ಪ್ರೇಮದೂರಿನಲ್ಲಿ ಕ್ರೀಡಾನ್ಮೋದ ಉತ್ತುಂಗದಲ್ಲಿದೆ. ವಿಶ್ವದ ಮೂಲೆ ಮೂಲೆಯಿಂದ ಸಾವಿರಾರು ಕ್ರೀಡಾಪಟುಗಳು ಪ್ಯಾರಿಸ್ ನಲ್ಲಿ ಒಲಿಂಪಿಕ್ಸ್ ಗಾಗಿ (Paris Olympics) ಸೇರಿದ್ದಾರೆ. ಕ್ರೀಡಾ ಪ್ರಪಂಚದ ಅತಿ ದೊಡ್ಡ ಹಬ್ಬ ಒಲಿಂಪಿಕ್ಸ್ ನಿಂದಾಗಿ ಫ್ರಾನ್ಸ್ ನ ಪ್ಯಾರಿಸ್ ಸಿಂಗಾರಗೊಂಡಿದೆ. ಲಕ್ಷಾಂತರ ಕ್ರೀಡಾಸಕ್ತರು, ಪ್ರವಾಸಿಗರು ಪ್ಯಾರಿಸ್ ವಿಮಾನ ಏರಿದ್ದಾರೆ. ಕ್ರೀಡಾಪಟುಗಳಿಗಾಗಿ ಕ್ರೀಡಾಗ್ರಾಮ ನಿರ್ಮಿಸಲಾಗಿದ್ದು, ಅದರಲ್ಲಿ 14,250 ಮಂದಿ ವಾಸವಿದ್ದಾರೆ. ಅತಿ ದೊಡ್ಡ ಡೈನಿಂಗ್ ಹಾಲ್ ಸೇರಿದಂತೆ ಇಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಅಂದಹಾಗೆ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಬರೀ ಕ್ರೀಡಾಪಟುಗಳಿಗೆ ಬರೋಬ್ಬರಿ 3 ಲಕ್ಷ ಕಾಂಡೋಮ್ ಗಳನ್ನು (Condoms) ವಿತರಿಸಲಾಗಿದೆ.
ಹೌದು, ಸಿಟಿ ಆಫ್ ಲವ್ (City of Love) ಎಂದೇ ಹೆಸರಾದ ಪ್ಯಾರಿಸ್ ನಲ್ಲಿ ಕ್ರೀಡೋನ್ಮಾದದ ಜತೆಗೆ ಪ್ರೇಮೋನ್ಮಾದವೂ ಹರಿಯುತ್ತಿದೆ. ಕಳೆದ ಒಲಿಂಪಿಕ್ ನಲ್ಲಿ ಕೋವಿಡ್ ಕಾರಣದಿಂದ ಕೇವಲ ಅಪ್ಪುಗೆಗೆ ಅಷ್ಟೇ ಸೀಮಿತವಾಗಿದ್ದ ಪ್ರೇಮ ವಿನಿಮಯಕ್ಕೆ ಇದೀಗ ಯಾವುದೇ ಅಡೆತಡೆಯಿಲ್ಲ. ಇದೇ ಕಾರಣಕ್ಕೆ ಇಷ್ಟೊಂದು ಕಾಂಡೋಮ್ ಗಳ ವಿತರಣೆ.
ಕೋವಿಡ್ ಕಾರಣದಿಂದ 2021ರಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬಹಳಷ್ಟು ನಿರ್ಬಂಧಗಳನ್ನು ಹೇರಲಾಗಿತ್ತು. ಕ್ರೀಡಾಪಟುಗಳ ರೂಮ್ ಗಳಲ್ಲಿ ಕಾರ್ಡ್ ಬೋರ್ಡ್ ನಿಂದ ಮಾಡಿದ ಮಂಚಗಳನ್ನು ನೀಡಲಾಗಿತ್ತು. ಹೆಚ್ಚು ಒತ್ತಡ ಹಾಕಿದರೆ ಮುರಿಯುವಂತಹ ಮಂಚಗಳಿವು! ಈ ಎಲ್ಲಾ ಕಾರಣಗಳಿಂದ ಆಟಗಾರರಿಗೆ ಅದು ಭಿನ್ನ ಒಲಿಂಪಿಕ್ಸ್ ಅನುಭವವಾಗಿತ್ತು. ಆದರೆ ಈಗ ಕೋವಿಡ್ ಛಾಯೆಯಿಲ್ಲ. ಎಲ್ಲವೂ ಸರಿಯಾಗಿದೆ. ಒಂದು ವರದಿಯ ಪ್ರಕಾರ ಪ್ರತಿ ಅಥ್ಲೀಟ್ ಗೆ ಪ್ರತಿ ದಿನ ಎರಡು ಕಾಂಡೋಮ್ ಗಳಂತೆ ನೀಡಲಾಗುತ್ತಿದೆ.
ಕಳೆದ ಹಲವು ಒಲಿಂಪಿಕ್ ಗಳಿಂದ ಕ್ರೀಡಾಗ್ರಾಮವು ಪ್ರೇಮೋನ್ಮಾದದ ತಾಣವಾಗಿಯೂ ಹೆಸರು ಪಡೆದಿದೆ. ಇಲ್ಲಿ ಕ್ರೀಡಾಪಟುಗಳ ಲೈಂಗಿಕ ಆಸಕ್ತಿ ಹೆಚ್ಚುವುದು ಸಾಮಾನ್ಯ ಎಂಬಂತಾಗಿದೆ.
ಮಾಜಿ ಒಲಿಂಪಿಯನ್ ಒಬ್ಬರು ಕ್ರೀಡಾಳುಗಳು ಏಕೆ ಹೆಚ್ಚು ಲೈಂಗಿಕ ಆಸಕ್ತಿ ಹೊಂದಿರುತ್ತಾರೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. 2021ರ ಜುಲೈನಲ್ಲಿ ಮಾಜಿ ಲಾಂಗ್ ಜಂಪ್ ಪಟು ಸುಸೆನ್ ಟೈಡ್ಟ್ಕೆ ಅವರು ಸಂದರ್ಶನವೊಂದರಲ್ಲಿ ಮಾತನಾಡಿ, ಒಲಿಂಪಿಕ್ಸ್ ನಲ್ಲಿ ಲೈಂಗಿಕತೆ ಕೆಲವರಿಗೆ ‘ಅನಿವಾರ್ಯ’ ಎಂದು ಹೇಳಿದ್ದರು.
ಆಟಗಾರರು ಕೇವಲ ದೈಹಿಕ ಆಕರ್ಷಣೆಯಿಂದಾಗಿ ಅಲ್ಲ. ಸ್ಪರ್ಧೆ ಮತ್ತು ಪದಕಗಳನ್ನು ಗೆಲ್ಲುವ ಒತ್ತಡ ಮತ್ತು ರೋಮಾಂಚನದ ಕಾರಣದಿಂದ ಅಥ್ಲೀಟ್ ಗಳ ದೇಹದಲ್ಲಿ ಹಾರ್ಮೋನ್ ಗಳು ಮತ್ತು ಎಂಡಾರ್ಫಿನ್ ಗಳ ಪ್ರಮಾಣ ತೀವ್ರ ಹೆಚ್ಚುತ್ತದೆ. ಕ್ರೀಡಾಪಟುಗಳು ಒಲಿಂಪಿಕ್ಸ್ ನಲ್ಲಿ ತಮ್ಮ ದೈಹಿಕ ಸಾಮರ್ಥ್ಯದ ಉತ್ತುಂಗದಲ್ಲಿರುತ್ತಾರೆ. ಸ್ಪರ್ಧೆಯು ಮುಗಿದ ನಂತರ, ಅವರು ತಮ್ಮ ಶಕ್ತಿಯನ್ನು ಬಿಡುಗಡೆ ಮಾಡಲು ಬಯಸುತ್ತಾರೆ ಎನ್ನುತ್ತಾರೆ ಸುಸೆನ್.
ತಮ್ಮ ವೃತ್ತಿಜೀವನದ ಬಗ್ಗೆ ಮಾತನಾಡಿದ ಅವರು, ಯಾವುದೇ ಸ್ಪರ್ಧೆಗೆ ಮೊದಲು ಲೈಂಗಿಕ ಕ್ರಿಯೆ ಒಳ್ಳೆಯದಲ್ಲ ಎಂದು ಕೋಚ್ ಹೇಳುತ್ತಿದ್ದರು. ಆದರೆ ಪಂದ್ಯ ಮುಗಿದ ಬಳಿಕ ತುಂಬಾ ಮಂದಿ ಲೈಂಗಿಕ ಕ್ರಿಯೆಯ ಮೊರೆ ಹೋಗುತ್ತಿದ್ದರು. ಬೆಳಗಿನ ಜಾವದವರೆಗೂ ಇದು ಮುಂದುವರಿಯುತ್ತಿತ್ತು ಎನ್ನುತ್ತಾರೆ ಸುಸೆನ್.
80ರ ದಶಕದ ಬಳಿಕ ಒಲಿಂಪಿಕ್ಸ್ ನಲ್ಲಿ ಮೊದಲ ಬಾರಿಗೆ ಕಾಂಡೋಮ್ ಗಳನ್ನು ನೀಡಲು ಪ್ರಾರಂಭಿಸಲಾಯಿತು. ಕೆನಡಾದ ಆಲ್ಬರ್ಟಾದ ಕ್ಯಾಲ್ಗರಿಯು 1988 ರ ಚಳಿಗಾಲದ ಒಲಂಪಿಕ್ಸ್ ಆಯೋಜಿಸಲು ತಯಾರಿ ನಡೆಸುತ್ತಿದ್ದ ಸಮಯದಲ್ಲಿ, ಏಡ್ಸ್ ಪ್ರಪಂಚದಾದ್ಯಂತ ಉಲ್ಬಣಗೊಂಡಿತ್ತು. ಸಾರ್ವಜನಿಕ ಆರೋಗ್ಯ ತಜ್ಞರು ಕ್ರೀಡಾಪಟುಗಳಿಗೆ ಉಚಿತ ಕಾಂಡೋಮ್ ಗಳನ್ನು ಪೂರೈಸಲು ಒಲಿಂಪಿಕ್ಸ್ ಸಂಘಟಕರಿಗೆ ಸಲಹೆ ನೀಡಿದ್ದರು. ಹೀಗಾಗಿ ಅವುಗಳನ್ನು ಒಲಿಂಪಿಕ್ ವಿಲೇಜ್ ನಲ್ಲಿರುವ ಫಾರ್ಮಸಿಯಲ್ಲಿ ಸಂಗ್ರಹಿಸಲಾಗಿತ್ತು. ಆದರೆ ಕ್ರೀಡಾಳುಗಳು ಅಲ್ಲಿ ಹೋಗಿ ಕಾಂಡೋಮ್ ಗಳನ್ನು ಕೇಳಿ ಪಡೆಯಬೇಕಿತ್ತು.
ನಂತರದ ಒಲಂಪಿಕ್ ಸಂಘಟಕರು ಕಾಂಡೋಮ್ ಗಳ ಸಂಖ್ಯೆಯನ್ನು ಹೆಚ್ಚಿಸಿದರು. ಆಲ್ಬರ್ಟ್‌ವಿಲ್ಲೆ 1992 ರ ಚಳಿಗಾಲದ ಒಲಿಂಪಿಕ್ಸ್ ಗೆ ಆತಿಥ್ಯ ವಹಿಸಿದಾಗ 36,000 ಕಾಂಡೋಮ್ ವಿತರಿಸಲಾಗಿತ್ತು. ಕ್ರೀಡಾಪಟುಗಳಿಗೆ ಉಚಿತವಾಗಿ ಮತ್ತು ಇತರ ಸಿಬ್ಬಂದಿಗೆ ಪ್ರತಿ ಪ್ಯಾಕ್ ಗೆ $2 ನಂತೆ ನೀಡಲಾಯಿತು; ಈ ಕಾಂಡೋಮ್ ಗಳು ಒಲಿಂಪಿಕ್ ರಿಂಗ್ ನ ನೀಲಿ, ಹಳದಿ, ಕಪ್ಪು, ಹಸಿರು ಮತ್ತು ಕೆಂಪು ಬಣ್ಣಗಳದ್ದಾಗಿತ್ತು. ಆ ವರ್ಷದ ನಂತರ ನಡೆದ ಬಾರ್ಸಿಲೋನಾದ ಬೇಸಿಗೆ ಒಲಿಂಪಿಕ್ಸ್‌ನಲ್ಲಿ, 60,000 ಕಾಂಡೋಮ್ ಗಳು ವಿಲೇಜ್ ನ ಆನ್-ಸೈಟ್ ಡಿಸ್ಕೋಥೆಕ್ ನಲ್ಲಿ ಮಾರಾಟ ಯಂತ್ರಗಳಿಂದ ಖರೀದಿಸಲು ಆರಂಭದಲ್ಲಿ ಲಭ್ಯವಿತ್ತು. ಆದರೆ ಒಂದು ವರದಿಯ ಪ್ರಕಾರ, ಕ್ರೀಡಾಪಟುಗಳು ಈ ಬಗ್ಗೆ ದೂರಿದ ನಂತರ ಅಧಿಕಾರಿಗಳು ಅವುಗಳನ್ನು ಉಚಿತವಾಗಿ ನೀಡಿದ್ದರು.
2016ರಲ್ಲಿ ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಬರೋಬ್ಬರಿ 450,000 ಕಾಂಡೋಮ್ ಗಳನ್ನು ವಿತರಣೆ ಮಾಡಲಾಗಿತ್ತು. ಇದು ದಾಖಲೆ. ಅಲ್ಲದೆ ಮೊದಲ ಬಾರಿಗೆ ಒಂದು ಲಕ್ಷ ಮಹಿಳೆಯರ ಕಾಂಡೋಮ್ ಗಳನ್ನು ಹಂಚಲಾಗಿತ್ತು.
ಒತ್ತಡ ಹೊರಹಾಕುವ ವಿಧಾನ
ಲೈಂಗಿಕ ತಜ್ಞೆ ಮತ್ತು ಸಂಬಂಧ ಚಿಕಿತ್ಸಕಿ ಟ್ಯಾಮಿ ನೆಲ್ಸನ್ ಪ್ರಕಾರ, ಸಿರೊಟೋನಿನ್, ಎಪಿನ್ಫ್ರಿನ್ ಮತ್ತು ಡೋಪಮೈನ್ ನಂತಹ ಹಾರ್ಮೋನುಗಳು ಲೈಂಗಿಕ ಪ್ರಚೋದನೆಯ ಮೇಲೆ ಪ್ರಭಾವ ಬೀರುತ್ತವೆ.
ಸಂತೋಷ ಅಥವಾ ಸಾಧನೆ ಆನಂದವನ್ನು ಅನುಭವಿಸಿದಾಗ ಸಿರೊಟೋನಿನ್ ಬಿಡುಗಡೆಯಾಗುತ್ತದೆ, ಆದರೆ ಡೋಪಮೈನ್ ಅನ್ನು ‘ಫೀಲ್-ಗುಡ್’ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಇದು ನಿಮ್ಮ ಮನಸ್ಸಿನ ಪ್ರತಿಫಲ ವ್ಯವಸ್ಥೆಯಂತೆಯೇ ಇರುತ್ತದೆ ಎನ್ನುತ್ತಾರೆ ಟ್ಯಾಮಿ ನೆಲ್ಸನ್.
ಕೀರ್ತನ್ ಶೆಟ್ಟಿ ಬೋಳ