ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ ನ ಗುರುವಾರ ರಾತ್ರಿ ನಡೆದ ಬ್ಯಾಡ್ಮಿಂಟನ್ ವನಿತಾ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಪಿ.ವಿ. ಸಿಂಧು ಅವರು ಚೀನದ ಹಿ ಬಿಂಗ್ ಜಿಯಾವೊ ವಿರುದ್ಧ ಸೋಲು ಅನುಭವಿಸಿ ಅಭಿಯಾನ ಅಂತ್ಯಗೊಳಿಸಿದ್ದಾರೆ. ಸಿಂಧು ಪದಕ ಗೆಲ್ಲುವ ನಿರೀಕ್ಷೆ ಇರಿಸಲಾಗಿತ್ತು.
ಈಗಾಗಲೇ ಎರಡು ಒಲಿಂಪಿಕ್ಸ್ ಪದಕಗಳನ್ನು ಗೆದ್ದು, ಹ್ಯಾಟ್ರಿಕ್‌ನತ್ತ ದೃಷ್ಟಿ ನೆಟ್ಟಿದ್ದ 13ನೇ ರ್‍ಯಾಂಕಿಂಗ್‌ನ ಸಿಂಧು ಅವರಿಗೆ ಚೀನದ ಆಟಗಾರ್ತಿ ಶಾಕ್ ನೀಡಿದರು.
ಮೊದಲ ಸುತ್ತಿನಲ್ಲಿ ತೀವ್ರ ಪೈಪೋಟಿ ನೀಡಿದ್ದ ಸಿಂಧು ಜಿದ್ದಾ ಜಿದ್ದಿನಲ್ಲಿ ಎರಡನೇ ಸುತ್ತಿನಲ್ಲಿ ಕೈಸೋತರು. 21-19, 21-14 ಸೆಟ್ ಗಳಿಂದ ಸೋಲು ಅನುಭವಿಸಿದರು.
ಕುತೂಹಲಕಾರಿಯಾಗಿ, ಪಿವಿ ಸಿಂಧು ಅವರು ಟೋಕಿಯೊ 2020 ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕವನ್ನು ಗೆಲ್ಲಲು ಹಿ ಬಿಂಗ್ ಜಿಯಾವೊ ಅವರನ್ನು ಸೋಲಿಸಿದ್ದರು. ಆ ಸೋಲಿನ ಸೇಡು ಈಗ ತೀರಿಸಿಕೊಂಡಿದ್ದಾರೆ.
1992 ರಲ್ಲಿ ಬಾರ್ಸಿಲೋನಾದಲ್ಲಿ ತನ್ನ ಒಲಿಂಪಿಕ್ಸ್‌ಗೆ ಬ್ಯಾಡ್ಮಿಂಟನ್ ಸೇರ್ಪಡೆ ಮಾಡಿದ ನಂತರ ಭಾರತ ಮೂರು ಪದಕಗಳನ್ನು ಗೆದ್ದಿದೆ, ಸಿಂಧು ರಿಯೊ 2016 ರಲ್ಲಿ ಬೆಳ್ಳಿ ಮತ್ತು ಟೋಕಿಯೊ 2020 ರಲ್ಲಿ ಕಂಚು ಗೆದ್ದಿದ್ದಾರೆ. ಸೈನಾ ನೆಹ್ವಾಲ್ ಲಂಡನ್ 2012 ರಲ್ಲಿ ಕಂಚಿನ ಪದಕ ಗೆದ್ದಿದ್ದರು.