ಮೂಡುಬಿದಿರೆ/ಪುತ್ತೂರು: ಹೊಸದಿಲ್ಲಿಯಲ್ಲಿ ನಡೆದ ಗಣರಾಜ್ಯೋತ್ಸವ ಮತ್ತು ಜ. 27ರಂದು ಪ್ರಧಾನಿ ನರೇಂದ್ರ ಮೋದಿಯವರ ಜತೆ “ಪರೀಕ್ಷಾ ಪೇ ಚರ್ಚಾ’ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶವನ್ನು ಮೂಡುಬಿದಿರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರಹ್ಲಾದಮೂರ್ತಿ ಕಡಂದಲೆ ಮತ್ತು ಪುತ್ತೂರಿನ ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿ ತೇಜ ಚಿನ್ಮಯ ಹೊಳ್ಳ ಅವರು ಪಡೆದಿದ್ದಾರೆ.
ಕರ್ನಾಟಕದಿಂದ ಕೇವಲ ನಾಲ್ಕು ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂ ಡಿದ್ದರು. ಅವರಲ್ಲಿ ಇಬ್ಬರು ದ.ಕ. ಜಿಲ್ಲೆ ಯವರಾಗಿರುವುದು ವಿಶೇಷವಾಗಿದೆ.
ಪರೀಕ್ಷಾ ಪೇ ಚರ್ಚಾದಲ್ಲಿ ಅತಿಥಿಯಾಗಿ ಪಾಲ್ಗೊಂಡ ಪ್ರಹ್ಲಾದಮೂರ್ತಿ ಮತ್ತು ತೇಜ ಚಿನ್ಮಯ ಹೊಳ್ಳ ಅವರು ಆ ಬಳಿಕ ಪ್ರಧಾನಿ ನರೇಂದರ ಮೋದಿ ಅವರ ಜತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಕಾರ್ಯಕ್ರಮದ ಬಳಿಕ ಪ್ರಧಾನಿ ಮೋದಿ ಅವರು ಕೆಲವು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಕೂಡ ನಡೆಸಿದರು. ಅವರ ಸಾಧನೆಯ ಕುರಿತಾದ ಮಾಹಿತಿಗೆ ಕಿವಿಯಾದರು.
ಕಾರ್ಯಕ್ರಮದ ಬಳಿಕ ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಮನೆಯಲ್ಲಿ ಸ್ನೇಹಕೂಟ ನಡೆದಿದ್ದು, ಅದರಲ್ಲಿ ಕೂಡ ವಿದ್ಯಾರ್ಥಿಗಳು ಪಾಲ್ಗೊಂಡರು.
ಒಡಿಶಾದಲ್ಲಿ ಜನವರಿಯಲ್ಲಿ ನಡೆದಿದ್ದ ರಾಷ್ಟ್ರಮಟ್ಟದ ಕಲಾ ಉತ್ಸವದ ವಿವಿಧ ವಿಭಾಗಗಳಲ್ಲಿ ಮೊದಲ ಮೂರು ಸ್ಥಾನ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಈ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಇದರಲ್ಲಿ ಪ್ರಹ್ಲಾದಮೂರ್ತಿ, ಚಿನ್ಮಯ ಹೊಳ್ಳ ಸೇರಿದ್ಧರು. ಪ್ರಹ್ಲಾದಮೂರ್ತಿ ಕಡಂದಲೆಯ ಸ್ಕಂದ ಪ್ರಸಾದ್ ಭಟ್-ರಾಜಲಕ್ಷ್ಮೀ ಎಂ.ಕೆ. ಅವರ ಪುತ್ರರಾಗಿದ್ದರೆ ಚಿನ್ಮಯ ಹೊಳ್ಳ ಅವರು ಹರೀಶ್ ಹೊಳ್ಳ, ಸುಚಿತ್ರಾ ಹೊಳ್ಳ ದಂಪತಿಯ ಪುತ್ರರಾಗಿದ್ದಾರೆ.
ಇದನ್ನೂ ಓದಿ: ಶಿರಾಡಿ ಪರಿಸರದಲ್ಲಿ ಆನೆ ದಾಳಿ: ಅಪಾರ ಪ್ರಮಾಣದ ಬೆಳೆ ನಷ್ಟ