Advertisement

Paris Games: ಇಂದು ಟೋಕಿಯೋ ಬೆಳ್ಳಿ ವಿಜೇತೆ ಚಾನು ಸ್ಪರ್ಧೆ;  ಫಿಟ್ನೆಸ್ ಕೊರತೆಯೇ ಅಡ್ಡಿ

10:24 PM Aug 06, 2024 | Team Udayavani |

ಪ್ಯಾರಿಸ್‌: ಕಳೆದ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತದ ಪದಕದ ಖಾತೆಯನ್ನು ತೆರೆದಿದ್ದ ಮಹಿಳಾ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು; ಪ್ಯಾರಿಸ್‌ನಲ್ಲಿ ಬುಧವಾರ 49 ಕೆಜಿ ವಿಭಾಗದಲ್ಲಿ ಸ್ಪರ್ಧಾಕಣಕ್ಕೆ ಇಳಿಯಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಸತತ ಎರಡು ಪದಕ ಗೆದ್ದ ಮೊದಲ ಭಾರತೀಯ ಕುಸ್ತಿಪಟು ಎಂಬ ಅಪೂರ್ವ ದಾಖಲೆ ನಿರ್ಮಿಸುವ ಅವಕಾಶವೊಂದು ಈ ತಾರೆಯ ಮೇಲಿದೆ. ಆದರೆ ಇದಕ್ಕೆ ಫಿಟ್‌ನೆಸ್‌ ಅಡ್ಡಿಯಾದೀತೇ ಎಂಬ ಆತಂಕ ಕೂಡ ಇದೆ.

Advertisement

ಕಳೆದ ಏಷ್ಯಾಡ್‌ನಿಂದೀಚೆ ಗಾಯದ ಸಮಸ್ಯೆಯನ್ನು ಎದುರಿಸುತ್ತಲೇ ಇದ್ದ ಮೀರಾಬಾಯಿ, ಪ್ಯಾರಿಸ್‌ ಒಲಿಂಪಿಕ್ಸ್‌ ತಪ್ಪಿಹೋದೀತೆಂಬ ಆತಂಕದಲ್ಲಿದ್ದರು. ತಾನು ಇಲ್ಲಿಗೆ ಬಂದುದೇ ಒಂದು ಪವಾಡ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ. ರಾಷ್ಟ್ರೀಯ ಕೋಚ್‌ ವಿಜಯ್‌ ಶರ್ಮಾ ಕೂಡ ಚಾನು ಅವರ ಸಂಪೂರ್ಣ ಫಿಟ್‌ನೆಸ್‌ ಬಗ್ಗೆ ಸರ್ಟಿಫಿಕೆಟ್‌ ಕೊಟ್ಟಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮೀರಾಬಾಯಿ ಒಟ್ಟು 202 ಕೆಜಿ ಭಾರವನ್ನೆತ್ತಿ (87 ಕೆಜಿ, 115 ಕೆಜಿ) ಬೆಳ್ಳಿ ಪದಕದಿಂದ ಸಿಂಗಾರಗೊಂಡಿದ್ದರು. ಅನಂತರ ಇವರ ಅತ್ಯುತ್ತಮ ಸಾಧನೆ ದಾಖಲಾದದ್ದು 2022ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ. ಇಲ್ಲಿ 201 ಕೆಜಿ ಭಾರವೆತ್ತಿದ್ದರು (88 ಕೆಜಿ, 113 ಕೆಜಿ).

ಸುಧಾರಣೆ ಅಗತ್ಯ: ಪ್ಯಾರಿಸ್‌ ವಿಷಯಕ್ಕೆ ಬರುವುದಾದರೆ, ಮೀರಾಬಾಯಿ ಚಾನು ಕ್ಲೀನ್‌ ಆ್ಯಂಡ್‌ ಜೆರ್ಕ್‌-ಎರಡೂ ವಿಭಾಗಗಳಲ್ಲಿ ತಮ್ಮ ವೈಯಕ್ತಿಕ ದಾಖಲೆಯನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಂಡರೆ ಬೆಳ್ಳಿ ಅಥವಾ ಕಂಚಿನ ಪದಕ ಗೆಲ್ಲಬಹುದೆಂದು ವಿಶ್ಲೇಷಿಸಲಾಗುತ್ತಿದೆ.

ಗುರುವಾರ 30ನೇ ವರ್ಷಕ್ಕೆ ಕಾಲಿಡಲಿರುವ ಮೀರಾಬಾಯಿ ಚಾನು ಸ್ನ್ಯಾಚ್‌ನಲ್ಲಿ 88 ಕೆಜಿ ದಾಖಲೆ ಹೊಂದಿದ್ದಾರೆ. 2020ರ ರಾಷ್ಟ್ರೀಯ ಗೇಮ್ಸ್‌ನಲ್ಲಿ ಇದನ್ನು ಸಾಧಿಸಿದ್ದರು. ಹಾಗೆಯೇ ಜೆರ್ಕ್‌ನಲ್ಲಿ 119 ಕೆಜಿ ಎತ್ತಿರುವುದು ವೈಯಕ್ತಿಕ ದಾಖಲೆಯಾಗಿದೆ. ಇದನ್ನು ಸಾಧಿಸಿದ್ದು 2021ರ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ. ಮೀರಾಬಾಯಿ 200 ಕೆಜಿ ಗಡಿ ದಾಟುವುದರಲ್ಲಿ ಅನುಮಾನವಿಲ್ಲ. ಆದರೆ ಈ ಬಾರಿ 202 ಕೆಜಿ ಸಾಧನೆ ಸಾಲದು. ಇದನ್ನು 205-206 ಕೆಜಿಗಾದರೂ ಹೆಚ್ಚಿಸಿಕೊಳ್ಳಬೇಕಾಗುತ್ತದೆ. ನಾವು ಸವಾಲಿಗೆ ಸಿದ್ಧರಾಗಿದ್ದೇವೆ’ ಎಂದಿದ್ದಾರೆ ಕೋಚ್‌ ವಿಜಯ್‌ ಶರ್ಮ.

ಬಲಾಡ್ಯರ ಸ್ಪರ್ಧೆ

Advertisement

ಸ್ಪರ್ಧೆಯಲ್ಲಿರುವ ಇತರ ನಾಲ್ವರು ಸ್ನ್ಯಾಚ್‌ನಲ್ಲಿ 90 ಕೆಜಿ ಗಡಿ ದಾಟಿದ್ದಾರೆ. ಉತ್ತರ ಕೊರಿಯಾದ ಏಷ್ಯನ್‌ ಗೇಮ್ಸ್‌ ಚಾಂಪಿಯನ್‌ ಹಾಗೂ ವಿಶ್ವದಾಖಲೆಯ ಲಿಫ್ಟರ್‌ ರೀ ಸಾಂಗ್‌ ಗಮ್‌ ಅವರ ಅನುಪಸ್ಥಿತಿಯಲ್ಲೂ 49 ಕೆಜಿ ವಿಭಾಗದ ಸ್ಪರ್ಧೆ ತೀವ್ರ ಪೈಪೋಟಿಯಿಂದ ಕೂಡಿದೆ.

ಮೀರಾಬಾಯಿ ಚಾನು ಕಳೆದ ಒಂದು ತಿಂಗಳಿಂದ ಪ್ಯಾರಿಸ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಮಾಜಿ ವೇಟ್‌ಲಿಫ್ಟರ್‌, ಅನಂತರ ಫಿಸಿಕಲ್‌ ಥೆರಪಿಸ್ಟ್‌ ಹಾಗೂ ಕಂಡೀಶನಿಂಗ್‌ ಕೋಚ್‌ ಆಗಿರುವ ಅಮೆರಿಕದ ಡಾ| ಏರಾನ್‌ ಹಾರ್ಶಿಗ್‌ ಅವರು 2020ರಿಂದ ಮೀರಾಬಾಯಿ ಅವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.