Advertisement

ಪ್ಯಾರಿಸ್‌ ಆರ್ಚರಿ ವರ್ಲ್ಡ್ ಕಪ್‌ : ಮಿನುಗಿದ ದೀಪಿಕಾ; ಭಾರತಕ್ಕೆ ಹ್ಯಾಟ್ರಿಕ್‌ ಬಂಗಾರ

10:43 PM Jun 27, 2021 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಆರ್ಚರಿ ವರ್ಲ್ಡ್ ಕಪ್‌ ಸ್ಟೇಜ್‌ 3 ಸ್ಪರ್ಧೆಯಲ್ಲಿ ರವಿವಾರ ಭಾರತ ಅಮೋಘ ಪ್ರದರ್ಶನ ನೀಡಿ ಬಂಗಾರದ ಹ್ಯಾಟ್ರಿಕ್‌ ಸಾಧಿಸಿತು. ಈ ಮೂರೂ ಸ್ವರ್ಣ ಸಾಧನೆಯಲ್ಲಿ ಅಗ್ರಮಾನ್ಯ ಆರ್ಚರ್‌ ದೀಪಿಕಾ ಕುಮಾರಿ ಪಾಲು ಮಹತ್ವದ್ದಾಗಿತ್ತು.
ಆರಂಭದಲ್ಲಿ ವನಿತಾ ರಿಕರ್ವ್‌ ತಂಡ ಸ್ವರ್ಣ ಪದಕ ಜಯಿಸಿತು; ಬಳಿಕ ಅತನು ದಾಸ್‌-ದೀಪಿಕಾ ಕುಮಾರಿ ಮಿಶ್ರ ತಂಡ ವಿಭಾಗದಲ್ಲಿ ಬಂಗಾರ ಬೇಟೆಯಾಡಿತು. ಕೊನೆಯಲ್ಲಿ ವನಿತೆಯರ ವೈಯಕ್ತಿಕ ರಿಕರ್ವ್‌ ಸ್ಪರ್ಧೆಯಲ್ಲೂ ದೀಪಿಕಾ ಚಿನ್ನವನ್ನು ಕೊರಳಿಗೆ ಅಲಂಕರಿಸಿಕೊಂಡರು. ಇದರೊಂದಿಗೆ ಎಲ್ಲರೂ ಟೋಕಿಯೊ ಒಲಿಂಪಿಕ್ಸ್‌ಗೆ ಹೊಸ ಸ್ಫೂರ್ತಿ ಪಡೆದರು.

Advertisement

ಈ ಕೂಟದಲ್ಲಿ ಭಾರತ ಗೆದ್ದ ಚಿನ್ನದ ಸಂಖ್ಯೆ 4ಕ್ಕೆ ಏರಿತು. ಶನಿವಾರ ಅಭಿಷೇಕ್‌ ವರ್ಮ ಬಂಗಾರದ ಖಾತೆ ತೆರೆದಿದ್ದರು.

ಮಣಿದ ಮೆಕ್ಸಿಕೊ
ವನಿತಾ ರಿಕರ್ವ್‌ ತಂಡದಲ್ಲಿ ದೀಪಿಕಾ ಜತೆಗಿದ್ದ ಉಳಿದಿಬ್ಬರೆಂದರೆ ಅಂಕಿತಾ ಭಕತ್‌ ಮತ್ತು ಕೋಮಲಿಕಾ ಬಾರಿ. ಒಲಿಂಪಿಕ್ಸ್‌ ಅರ್ಹತೆ ತಪ್ಪಿದ ನಿರಾಸೆಯ ನಡುವಲ್ಲೇ ಇವರು ಮೆಕ್ಸಿಕೊ ವಿರುದ್ಧ 5-1 ಅಂತರದ ಗೆಲುವು ಸಾಧಿಸಿ ಚಿನ್ನದೊಂದಿಗೆ ಮಿನುಗಿದರು.

ಇದು 2021ರಲ್ಲಿ ಈ ತಂಡಕ್ಕೆ ಒಲಿದ ಸತತ ಎರಡನೇ ಚಿನ್ನದ ಪದಕವೆಂಬುದು ವಿಶೇಷ. ಇದೇ ವರ್ಷ ಗ್ವಾಟೆಮಾಲಾ ಸಿಟಿಯಲ್ಲಿ ನಡೆದ ವಿಶ್ವಕಪ್‌ ಸ್ಪರ್ಧೆಯಲ್ಲೂ ಇವರು ಚಿನ್ನಕ್ಕೆ ಗುರಿ ಇರಿಸಿದ್ದರು. ಒಟ್ಟಾರೆಯಾಗಿ ವಿಶ್ವಕಪ್‌ ವನಿತಾ ರಿಕರ್ವ್‌ ಸ್ಪರ್ಧೆಯಲ್ಲಿ ಭಾರತ ಗೆದ್ದ 6ನೇ ಸ್ವರ್ಣ ಇದಾಗಿದೆ. ಮೆಕ್ಸಿಕನ್‌ ತಂಡ 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲೂ ಬೆಳ್ಳಿ ಜಯಿಸಿತ್ತು.

ಇದನ್ನೂ ಓದಿ :ದೇಶದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಪ್ರಧಾನಿ ಮೋದಿ ಕರೆ

Advertisement

ದಂಪತಿಗೆ ಮೊದಲ ಚಿನ್ನ
ಮಿಶ್ರ ಡಬಲ್ಸ್‌ನಲ್ಲಿ ಅತನು ದಾಸ್‌-ದೀಪಿಕಾ ಕುಮಾರಿ ದಂಪತಿ ಚಿನ್ನ ಗೆಲ್ಲುವ ಮೂಲಕ ಜೂ. 30ರ ತಮ್ಮ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಹೊಸ ರಂಗು ತುಂಬಿದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಈ ಜೋಡಿಯ ಮೇಲೆ ಭಾರತ ಭಾರೀ ನಿರೀಕ್ಷೆ ಇರಿಸಿದೆ.

ಫೈನಲ್‌ನಲ್ಲಿ ನೆದರ್ಲೆಂಡ್ಸ್‌ನ ಸೆಫ್ ವಾನ್‌ ಡೆನ್‌
ಬರ್ಗ್‌-ಗ್ಯಾಬ್ರಿಯೇಲಾ ಕ್ಲೋಸರ್‌ ವಿರುದ್ಧ 0-2 ಹಿನ್ನಡೆಯ ಬಳಿಕ ತಿರುಗಿ ಬಿದ್ದ ಅತನು-ದೀಪಿಕಾ, ಅಂತಿಮವಾಗಿ 5-3ರಿಂದ ಗೆಲುವು ಸಾಧಿಸಿದರು.

“ಇದೊಂದು ವಿಶೇಷ ಅನುಭವ. ಮೊದಲ ಸಲ ನಾವಿಬ್ಬರೂ ಜತೆಯಾಗಿ ಬಂಗಾರ ಗೆದ್ದ ನಿದರ್ಶನ ಇದಾಗಿದೆ. ಆದರೆ ನಾವು ದಾಂಪತ್ಯದಲ್ಲಿ ಮಾತ್ರ ಮೇಡ್‌ ಫಾರ್‌ ಈಚ್‌ ಅದರ್‌. ಅಂಗಳದಲ್ಲಿ ಎಲ್ಲರಂತೆ ಸ್ಪರ್ಧಿಗಳು’ ಎಂಬುದಾಗಿ ಅತನು ದಾಸ್‌ ಹೇಳಿದರು.

ಅಂದಹಾಗೆ ಇದು ದೀಪಿಕಾ ಗೆದ್ದ ಮೊದಲ ಮಿಶ್ರ ಡಬಲ್ಸ್‌ ಸ್ವರ್ಣ. ಇದಕ್ಕೂ ಹಿಂದಿನ ಕೂಟಗಳಲ್ಲಿ ಅವರು 5 ಬೆಳ್ಳಿ, 3 ಕಂಚನ್ನಷ್ಟೇ ಜಯಿಸಿದ್ದರು. ದೀಪಿಕಾ ಕೊನೆಯ ಸಲ ವಿಶ್ವಕಪ್‌ ಮಿಶ್ರ ಡಬಲ್ಸ್‌ ಫೈನಲ್‌ನಲ್ಲಿ ಕಾಣಿಸಿಕೊಂಡದ್ದು 2016ರ ಸಲ ಆಂಟಾಲ್ಯ ಟೂರ್ನಿಯಲ್ಲಿ. ಅಂದಿನ ಜತೆಗಾರ ಕೂಡ ಅತನು ದಾಸ್‌ ಆಗಿದ್ದರು. ಆದರೆ ಅಂದು ಈ ಜೋಡಿ ಕೊರಿಯಾ ವಿರುದ್ಧ ಪರಾಭವಗೊಂಡಿತ್ತು.

ವೈಯಕ್ತಿಕ ರಿಕರ್ವ್‌ ಸಿಂಗಲ್ಸ್‌ ಸ್ಪರ್ಧೆಯಲ್ಲಿ ದೀಪಿಕಾ ಕುಮಾರಿ ರಶ್ಯದ ಎಲೆನಾ ಒಸಿಪೋವಾ ವಿರುದ್ಧ 6-0 ಅಂತರದ ಅಮೋಘ ಗೆಲುವು ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next