ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗಳ ವಿವಿಧ 8 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ ಹಾಗೂ 1ನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಅಲ್ಲದೇ ಕರಾವಳಿ ತಾಲೂಕುಗಳ 5 ಇತರೆ ಸರ್ಕಾರಿ ಶಾಲೆಗಳಲ್ಲಿ 1ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಅವಕಾಶ ಇರುವ ಸೌಲಭ್ಯವನ್ನು ಪ್ರಾರಂಭಿಸಲಾಗಿದ್ದು, ಪೋಷಕರು ಸಹ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.
ಈ ಸಂಬಂಧ ಸರ್ಕಾರಿ ಶಾಲೆಗಳಿಗೆ ಬಂದು ಪೋಷಕರು ಪ್ರವೇಶ ದಿನಾಂಕ ಕೇಳಿಕೊಂಡು ಮರಳಿದ್ದಾರೆ. ಶಾಲಾ ಪ್ರಾರಂಭೋತ್ಸವದ ದಿನವೇ ಆಂಗ್ಲ ಮಾಧ್ಯಮ 1ನೇ ತರಗತಿಗೆ ಪ್ರವೇಶ ಪಡೆಯಲು ಪೋಷಕರು ಮಕ್ಕಳೊಂದಿಗೆ ಶಾಲೆಗಳಿಗೆ ಬರಲಿದ್ದಾರೆ ಎಂದು ಹೇಳಲಾಗಿದೆ.
ಕಾರವಾರದ ಬಝಾರ್ ಶಾಲೆಯಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆಯಲು ಹತ್ತು ಪೋಷಕರು ವಿಚಾರಿಸಿಕೊಂಡು ಹೋಗಿದ್ದು, ಸಿದ್ಧತೆ ಮಾಡಿಕೊಂಡಿದ್ದಾರೆ. ಆಂಗ್ಲ ಮಾಧ್ಯಮ ಆರಂಭವಾದ ಸರ್ಕಾರಿ ಶಾಲೆಯಲ್ಲಿ 1 ನೇ ತರಗತಿಗೆ 30 ಮಕ್ಕಳ ಪ್ರವೇಶಕ್ಕೆ ಅವಕಾಶವಿದೆ. ಅಲ್ಲದೇ ಇಲ್ಲಿ ಓರ್ವ ಶಿಕ್ಷಕರಿಗೆ ಆಂಗ್ಲಭಾಷೆಯಲ್ಲಿ ಶಿಕ್ಷಣ ನೀಡಲು ರಜಾ ಅವಧಿಯಲ್ಲಿ ಜಿಲ್ಲಾ ಡಯಟ್ ಸಂಸ್ಥೆಗಳಲ್ಲಿ ತರಬೇತಿ ಸಹ ನೀಡಲಾಗಿದೆ. ಭಟ್ಕಳ ತಾಲೂಕಿನ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗೆ 50 ಅರ್ಜಿಗಳು ಬಂದಿದ್ದು, ಇಲ್ಲಿ ಮೊದಲು ಬಂದ 30 ಮಕ್ಕಳಿಗೆ ಪ್ರವೇಶ ನೀಡಲು ಡಿಡಿಪಿಐ ಸೂಚಿಸಿದ್ದಾರೆ. ಹೆಚ್ಚುವರಿ ಮಕ್ಕಳಿಗೆ ಪ್ರವೇಶಾತಿ ನೀಡಲು ಸರ್ಕಾರದ ಹಿರಿಯ ಅಧಿಕಾರಿಗಳ ಅನುಮತಿ ಕೋರುವ ಸಾಧ್ಯತೆಗಳಿವೆ.
ಎಲ್ಕೆಜಿ ಪ್ರವೇಶಕ್ಕೆ ಭಾರೀ ಬೇಡಿಕೆ: ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ ಪ್ರಾರಂಭಿಸಲು ಸರ್ಕಾರ ತಿರ್ಮಾನಿಸಿದ್ದು, ಈ ಶಾಲೆಗಳಲ್ಲಿ 1ನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ಪಡೆಯಲು ಸಹ ಅವಕಾಶ ಕಲ್ಪಿಸಲಾಗಿದೆ. ಕರಾವಳಿ ಶೈಕ್ಷಣಿಕ ಜಿಲ್ಲೆಯ 8 ಶಾಲೆಗಳಲ್ಲಿ ಈ ಅವಕಾಶ ಕಲ್ಪಿಸಲಾಗಿದೆ. ಕಾರವಾರದ ಶಿರವಾಡ ಮತ್ತು ಅಮದಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಎಲ್ಕೆಜಿ ಹಾಗೂ 1 ನೇ ತರಗತಿಗೆ ಆಂಗ್ಲ ಮಾಧ್ಯಮದ ಪ್ರವೇಶ ಅವಕಾಶವಿದೆ. ಕಾರವಾರ ಬಝಾರ್ ಶಾಲೆಯಲ್ಲಿ ಸರ್ಕಾರಿ ಎಲ್ಕೆಜಿ ಪ್ರಾರಂಭಿಸುತ್ತೀರಾ ಎಂದು ಹಲವು ಪೋಷಕರು ವಿಚಾರಿಸಿದ್ದಾರೆ. ಆದರೆ ಶಿಕ್ಷಕರು ಎಲ್ಕೆಜಿ ಆರಂಭವಾಗಿಲ್ಲ ಎಂದು ತಿಳಿಸಿದ್ದಾರೆ. ಖಾಸಗಿ ಶಾಲೆಗಳಲ್ಲಿ 1ನೇ ತರಗತಿಗೆ 12 ರಿಂದ 18 ಸಾವಿರದ ವರೆಗೆ ದೇಣಿಗೆ ಹಾಗೂ ಶುಲ್ಕ ಇರುವ ಕಾರಣ ಪೋಷಕರಿಗೆ ಭಾರೀ ಹೊರೆಯಾಗಿದೆ. ಎಲ್ಕೆಜಿ ಪ್ರವೇಶಕ್ಕೆ ಸಹ 10 ಸಾವಿರದಿಂದ 15 ಸಾವಿರ ವಸೂಲಿ ಖಾಸಗಿ ಶಾಲೆಗಳಲ್ಲಿ ನಡೆದಿದೆ. ಆದರೆ ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದೂರು ನೀಡಲು ಮಾತ್ರ ಯಾವ ಪೋಷಕರು ಸಿದ್ಧರಿಲ್ಲ. ಈಗ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುತ್ತಿರುವುದನ್ನು ಬಹುತೇಕ ಪೋಷಕರು ಪ್ರಶಂಸಿಸಿದ್ದಾರೆ. ಹೆಚ್ಚಾಗಿ ಉತ್ತರ ಕರ್ನಾಟಕದ ಕಾರ್ಮಿಕರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದು, ಸರ್ಕಾರ ಇಲ್ಲಿಯೂ ಸಹ ಇಂಗ್ಲಿಷ್ ಮಾಧ್ಯಮ ಆರಂಭಿಸಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಸರ್ಕಾರ ಅನುಮತಿ ನೀಡಿರುವ ಶಾಲೆಗಳಲ್ಲಿ ಎಲ್ಕೆಜಿ ಹಾಗೂ 1ನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ನೀಡುತ್ತೇವೆ. ಎಲ್ಕೆಜಿ ಪ್ರಾರಂಭವಾಗುವ 8 ಶಾಲೆಗಳಿಗೆ ಹೆಚ್ಚುವರಿಯಾಗಿ ಆಂಗ್ಲ ಭಾಷೆ ಕಲಿಸಲು ಓರ್ವ ಶಿಕ್ಷಕಿ ಹಾಗೂ ಆಯಾರನ್ನು ನೀಡುತ್ತಿದ್ದೇವೆ. ಇನ್ನು 1ನೇ ತರಗತಿಯಿಂದ ಆಂಗ್ಲ ಮಾಧ್ಯಮ ಪ್ರಾರಂಭವಾಗುವ 5 ಶಾಲೆಗಳಿಗೆ ಅಲ್ಲಿನ ಶಿಕ್ಷಕರಿಗೆ ಆಂಗ್ಲ ಭಾಷೆ ಕಲಿಕೆ ತರಬೇತಿ ನೀಡಲಾಗಿದೆ. ಕಲಿಕಾ ಸಾಮಾಗ್ರಿಗೆ ಕೊರತೆಯಿಲ್ಲ. ಎಲ್ಲ ಸೌಲಭ್ಯ ಇರುವ ಶಾಲೆಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.
•ಡಿ.ಮಂಜುನಾಥ, ಡಿಡಿಪಿಐ, ಕಾರವಾರ.
ಆಂಗ್ಲ ಮಾಧ್ಯಮ ಆರಂಭವಾಗುವ ಶಾಲೆ ಎಂಬ ಬ್ಯಾನರ್ ಮೊದಲೇ ಹಾಕಿದ ಕಾರಣ ಬಝಾರ್ ಶಾಲೆಗೆ ಹಲವು ಪೋಷಕರು ಬಂದು ಪ್ರವೇಶ ಸಂಬಂಧ ವಿಚಾರಿಸಿಕೊಂಡು ಹೋಗಿದ್ದಾರೆ. ಹಾಗಾಗಿ ಆಂಗ್ಲ ಮಾಧ್ಯಮಕ್ಕೆ ಮಕ್ಕಳ ಪ್ರವೇಶ ಆಗಲಿದೆ ಎಂಬ ವಿಶ್ವಾಸವಿದೆ
.•ಮಾಲಾ ಚಂದಾವರಕರ್, ಮುಖ್ಯೋಪಾಧ್ಯಾಯರು ಸಹಿಪ್ರಾ ಶಾಲೆ, ಬಝಾರ್. ಕಾರವಾರ.