ಪ್ಯಾರಿಸ್: ಅವಳಿ ಕಂಚಿನ ಪದಕ ಗೆದ್ದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ದೇಶದ ಗೌರವವನ್ನು ಎತ್ತಿಹಿಡಿದ ಶೂಟರ್ ಮನು ಭಾಕರ್ ಅವರಿಗೆ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾರತದ ವನಿತಾ ಧ್ವಜಧಾರಿಯ ಗೌರವ ಲಭಿಸಿದೆ. ಸಮಾರೋಪ ಸಮಾರಂಭ ರವಿವಾರ ರಾತ್ರಿ ನಡೆಯಲಿದೆ.
ಮನು ಭಾಕರ್ ಪ್ಯಾರಿಸ್ ಒಲಿಂಪಿಕ್ಸ್ ಸಮಾರೋಪ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗಲಿದ್ದಾರೆ. ಅವರು ಈ ಕೂಟದಲ್ಲಿ ಶ್ರೇಷ್ಠ ಸಾಧನೆಗೈದಿದ್ದು, ಈ ಗೌರವಕ್ಕೆ ಅರ್ಹ ಹಾಗೂ ಅತ್ಯಂತ ಸೂಕ್ತವಾಗಿದ್ದಾರೆ’ ಎಂಬುದಾಗಿ ಐಒಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಮನು ಭಾಕರ್, ಇದಕ್ಕೆ ಅರ್ಹರಾದ ಇನ್ನೂ ಅನೇಕ ಮಂದಿ ನಮ್ಮ ತಂಡದಲ್ಲಿದ್ದರು. ಆದರೆ ಇದು ನನಗೆ ಒಲಿದಿರುವ ಶ್ರೇಷ್ಠ ಗೌರವ ಎಂದು ಭಾವಿಸುತ್ತೇನೆ’ ಎಂಬುದಾಗಿ ಹೇಳಿದರು.
ಆದರೆ ಭಾರತದ ಪುರುಷ ಧ್ವಜಧಾರಿ ಕ್ರೀಡಾಳು ಯಾರೆಂಬುದನ್ನು ಇನ್ನಷ್ಟೇ ಹೆಸರಿಸಬೇಕಿದೆ. ಇಲ್ಲಿ ಲಕ್ಷ್ಯ ಸೇನ್, ನೀರಜ್ ಚೋಪ್ರಾ, ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್, ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಮೊದಲಾದವರ ಹೆಸರು ಕೇಳಿಬರುತ್ತಿದೆ.
10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಮೂಲಕ ಮನು ಭಾಕರ್ ಭಾರತದ ಪದಕ ಖಾತೆ ತೆರೆದಿದ್ದರು. ಬಳಿಕ ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀ. ಏರ್ ಪಿಸ್ತೂಲ್ ಮಿಶ್ರ ಡಬಲ್ಸ್‌ನಲ್ಲೂ ಕಂಚಿಗೆ ಗುರಿ ಇರಿಸಿದ್ದರು.