Advertisement

Paris Olympics 2024: ಭಾರತದ 117 ಕ್ರೀಡಾಳುಗಳ ಯಾದಿ ಅಂತಿಮ

03:32 PM Jul 19, 2024 | Team Udayavani |

ಹೊಸದಿಲ್ಲಿ: ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಪ್ರತಿಷ್ಠಿತ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿರುವ ಭಾರತದ ಕ್ರೀಡಾಳುಗಳ ಪಟ್ಟಿಯನ್ನು “ಭಾರತೀಯ ಒಲಿಂಪಿಕ್‌ ಸಂಸ್ಥೆ’ (ಐಒಎ) ಬಿಡುಗಡೆ ಮಾಡಿದೆ. ಇದರಲ್ಲಿ 117 ಕ್ರೀಡಾಪಟುಗಳಿದ್ದಾರೆ. ಜತೆಗೆ 140 ಮಂದಿ ಅಧಿಕಾರಿಗಳು ಹಾಗೂ ಸಹಾಯಕ ಸಿಬಂದಿ ಇದ್ದಾರೆ. ಇವರಲ್ಲಿ 72 ಮಂದಿಯ ವೆಚ್ಚವನ್ನು ಸರಕಾರವೇ ಭರಿಸಲಿದೆ.

Advertisement

ವನಿತಾ ಶಾಟ್‌ಪುಟರ್‌ ಅಭಾ ಖತುವಾ ಈ ಯಾದಿಯಲ್ಲಿ ಕಾಣಿಸಿಕೊಂಡಿಲ್ಲ. ಅವರು ವಿಶ್ವ ರ್‍ಯಾಂಕಿಂಗ್‌ ಕೋಟಾದಲ್ಲಿ ಆಯ್ಕೆ ಯಾಗಿದ್ದರು. ಆದರೆ ಅವರನ್ನು ಕೈಬಿಟ್ಟ ಬಗ್ಗೆ ಯಾವುದೇ ಕಾರಣ ಅಥವಾ ವಿವರಣೆ ನೀಡಲಾಗಿಲ್ಲ. ಕೆಲವು ದಿನಗಳ ಹಿಂದೆ “ವಿಶ್ವ ಆ್ಯತ್ಲೆಟಿಕ್ಸ್‌’ ಪ್ರಕಟಿ ಸಿದ ಭಾರತೀಯ ಕ್ರೀಡಾಪಟುಗಳ ಯಾದಿ ಯಲ್ಲೂ ಅಭಾ ಖತುವಾ ಹೆಸರಿರಲಿಲ್ಲ.

ಆ್ಯತ್ಲೆಟಿಕ್ಸ್‌ ದೊಡ್ಡ ತಂಡ
ಅಭಾ ಖತುವಾ ಅವರ ಗೈರಿನ ಹೊರ ತಾಗಿಯೂ ಆ್ಯತ್ಲೆಟಿಕ್ಸ್‌ನಲ್ಲಿ ಅತ್ಯಧಿಕ 29 ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸ ಲಿದ್ದಾರೆ. ಇವರಲ್ಲಿ 18 ಪುರುಷರ ಹಾಗೂ 11 ಮಹಿಳೆಯರಿದ್ದಾರೆ. ಅನಂತರದ ಸ್ಥಾನ ಶೂಟಿಂಗ್‌ಗೆ ಸಲ್ಲುತ್ತದೆ. ಇಲ್ಲಿ ಒಟ್ಟು 21 ಮಂದಿ ಸ್ಥಾನ ಪಡೆದಿದ್ದಾರೆ. 10 ಮಂದಿ ಪುರುಷರು ಹಾಗೂ 11 ಮಂದಿ ವನಿತಾ ಸ್ಪರ್ಧಿಗಳನ್ನು ಇದು ಒಳಗೊಂಡಿದೆ. ಹಾಕಿ ತಂಡದಲ್ಲಿ 19 ಆಟಗಾರರಿದ್ದಾರೆ.

8 ಆಟಗಾರರನ್ನು ಒಳಗೊಂಡಿರುವ ಟೇಬಲ್‌ ಟೆನಿಸ್‌ 4ನೇ ಸ್ಥಾನದಲ್ಲಿದೆ. ಬ್ಯಾಡ್ಮಿಂಟನ್‌ ನಲ್ಲಿ 7 ಮಂದಿ ಕಣಕ್ಕಿಳಿಯ ಲಿದ್ದಾರೆ. ಎರಡು ಬಾರಿ ಒಲಿಂಪಿಕ್‌ ಪದಕ ಗೆದ್ದ ಪಿ.ವಿ. ಸಿಂಧು ಅವರನ್ನು ಇದು ಒಳಗೊಂಡಿದೆ. ಉಳಿದಂತೆ ಕುಸ್ತಿ, ಆರ್ಚರಿ ಮತ್ತು ಬಾಕ್ಸಿಂಗ್‌ನಲ್ಲಿ ತಲಾ 6 ಮಂದಿ ಸ್ಪರ್ಧಿಸ ಲಿದ್ದಾರೆ. ಗಾಲ್ಫ್ನಲ್ಲಿ 4, ಟೆನಿಸ್‌ನಲ್ಲಿ 3, ಈಜು ಮತ್ತು ಹಾಯಿದೋಣಿಯಲ್ಲಿ ತಲಾ ಇಬ್ಬರಿದ್ದಾರೆ. ಈಕ್ವೇಸ್ಟ್ರಿಯನ್‌, ಜೂಡೋ, ರೋಯಿಂಗ್‌ ಮತ್ತು ವೇಟ್‌ಲಿಫ್ಟಿಂಗ್‌ನಲ್ಲಿ ಒಬ್ಬರಷ್ಟೇ ಇದ್ದಾರೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಚಾನು ಪ್ಯಾರಿಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಏಕೈಕ ವೇಟ್‌ಲಿಫ್ಟರ್‌ ಆಗಿದ್ದಾರೆ.

ಶೂಟಿಂಗ್‌ ತಂಡಕ್ಕೆ ಅತ್ಯಧಿಕ 18 ಮಂದಿ ಸಹಾಯಕ ಸಿಬಂದಿಯನ್ನು ಒದಗಿಸಲಾಗಿದೆ. ಉಳಿದಂತೆ ಕುಸ್ತಿಗೆ 12, ಬಾಕ್ಸಿಂಗ್‌ಗೆ 11, ಹಾಕಿಗೆ 10, ಟಿಟಿ ಮತ್ತು ಬ್ಯಾಡ್ಮಿಂಟನ್‌ಗೆ 9, ಗಾಲ್ಫ್ಗೆ 5, ಆರ್ಚರಿ, ಹಾಯಿದೋಣಿ ಮತ್ತು ವೇಟ್‌ಲಿಫ್ಟಿಂಗ್‌ಗೆ
4, ಟೆನಿಸ್‌ಗೆ 3, ಈಜಿಗೆ 2 ಹಾಗೂ ಜೂಡೋಗೆ ಒಬ್ಬರು ಸಹಾಯಕ ಸಿಬಂದಿ ಇರಲಿದ್ದಾರೆ.

Advertisement

ಟೋಕಿಯೋದಲ್ಲಿ ದಾಖಲೆ
ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ 119 ಮಂದಿ ಕ್ರೀಡಾಪಟುಗಳು ಪ್ರತಿನಿಧಿಸಿದ್ದರು. ಒಲಿಂಪಿಕ್ಸ್‌ ಇತಿಹಾಸ ದಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ಹೆಗ್ಗಳಿಕೆ ಭಾರತದ್ದಾಗಿತ್ತು. ಅಂದು ಭಾರತ ಒಟ್ಟು 7 ಪದಕ ಗೆದ್ದಿತ್ತು.

ನದಿ ತೀರದಲ್ಲಿ ಒಲಿಂಪಿಕ್ಸ್‌ ಉದ್ಘಾಟನೆ!
ಸಾಮಾನ್ಯವಾಗಿ ಪ್ರಧಾನ ಸ್ಟೇಡಿಯಂ ನಲ್ಲಿ ಒಲಿಂಪಿಕ್ಸ್‌ ಪಂದ್ಯಾವಳಿ ರಂಗು ರಂಗಿನ ಆರಂಭ ಪಡೆಯುವುದು ಸಂಪ್ರದಾಯ. ಆದರೆ ಪ್ಯಾರಿಸ್‌ ಇದಕ್ಕೆ ಹೊರತಾಗಿದೆ. ಈ ಮಹೋನ್ನತ ಕ್ರೀಡಾಕೂಟದ ಉದ್ಘಾಟನ ಸಮಾರಂಭ ನಡೆಯುವುದು ನದಿ ತೀರದಲ್ಲಿ!

ಪ್ಯಾರಿಸ್‌ನಲ್ಲಿ ಹರಿಯುವ “ಸೀನ್‌’ ನದಿಯ ತೀರದಲ್ಲಿ ಆರಂಭ ಗೊಳ್ಳ ಲಿರುವ ಈ ರಂಗಾರಂಗ್‌ ಸಮಾರಂಭ ಐತಿಹಾಸಿಕ ಐಫೆಲ್‌ ಟವರ್‌ ವಠಾರದಲ್ಲಿ ಕೊನೆಗೊಳ್ಳಲಿದೆ. ಇದು ಕ್ರಮಿಸುವ ಹಾದಿ ಸುಮಾರು 4 ಕಿ.ಮೀ. ಸೀನ್‌ ನದಿ ತೀರದಲ್ಲಿ ನಿಂತು 3 ಲಕ್ಷದಷ್ಟು ವೀಕ್ಷಕರಿಗೆ ಈ ಸಮಾರಂಭವನ್ನು ಕಣ್ತುಂಬಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಭಾರತೀಯ ಕಾಲಮಾನದ ಪ್ರಕಾರ ಜು. 26ರ ರಾತ್ರಿ 11 ಗಂಟೆಗೆ ಉದ್ಘಾಟನ ಸಮಾರಂಭ ಆರಂಭಗೊಳ್ಳಲಿದೆ.

ಶತಮಾನದ ಬಳಿಕ ಪ್ಯಾರಿಸ್‌
ಇದು ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯ ಲಿರುವ 3ನೇ ಒಲಿಂಪಿಕ್ಸ್‌. ಬರೋಬ್ಬರಿ 100 ವರ್ಷಗಳ ಬಳಿಕ ಇಲ್ಲಿ ಮನುಕುಲದ ಮಹೋನ್ನತ ಕ್ರೀಡಾಕೂಟ ನಡೆಯಲಿದೆ. ಕೊನೆಯ ಸಲ ಪ್ಯಾರಿಸ್‌ ಒಲಿಂಪಿಕ್ಸ್‌ ಆತಿಥ್ಯ ವಹಿಸಿದ್ದು 1924ರಲ್ಲಿ. ಇಲ್ಲಿ ಮೊದಲ ಒಲಿಂಪಿಕ್ಸ್‌ 1900ರಲ್ಲಿ ನಡೆದಿತ್ತು.

ಲಂಡನ್‌ ಬಳಿಕ ಅತ್ಯಧಿಕ 3 ಒಲಿಂಪಿಕ್‌ ಕ್ರೀಡಾಕೂಟವನ್ನು ನಡೆಸಿಕೊಟ್ಟ ಹೆಗ್ಗಳಿಕೆ ಪ್ಯಾರಿಸ್‌ಗೆ ಸಲ್ಲುತ್ತದೆ. ಲಂಡನ್‌ 1908, 1948 ಮತ್ತು 2012ರ ಒಲಿಂಪಿಕ್ಸ್‌ಗೆ ಸಾಕ್ಷಿಯಾಗಿತ್ತು. ಮುಂದಿನ ಸಲ ಅಮೆರಿಕದ ಲಾಸ್‌ ಏಂಜಲೀಸ್‌ ಕೂಡ ಈ ಸಾಲಿಗೆ ಸೇರಲಿದೆ. ಇಲ್ಲಿ 1932 ಮತ್ತು 1984ರ ಒಲಿಂಪಿಕ್ಸ್‌ ನಡೆದಿತ್ತು. ಹಾಗೆಯೇ ಅಮೆರಿಕದ ಸೇಂಟ್‌ ಲೂಯಿಸ್‌ (1904) ಮತ್ತು ಅಟ್ಲಾಂಟಾದಲ್ಲೂ (1996) ಒಲಿಂಪಿಕ್ಸ್‌ ನಡೆದಿತ್ತು. ಅಮೆರಿಕ ಅತ್ಯಧಿಕ 4 ಒಲಿಂಪಿಕ್ಸ್‌ ಕ್ರೀಡಾಕೂಟಗಳನ್ನು ಆಯೋಜಿಸಿದ ಏಕೈಕ ದೇಶವಾಗಿದೆ.

ಕುಸ್ತಿ ಸಂಸ್ಥೆ ವಿರುದ್ಧ ಉಷಾ ಅಸಮಾಧಾನ

ಹೊಸದಿಲ್ಲಿ: ಒಲಿಂಪಿಕ್ಸ್‌ ಪಟ್ಟಿ ಯಲ್ಲಿ ಕುಸ್ತಿಪಟು ಅಂತಿಮ್‌ ಪಂಘಲ್‌ ಅವರ ಕೋಚ್‌, ಭಗತ್‌ ಸಿಂಗ್‌ ಹೆಸರು ಬಿಟ್ಟು ಹೋಗಿದೆ. ಅವರಿಗೆ ಇನ್ನೂ ವೀಸಾ ಸಿಕ್ಕಿಲ್ಲ. ಇದಕ್ಕೆ ಭಾರತೀಯ ಒಲಿಂಪಿಕ್‌ ಸಮಿತಿ (ಐಒಎ) ಕಾರಣವಲ್ಲ, ಕುಸ್ತಿ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಕಾರಣ ಎಂದು ಐಒಎ ಅಧ್ಯಕ್ಷೆ ಪಿ.ಟಿ. ಉಷಾ ಅಸಮಾಧಾನ ಹೊರಹಾಕಿದ್ದಾರೆ.

ಅಂತಿಮ್‌ ಪಂಘಲ್‌, ಒಲಿಂಪಿಕ್ಸ್‌ ಗಾಗಿ ತನ್ನ ಜತೆ ಕೋಚ್‌ ಭಗತ್‌ ಸಿಂಗ್‌, ವಿಕಾಸ್‌ ಮತ್ತು ಫಿಸಿಯೋ ಹೀರಾ ಕೂಡ ಪ್ರಯಾ ಣಿ ಸುವುದನ್ನು ಬಯಸಿದ್ದರು. ಇದಕ್ಕೆ ಐಒಎ ಅನುಮತಿ ನೀಡಿತ್ತು. ಆದರೆ ವೀಸಾ ವಿಳಂಬ ವಾಗಿರುವುದರಿಂದ ಭಗತ್‌ ಹೆಸರು ಪಟ್ಟಿಯಲ್ಲಿ ಕಾಣಿಸಿಲ್ಲ. ಇದೇ ವಿಚಾರವಾಗಿ ಉಷಾ ಸ್ಪಷ್ಟನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next