲಿ ಇಂದಿನ ತಂತ್ರಜ್ಞಾನದ ಸಹಾಯದಿಂದ ಮಾರಾಟ ಮಾಡಿದಾಗ ಆರ್ಥಿಕ ಅಭಿವೃದ್ಧಿಯನ್ನು ಕಾಣಲು ಸಾಧ್ಯ ಎಂದರು.
ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ಹನುಮಂತನಾಥ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ರೈತರು ಜಮೀನುಗಳನ್ನು ಇಂದು ನಾವುಗಳೇ ಹಾಳು ಮಾಡುತ್ತಿದ್ದೇವೆ. ಇದು ಬದಲಾವಣೆಯಾಗಬೇಕಾದರೆ ನಾವು ಬೆಳೆದಿರುವಂತಹ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಮೊದಲು ಕೃಷಿ ಮಾಡಬೇಕು. ಇಂದು ಸಾವಿರಾರು ಎಕರೆ ಭೂಮಿಯನ್ನು ಕೃಷಿ ಮಾಡದೆ ಹಾಗೆ ಬಿಟ್ಟಿದ್ದೇವೆ. ಕಾರಣವೆನೆಂದರೆ ಗ್ರಾಮೀಣ ಭಾಗದ ಜನರು ಕೃಷಿ ಕೆಲಸ ಮಾಡುವುದು ಕಡಿಮೆಯಾಗಿ ಪಟ್ಟಣಕ್ಕೆ ಬಂದು ಕೆಲಸ ಮಾಡುವುದು ಹೆಚ್ಚಾಗಿದೆ. ಇದೇ ರೀತಿ ಮುಂದುವರೆದರೆ ನಾವುಗಳೆಲ್ಲಾ ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗುತ್ತದೆ. ಆದಷ್ಟು ಯುವಕರೆಲ್ಲಾ ಹೆಚ್ಚಾಗಿ ಕೃಷಿ ಕಡೆ ಹೆಚ್ಚಿನ ಗಮನಹರಿಸಿ ಎಂದರು.
ಮಾಜಿ ಶಾಸಕ ಪಿ.ಆರ್ ಸುಧಾಕರ್ ಲಾಲ್ ಮಾತನಾಡಿ, ರೈತ ಉತ್ಪಾದಕ ಕಂಪನಿ ಸ್ಥಾಪನೆಗೊಂಡಿರುವುದು ರೈತರಿಗೆ ಶುಭ ಸೂಚನೆ. ಪ್ರತಿ ವರ್ಷ ಕಷ್ಟ ಪಟ್ಟು ಬೆಳೆದ ಬೆಳಗೆ ಯಾವೊಬ್ಬ ರೈತನಿಗೂ ಸಹ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಸಿಕ್ಕಿಲ್ಲ. ಕೊರಟಗೆರೆಯಲ್ಲಿ ಪ್ರಪ್ರಥಮ ಬಾರಿಗೆ ಪರಿವರ್ತನ ರೈತ ಉತ್ಪಾದಕರ ಕಂಪನಿ ಪ್ರಾರಂಭಗೊಂಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಪ್ಪ, ತಾಲ್ಲೂಕು ಉಪಾಧ್ಯಕ್ಷ ಸಿದ್ಧಮಲ್ಲಪ್ಪ, ಸಂಪನ್ಮೂಲ ಅಧಿಕಾರಿ ಯೋಗೀಶ್ ಅಪ್ಪಾಜಿ, ಪರಿವರ್ತನ ಉತ್ಪಾದಕರ ಕಂಪನಿಯ ಅಧ್ಯಕ್ಷ ಶಿವಕುಮಾರ್, ನಿದೇರ್ಶಕ ಪರ್ವತಯ್ಯ, ಡೈರಿ ಸದಾಶಿವಯ್ಯ, ಕೆಬಿ ಚಂದ್ರಶೇಖರ್, ವಾಸುದೇವರಾಜು, ಶಿವಣ್ಣ, ಸೇರಿದಂತೆ ಪರಿವರ್ತನ ಉತ್ಪಾದಕರ ಕಂಪನಿಯ ಸಿಬ್ಬಂದಿಗಳು, ಸಾರ್ವಜನಿಕರು ಹಾಜರಿದ್ದರು.