Advertisement

Paris; ದುರದೃಷ್ಟದ ಒಲಿಂಪಿಕ್ಸ್‌; ರಿತಿಕಾ, ವಿನೇಶ್‌ಗೆ ಕಾಡಿದ ನಿಯಮಗಳು

01:13 AM Aug 12, 2024 | Team Udayavani |

ಪ್ಯಾರಿಸ್‌: ಭಾರತದ ಪಾಲಿಗೆ ಭಾರೀ ನಿರೀಕ್ಷೆ ಮೂಡಿಸಿದ್ದ ಪ್ಯಾರಿಸ್‌ ಒಲಿಂಪಿಕ್ಸ್‌ ಮುಕ್ತಾಯಗೊಂಡಿದೆ. ಕಳೆದ ಬಾರಿಯ ಒಲಿಂಪಿಕ್ಸ್‌ನಲ್ಲಿ ತನ್ನ ಸಾರ್ವಕಾಲಿಕ ಗರಿಷ್ಠ 7 ಪದಕ ಗಳಿಸಿದ್ದ ಭಾರತವು ಈ ಬಾರಿ 1 ಬೆಳ್ಳಿ, 5 ಕಂಚು ಸೇರಿ 6 ಪದಕಗಳೊಂದಿಗೆ ತನ್ನ ಅಭಿಯಾನ ಮುಕ್ತಾಯಗೊಳಿಸಿದೆ. ದಾಖಲೆಯ ಲೆಕ್ಕದಲ್ಲಿ ಭಾರತ ತನ್ನ 2ನೇ ಗರಿಷ್ಠ ಪದಕ ಗಳಿಕೆ
ದಾಖಲಿಸಿದೆ.

Advertisement

ಆದರೆ ಕೆಲವು ನಿಯಮಗಳು ಹಾಗೂ ದುರದೃಷ್ಟಗಳಿಂದಾಗಿ ಏನಿಲ್ಲವೆಂದರೂ 7-8 ಪದಕಗಳನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದೆ.ದೇಶದ 6 ಮಂದಿ 4ನೇ ಸ್ಥಾನ ಪಡೆದಿದ್ದಾರೆ. ಅರ್ಜುನ್‌ ಬಬುತಾ, ಅಂಕಿತಾ, ಧೀರಜ್‌, ಮನು ಭಾಕರ್‌, ಅನಂತ್‌ ಜೀತ್‌, ಮಹೇಶ್ವರಿ, ಲಕ್ಷ್ಯ ಸೇನ್‌, ಮೀರಾಬಾಯಿ ಚಾನು 4ನೇ ಸ್ಥಾನಿಗಳಾಗಿ ಸ್ಪರ್ಧೆ ಮುಗಿಸಿದರು.

ಇವರೆಲ್ಲರ ಸಾಧನೆ ಪದಕಗಳಾಗಿ ಪರಿವರ್ತನೆಯಾಗಿದ್ದರೆ ಭಾರತದಪದಕ ಗಳಿಕೆ ಸುಲಭವಾಗಿ ಎರಡಂಕಿ ದಾಟುತ್ತಿತ್ತು. ಕುಸ್ತಿಪಟುಗಳಾದ ವಿನೇಶ್‌ ಫೋಗಾಟ್‌, ನಿಶಾ ದಹಿಯಾ, ರಿತಿಕಾ ಹೂಡಾ ದುರದೃಷ್ಟವಶಾತ್‌ ಪದಕ ತಪ್ಪಿಸಿಕೊಂಡಿದ್ದಾರೆ. ಇದೆಲ್ಲ ಕಾರಣಕ್ಕೆ ಭಾರತಕ್ಕೆ ಈ ಬಾರಿ 15 ಪದಕ ಗಳಿಸುವ ಅವಕಾಶ ತಪ್ಪಿ ಹೋಗಿದೆ.

ಕಾಡಿದ ದುರದೃಷ್ಟ
ಪದಕ ಖಚಿತವಾಗಿದ್ದ ವಿನೇಶ್‌ ಫೋಗಾಟ್‌ ನಿಯಮದ ಸುಳಿಗೆ ಸಿಲುಕಿ ಪದಕ ಕಳೆದುಕೊಂಡರು. 50 ಕೆ.ಜಿ. ವಿಭಾಗದಲ್ಲಿ ವಿನೇಶ್‌ ಫೈನಲ್‌ ಪ್ರವೇಶಿಸುವ ಮೂಲಕ ಭಾರತಕ್ಕೆ ಒಂದು ಪದಕ ಖಚಿತಪಡಿಸಿದ್ದರು. ಆದರೆ ಫೈನಲ್‌ ಪಂದ್ಯಕ್ಕೆ ಮುನ್ನ ದೇಹದ ತೂಕ ನಿಗದಿಗಿಂತ 100 ಗ್ರಾಂ ಹೆಚ್ಚಾಗಿತ್ತು ಎಂಬ ಕಾರಣಕ್ಕೆ ಅನರ್ಹಗೊಂಡರು. 76 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿದ್ದ ರಿತಿಕಾ ಹೂಡಾ ಸಮಬಲ ಸಾಧಿಸಿದ್ದರೂ “ಕೊನೆಯಲ್ಲಿ ಪದಕ ಗೆದ್ದವರು ವಿಜಯಿ’ ಎಂಬ ನಿಯಮಕ್ಕೆ ಸಿಲುಕಿ ಸೋಲನುಭವಿಸಿದರು.ಮತ್ತೊಂದೆಡೆ ಉತ್ತಮ ಆರಂಭ ಪಡೆದು 8-2 ಅಂಕಗಳ ಮುನ್ನಡೆಯಲ್ಲಿದ್ದ ನಿಶಾ ದಹಿಯಾ ಕಡೆಯ 30 ಸೆಕೆಂಡುಗಳಿ ದ್ದಾಗ ಬಲಭುಜದ ಗಾಯಕ್ಕೆ ತುತ್ತಾಗಿ 10 ಅಂಕ ಬಿಟ್ಟುಕೊಟ್ಟು ಸೋತರು. ಗಾಯದ ಕಾರಣದಿಂದ ನೀರಜ್‌ ಬೆಳ್ಳಿಗೆ ತೃಪ್ತಿಪಡಬೇಕಾಯಿತು.

ಉತ್ತಮ ಪ್ರದರ್ಶನ
ಇಲ್ಲಿಯವರೆಗಿನ ಒಲಿಂಪಿಕ್ಸ್‌ ಗಳನ್ನು ಗಮನಿಸಿದರೆ ಭಾರತದ ಕ್ರೀಡಾಪಟುಗಳು ಈ ಬಾರಿ ಉತ್ತಮ ಪ್ರದರ್ಶನ ತೋರಿದ್ದರು. ಬ್ಯಾಡ್ಮಿಂಟನ್‌ನಲ್ಲಿ ಲಕ್ಷ್ಯ ಸೇನ್‌ ಸೆಮಿಫೈನಲ್‌ಗೇರಿ ಮೊದಲ ಕ್ರೀಡಾಪಟು ಎನಿಸಿಕೊಂಡರೆ, ಟೇಬಲ್‌ ಟೆನಿಸ್‌ನಲ್ಲಿ ವೈಯಕ್ತಿಕವಾಗಿ ಹಾಗೂ ತಂಡವಾಗಿ ಮಹಿಳೆಯರು ಕ್ವಾರ್ಟರ್‌ಫೈನಲ್‌ ಪ್ರವೇಶಿಸಿ ದಾಖಲೆ ಬರೆದರು. ಮೊದಲ ಬಾರಿ ಭಾರತ ಬಿಲ್ಗಾರರು ಸೆಮಿಫೈನಲ್‌ ಪ್ರವೇಶಿಸಿ ಇತಿಹಾಸ ಬರೆದರು.

Advertisement

4ನೇ ಸ್ಥಾನಿಗಳಲ್ಲಿ ಭಾರತ ನಂ. 5
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಹೆಚ್ಚು 4ನೇ ಸ್ಥಾನ ಪಡೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಭಾರತದಿಂದ 117 ಮಂದಿ ಆ್ಯತ್ಲೀಟ್‌ಗಳು 16 ಕ್ರೀಡೆಗಳಲ್ಲಿ ಭಾಗಿಯಾಗಿದ್ದರು. ಇದರಲ್ಲಿ 6 ಮಂದಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಬ್ರಿಟನ್‌ನ 12 ಮಂದಿ 4ನೇ ಸ್ಥಾನ ಪಡೆದುಕೊಂಡಿದ್ದು, 4ನೇ ಸ್ಥಾನ ಪಡೆದುಕೊಂಡ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರಿಟನ್‌ ಮೊದಲ ಸ್ಥಾನದಲ್ಲಿದೆ. ಬ್ರಿಟನ್‌ನ 327 ಸ್ಪರ್ಧಿಗಳು 26 ಕ್ರೀಡೆಗಳಲ್ಲಿ ಭಾಗಿಯಾಗಿದ್ದರು. 9 ಮಂದಿ 4ನೇ ಸ್ಥಾನಿಗಳನ್ನು ಹೊಂದಿರುವ ಇಟಲಿ 2ನೇ ಸ್ಥಾನದಲ್ಲಿದ್ದು, ಇಲ್ಲಿಂದ 402 ಮಂದಿ ಆ್ಯತ್ಲೀಟ್‌ಗಳು 30 ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಕೆನಡಾ 3ನೇ ಸ್ಥಾನದಲ್ಲಿದ್ದು, 7 ಮಂದಿ 4ನೇ ಸ್ಥಾನಿಗಳಾಗಿ ಸ್ಪರ್ಧೆ ಮುಗಿಸಿದ್ದಾರೆ. ಕೆನಡಾದ 315 ಮಂದಿ ಆ್ಯತ್ಲೀಟ್‌ಗಳು 28 ಕ್ರೀಡೆಗಳಲ್ಲಿ ಭಾಗಿಯಾಗಿದ್ದರು. 4ನೇ ಸ್ಥಾನದಲ್ಲಿರುವ ಅತಿಥೇಯ ಫ್ರಾನ್ಸ್‌ನಿಂದ 7 ಮಂದಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಫ್ರಾನ್ಸ್‌ನಿಂದ ಗರಿಷ್ಠ 573 ಸ್ಪರ್ಧಿಗಳು 35 ಕ್ರೀಡೆಗಳಲ್ಲಿ ಭಾಗಿಯಾಗಿದ್ದರು.

ಪ್ಯಾರಿಸ್‌ಗೆ ವಿದಾಯ; ಲಾಸ್‌ ಏಂಜಲೀಸ್‌ ನಿರೀಕ್ಷೆ
ಪ್ಯಾರಿಸ್‌ನಲ್ಲಿ ಆಯೋಜನೆಗೊಂಡಿದ್ದ 33ನೇ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ರವಿವಾರ ರಾತ್ರಿ ತೆರೆ ಬಿದ್ದಿದೆ. ಕ್ರೀಡಾಜಾತ್ರೆ ಮತ್ತೂಮ್ಮೆ ಜಾಗತಿಕ ಕ್ರೀಡಾಪ್ರೇಮಿಗಳನ್ನು ರಂಜಿಸಿದೆ. 17 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ 10,500 ಮಂದಿ ಆ್ಯತ್ಲೀಟ್‌ಗಳು ಭಾಗಿಯಾಗಿದ್ದರು. ಮುಂದಿನ 34ನೇ ಒಲಿಂಪಿಕ್ಸ್‌ 2028ರಲ್ಲಿ ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.