ಪ್ಯಾರಿಸ್ : ಭಾರತ ಮತ್ತೊಂದು ಕಂಚಿನ ಪದಕದ ನಿರೀಕ್ಷೆ ಇರಿಸಿದ್ದ ಸೋಮವಾರ(ಆಗಸ್ಟ್5) ನಡೆದ ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ನಲ್ಲಿ ಭಾರತದ ಲಕ್ಷ್ಯ ಸೆನ್ ಅವರು ಮಲೇಷ್ಯಾದ ಏಳನೇ ಶ್ರೇಯಾಂಕದ ಝಿ ಜಿಯಾ ಲೀ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಮೊದಲ ಸೆಟ್ ಮುನ್ನಡೆ ಸಾಧಿಸಿದ್ದ ಲಕ್ಷ್ಯ ಸೇನ್ ಅವರಿಗೆ ಬಲ ಗೈ ಗಾಯ ಸೋಲಿಗೆ ಪ್ರಮುಖ ಕಾರಣವಾಯಿತು.
ಸೆಮಿಯಲ್ಲಿ ಸೋತಿದ್ದ ಸೇನ್ ಕಂಚು ಖಂಡಿತ ಗೆಲ್ಲುತ್ತಾರೆ ಎನ್ನುವ ನಿರೀಕ್ಷೆ ಹುಸಿಯಾಗಿ ಭಾರೀ ಆಘಾತ ಎದುರಾಯಿತು. ಲಕ್ಷ್ಯ ಸೇನ್ ಮೊದಲ ಗೇಮ್ ಅನ್ನು 21-13 ರಿಂದ ಗೆದ್ದರು ಆದರೆ ಎರಡನೇ ಗೇಮ್ ಅನ್ನು 21-16 ರಲ್ಲಿ ಕಳೆದುಕೊಂಡರು. ಮೂರನೇ ಸೆಟ್ ನಲ್ಲಿ ಪ್ರತಿ ರೋಧ ತೋರಲು ಸಾಧ್ಯವಾಗದೆ(21-11) ನೋವಿನಲ್ಲೇ ಕಂಚಿನ ಪದಕದ ಆಸೆ ಕೈಬಿಟ್ಟರು.
ಲಕ್ಷ್ಯ ಸೇನ್ ಸೈಡ್‌ಲೈನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದುದರಿಂದ ಪಂದ್ಯ ವಿಳಂಬವಾಯಿತು. ಒಂದಾದ ಮೇಲೆ ಒಂದರಂತೆ ಬ್ಯಾಂಡೇಜ್ ಗಳನ್ನು ಬಲಗೈಗೆ ಸುತ್ತಿರುವುದು ಅವರಿಗೆ ತೀವ್ರ ಸೆಳೆತವಿರುದು ಸ್ಪಷ್ಟವಾಗಿ ಗೋಚರವಾಯಿತು.
ಇದು 22 ರ ಹರೆಯದ ಲಕ್ಷ್ಯ ಸೇನ್ ಅವರ ಮೊದಲ ಒಲಿಂಪಿಕ್ಸ್ ಆಗಿದ್ದು ದೇಶದ ಎರಡು ದೊಡ್ಡ ಬ್ಯಾಡ್ಮಿಂಟನ್ ಭರವಸೆಗಳು ವಿಫಲವಾದ ಪಂದ್ಯಾವಳಿಯಲ್ಲಿ ಅವರು ಭಾರತದ ಪ್ರಕಾಶಮಾನವಾದ ಭರವಸೆಯ ಕಿರಣವಾಗಿ ಗೋಚರಿಸಿದ್ದಾರೆ.
ಇಂದು ಪದಕ ಗೆದ್ದಿದ್ದರೆ ಒಲಿಂಪಿಕ್ ಪದಕ ಗೆದ್ದ ಮೊದಲ ಭಾರತೀಯ ಪುರುಷ ಷಟ್ಲರ್ ಎಂಬ ದಾಖಲೆ ಬರೆಯುತ್ತಿದ್ದರು.ರಿಯೊ ಮತ್ತು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಿವಿ ಸಿಂಧು ಬೆಳ್ಳಿ ಮತ್ತು ಕಂಚು ಗೆದ್ದಿದ್ದರು. ಲಂಡನ್ ಗೇಮ್ಸ್‌ನಲ್ಲಿ ಸೈನಾ ನೆಹ್ವಾಲ್ ಕಂಚಿನ ಪದಕ ಗೆದ್ದಿದ್ದರು. ಭಾರತ ಬ್ಯಾಡ್ಮಿಂಟನ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕವನ್ನು ಇದುವರೆಗೆ ಗೆದ್ದಿಲ್ಲ.