ಪ್ಯಾರಿಸ್: ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿಯ 50ಕೆ.ಜಿ ವಿಭಾಗದ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಿದ್ದ ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ರನ್ನು 100ರಿಂದ 150 ಗ್ರಾಂ ತೂಕ ಹೆಚ್ಚಿರುವ ಕಾರಣಕ್ಕೆ ಅನರ್ಹಗೊಳಿಸಿದ್ದು ಭಾರತಕ್ಕೆ ಆಘಾತಕಾರಿಯಾಗಿ ಕುಸ್ತಿಯ ಮಹಿಳಾ ವಿಭಾಗದಲ್ಲಿ ಮೊದಲ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವ ಕನಸು ಭಗ್ನಗೊಂಡಿದೆ.
ಈ ನಡುವೆ ನಿರ್ಜಲೀಕರಣದಿಂದ ಬಳಲುತ್ತಿರುವ ವಿನೇಶ್ ರನ್ನು ಪ್ಯಾರಿಸ್ನಲ್ಲಿರುವ ಒಲಿಂಪಿಕ್ಸ್ ಕ್ರೀಡಾ ಗ್ರಾಮದಲ್ಲಿರುವ ಕ್ಲಿನಿಕ್ನಲ್ಲಿ ದಾಖಲಿಸಿರುವ ವಿನೇಶ್ರನ್ನು ಐಒಎ (ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್) ಅಧ್ಯಕ್ಷೆ ಪಿ.ಟಿ. ಉಷಾ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಈ ವೇಳೆ ಮಾತನಾಡಿದ ಐಒಎ ಅಧ್ಯಕ್ಷೆ ಪಿ.ಟಿ. ಉಷಾ ‘ವಿನೇಶ್ ರ ಅನರ್ಹತೆ ಆಘಾತಕಾರಿ. ನಾನು ಸ್ವಲ್ಪ ಸಮಯಕ್ಕೂ ಮೊದಲು ಒಲಿಂಪಿಕ್ ವಿಲೇಜ್ ಪಾಲಿಕ್ಲಿನಿಕ್‌ನಲ್ಲಿ ವಿನೇಶ್ ರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದೆ. ಅವರಿಗೆ ಭಾರತೀಯ ಒಲಿಂಪಿಕ್ ಸಂಸ್ಥೆ, ಭಾರತ ಸರ್ಕಾರ ಮತ್ತು ದೇಶದಿಂದ ಸಂಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದೇನೆ. ನಾವು ವಿನೇಶ್‌ಗೆ ಎಲ್ಲಾ ರೀತಿಯ ವೈದ್ಯಕೀಯ ಮತ್ತು ಭಾವನಾತ್ಮಕ ಬೆಂಬಲ ನೀಡುತ್ತಿದ್ದೇವೆ’ ಎಂದು ಹೇಳಿದ್ದಾರೆ.
‘ವಿನೇಶ್ ಫೋಗಟ್ ಅನರ್ಹತೆ ವಿರುದ್ಧ ಭಾರತೀಯ ಒಲಿಂಪಿಕ್ ಸಂಸ್ಥೆ ನಿರಂತರವಾಗಿ ಧ್ವನಿ ಎತ್ತುತ್ತಿದೆ. ಡಬ್ಲ್ಯುಎಫ್‌ಐ ಕೂಡ ಒಲಿಂಪಿಕ್ ಸಮಿತಿಗೆ ಪತ್ರ ಬರೆದು ವಿನೇಶ್ ರನ್ನು ಹೊರಗಿಡುವುದಕ್ಕೆ ವಿರೋಧ ವ್ಯಕ್ತಪಡಿಸಿದೆ ಎಂದಿದ್ದಾರೆ. ವಿನೇಶ್ ಅವರ ವೈದ್ಯಕೀಯ ತಪಾಸಣೆ ನಡೆಸಿದ್ದು, ಸದ್ಯ ಆಕೆ ಆರೋಗ್ಯವಾಗಿದ್ದಾರೆ. ವಿನೇಶ್ ದೈಹಿಕವಾಗಿ ಚೆನ್ನಾಗಿದ್ದಾರೆ ಆದರೆ ಮಾನಸಿಕವಾಗಿ ಅವರು ತುಂಬಾ ಕುಗ್ಗಿದ್ದಾರೆ ಎಂದರು.
ತೂಕ ಹೆಚ್ಚಳದ ಬಗ್ಗೆ ಮಾಹಿತಿ ನೀಡಿರುವ ವೈದ್ಯ ಪರ್ದಿವಾಲಾ, ‘ಕೆಲವೊಮ್ಮೆ ನಿರಂತರ ಪಂದ್ಯಗಳಿಂದ ಹೆಚ್ಚು ನೀರು ಕುಡಿಯಬೇಕಾಗುತ್ತದೆ, ಅಂತಹ ಪರಿಸ್ಥಿತಿಯಲ್ಲಿ ತೂಕ ಹೆಚ್ಚಾಗುತ್ತದೆ. ರಾತ್ರಿ ವಿನೇಶ್‌ನ ತೂಕ ಹೆಚ್ಚಾದಾಗ ಅದನ್ನು ಕಡಿಮೆ ಮಾಡಲು ವೈದ್ಯಕೀಯ ತಂಡ ಅನೇಕ ಪ್ರಯತ್ನಗಳ ಮಾಡಿತು. ಅವರ ಕೂದಲು ಕೂಡ ಕತ್ತರಿಸಲಾಯಿತು. ಆದರೆ ಬೆಳಿಗ್ಗೆ 7 ಗಂಟೆಗೆ ಅವರನ್ನು ತೂಕ ಮಾಡಿದಾಗ, ಅವರು ನಿಗದಿಗಿಂತ 100 ಗ್ರಾಂ ಹೆಚ್ಚು ತೂಕ ಇರುವುದು ಕಂಡು ಬಂತು ಎಂದಿದ್ದಾರೆ.