ಮಹಾನಗರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪರೇಶ್ ಮೇಸ್ತ ನಿಗೂಢವಾಗಿ ಮೃತಪಟ್ಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸಬೇಕು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಶವದ ಮರು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಆಗ್ರಹಿಸಿದರು.
ಸಾವಿನ ಬಗ್ಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಸಂಘಟನೆಗಳ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನ ಸಭೆಯಲ್ಲಿ ಅವರು ಮಾತನಾಡಿದರು.
ಇದೊಂದು ಸಾಮಾನ್ಯ ಸಾವು ಎಂಬುದಾಗಿ ಮರಣೋತ್ತರ ಪರೀಕ್ಷಾ ವರದಿ ನೀಡಲಾಗಿದ್ದು, ಅದು ಕಾಂಗ್ರೆಸ್ ಪ್ರಾಯೋಜಿತ ಮರಣೋತರ ಪರೀಕ್ಷಾ ವರದಿಯಾಗಿದೆ ಎಂದವರು ಆರೋಪಿಸಿದರು. ಹಿಂದೂಗಳ ಕೊಲೆಯಾದಾಗ ಆರೋಪಿಗಳು ಬೇಗನೆ ಪತ್ತೆಯಾಗುವುದಿಲ್ಲ. ಹಿಂದೂಯೇತರರ ಕೊಲೆಯಾದಾಗ ಆರೋಪಿಗಳು ಶೀಘ್ರ ಪತ್ತೆಯಾಗುತ್ತಾರೆ. ಏಕೆ ಹೀಗೆ ಎಂದು ಪ್ರಶ್ನಿಸಿದ ಅವರು, ಪರೇಶ್ ಸಾವಿನ ಬಗ್ಗೆ 15 ದಿನಗಳೊಳಗೆ ಆರೋಪಿಗಳ ಬಂಧನ ಆಗದಿದ್ದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದರು.
ಪರೇಶ್ ಮೇಸ್ತ ಅವರ ಕುಟುಂಬಕ್ಕೆ ನೆರವಾಗಲು ‘ಧರ್ಮ ಶಿಕ್ಷಣ ನಿಧಿ’ ಸ್ಥಾಪಿಸಲಾಗಿದ್ದು, ಈ ನಿಧಿಗೆ ಉದಾರ ನೆರವು
ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸಭೆಯಲ್ಲಿ ಬಜರಂಗದಳ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್ ಮಾತನಾಡಿದರು. ಪರೇಶ್ ಮೇಸ್ತನದು ಸಾಮಾನ್ಯ ಸಾವಲ್ಲ; ಅದೊಂದು ಕೊಲೆ ಕೃತ್ಯ ಎಂಬ ಸಂಶಯವಿದೆ. ಹಿಂದೂ ಕಾರ್ಯಕರ್ತ ಎಂಬ ಕಾರಣಕ್ಕಾಗಿ ಆತನನ್ನು ಕೊಲೆಗೈಯಲಾಗಿದೆ ಎಂದು ಶಿವಾನಂದ ಮೆಂಡನ್ ಆರೋಪಿಸಿದರು. ಮುಖಂಡರಾದ ಗೋಪಾಲ್ ಕುತ್ತಾರ್, ಭುಜಂಗ ಕುಲಾಲ್, ಸೋಮನಾಥ್ ಕೋಟ್ಯಾನ್, ಮನೋಹರ ಸುವರ್ಣ ಉಪಸ್ಥಿತರಿದ್ದರು. ಪ್ರತಿಭಟನ ಸಭೆಯ ಬಳಿಕ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.