Advertisement

ಮಗನ ಸೇನೆ ಪಾಸ್‌ ಬಳಸಿ ಕಳವು ಮಾಡುತ್ತಿದ್ದ ಪಾಲಕರ ಸೆರೆ

12:25 AM Feb 12, 2020 | Lakshmi GovindaRaj |

ಬೆಂಗಳೂರು: ಪುತ್ರ ಸೇನೆಯಲ್ಲಿದ್ದ ಕಾರಣಕ್ಕೆ ರಕ್ಷಣಾ ಇಲಾಖೆಯಿಂದ ನೀಡಲಾಗಿದ್ದ “ಪಾಸ್‌’ದುರ್ಬಳಕೆ ಮಾಡಿಕೊಂಡ ದಂಪತಿ ಕಳ್ಳತನ ಆರೋಪದಲ್ಲಿ ಇದೀಗ ಜೈಲು ಸೇರಿದ್ದಾರೆ. ದೊಡ್ಡಬೊಮ್ಮಸಂದ್ರದ ನಿವಾಸಿಗಳಾದ ರಾಮಕೃಷ್ಣ ಯ್ಯ (61) ಪತ್ನಿ ರತ್ನಾ( 53) ಬಂಧಿತರು. ಇವರ ಪುತ್ರ ಪ್ಯಾರಾ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೋಷಕರಾದ ಇವರಿಗೆ ಸೇನಾ ಕ್ಯಾಂಪಸ್‌ಗಳ ಪ್ರವೇಶಕ್ಕೆ ಪಾಸ್‌ ನೀಡಲಾಗಿತ್ತು.

Advertisement

ಆ ಪಾಸ್‌ ದುರ್ಬಳಕೆ ಮಾಡಿಕೊಂಡು ಸೇನಾ ಕ್ಯಾಂಪಸ್‌ಗಳ ಒಳಗೆ ಹೋಗುತ್ತಿದ್ದ ದಂಪತಿ ಮನೆ ಕಳವು ಮಾಡುತ್ತಿದ್ದರು ಎಂಬುದು ಪತ್ತೆಯಾಗಿದೆ. ಹೆಬ್ಬಾಳದಲ್ಲಿರುವ ವಾಯುಸೇನೆಯ ತರಬೇತಿ ಕೇಂದ್ರ ಕಚೇರಿಯ ಆವರಣದಲ್ಲಿರುವ ಸೇನಾ ಅಧಿಕಾರಿಯೊಬ್ಬರ ಮನೆಯಲ್ಲಿ ಫೆ.5 ರಂದು ನಡೆದಿದ್ದ ಕಳವು ಪ್ರಕರಣದ ಬೆನ್ನತ್ತಿದ್ದ ಸದಾಶಿವನಗರ ಠಾಣೆ ಪೊಲೀಸರಿಗೆ ರಾಮಕೃಷ್ಣಯ್ಯ ದಂಪತಿ ಸಿಕ್ಕಿಬಿದ್ದಿದ್ದಾರೆ.

ಇವರ ಬಂಧನದಿಂದ ಕಳೆದ ವರ್ಷ ಆಗಸ್ಟ್‌ನಲ್ಲಿ ನಡೆಸಿದ್ದ ಕಳವು ಪ್ರಕರಣವೂ ಪತ್ತೆಯಾಗಿದೆ. ಆರೋಪಿಗಳಿಂದ ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ಸೇನೆಯಿಂದ ಪಡೆದಿದ್ದ ಪಾಸ್‌ಗಳನ್ನು ಜಪ್ತಿ ಮಾಡಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಆರೋಪಿ ರಾಮಕೃಷ್ಣಯ್ಯ ಮಹಾರಾಷ್ಟ್ರದ ವಾಯುಸೇನೆ ಕಚೇರಿಯಲ್ಲಿ ಸಹಾಯಕ (ಸಿವಿಲಿಯನ್‌) ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದು 2009ರಲ್ಲಿ ಕೆಲಸ ಬಿಟ್ಟಿದ್ದಾನೆ. ಅಂದಿನಿಂದ ಪತ್ನಿ ಜತೆ ಸೇರಿ ನಿರಂತರವಾಗಿ ಕಳ್ಳತನ ಕೆಲಸಗಳಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ 2015ರಲ್ಲಿ ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕಳವು ಪ್ರಕರಣಗಳಲ್ಲಿ ಆರೋಪಿ ದಂಪತಿ ಬಂಧಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳ್ಳತನ ಹೇಗೆ?: ಸೇನೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಗೂ ಅಧಿಕಾರಿಗಳ ಪೋಷಕರಿಗೆ ಸೇನಾ ಆವರಣ ಕಚೇರಿಗಳಿಗೆ ತೆರಳಲು ಪಾಸ್‌ ನೀಡಲಾಗಿರುತ್ತದೆ. ಆರೋಪಿ ದಂಪತಿ ಮಗ ಕೂಡ ಪ್ಯಾರಾ ರೆಜಿಮೆಂಟ್‌ನಲ್ಲಿ ಕಾರ್ಯನಿರ್ವಹಿಸು ತ್ತಿದ್ದಾರೆ. ಹೀಗಾಗಿ ಇವರಿಗೂ ಪಾಸ್‌ ದೊರೆತಿತ್ತು. ಹೆಬ್ಬಾಳದಲ್ಲಿರುವ ವಾಯುಸೇನೆಯ ತರಬೇತಿ ಕೇಂದ್ರಕ್ಕೆ ದಂಪತಿ ಆಗಮಿಸುತ್ತಿದ್ದರು. ರಾಮಕೃಷ್ಣಯ್ಯ ಮೈದಾನದಲ್ಲಿ ಕುಳಿತುಕೊಂಡು ಅಲ್ಲಿನ ಸಿಬ್ಬಂದಿ ಜತೆ ಮಾತುಕತೆಯಲ್ಲಿ ತೊಡಗುತ್ತಿದ್ದ.

Advertisement

ಈ ವೇಳೆ ರತ್ನ ಅಧಿಕಾರಿಗಳ ವಸತಿಗೃಹಗಳ ಬಳಿ ಸುತ್ತಾಡಿ ಬೀಗ ಹಾಕಿದ ಮನೆಗಳ ಬೀಗ ಒಡೆದು ಚಿನ್ನಾಭರಣ, ವಾಚ್‌, ಮದ್ಯ ಸೇರಿ ಮತ್ತಿತರ ವಸ್ತುಗಳನ್ನು ಕಳವು ಮಾಡಿಕೊಂಡು ಬರುತ್ತಿದ್ದಳು. ಅದೇ ರೀತಿ ಕಳೆದ ವರ್ಷ ಆ. 22ರಂದು ಲೆಫ್ಟಿನೆಂಟ್‌ ಕರ್ನಲ್‌ವೊಬ್ಬರ ಮನೆಯಲ್ಲೂ ಕಳವು ಮಾಡಿದ್ದಳು. ಇದೇ ಫೆ. 5ರಂದು ಮತ್ತೂಬ್ಬ ಅಧಿಕಾರಿಯ ಮನೆಯಲ್ಲಿ 45 ಸಾವಿರ ರೂ. ಮೌಲ್ಯದ ಆಭರಣ ಕಳವು ಮಾಡಿದ್ದಳು.

ಈ ಎರಡೂ ಪ್ರಕರಣಗಳ ತನಿಖೆ ನಡೆಸಿದ ಶೇಷಾದ್ರಿ ಪುರಂ ಉಪವಿಭಾಗದ ಎಸಿಪಿ ಬಷೀರ್‌ ಅಹಮದ್‌, ಇನ್ಸ್‌ಪೆಕ್ಟರ್‌ ಎಂ. ಮಂಜುನಾಥ್‌, ಪಿಎಸ್‌ಐಎನ್‌. ಶೋಭಾ ನೇತೃತ್ವದ ತಂಡ ಆರೋಪಿ ದಂಪತಿಯನ್ನು ಬಂಧಿಸಿ ಕಳವು ಆಭರಣ ವಶಪಡಿಸಿಕೊಂಡಿದ್ದಾರೆ.

ಬುದ್ಧಿ ಕಲಿಯಲಿಲ್ಲ: ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಗ ಹಲವು ಬಾರಿ ಪೋಷಕರಿಗೆ ಬುದ್ಧಿವಾದ ಹೇಳಿದ್ದ ಆದರೂ ಕೇಳಿರಲಿಲ್ಲ. ಇದರಿಂದ ಬೇಸರಗೊಂಡ ಮಗ ಇವರ ಜತೆ ಸಂಪರ್ಕ ಕಡಿದುಕೊಂಡಿದ್ದ. ದೊಡ್ಡಬೊಮ್ಮ ಸಂದ್ರದಲ್ಲಿ ಆರೋಪಿ ದಂಪತಿ ನೆಲೆಸಿದ್ದು ಕಳವು ಮಾಡಿದ ಆಭರಣಗಳನ್ನು ಮಾರಾಟ ಮಾಡಿ ದುಶ್ಚಟಗಳಿಗೆ ವೆಚ್ಚ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ದಂತೆ ಆರೋಪಿ ದಂಪತಿಯನ್ನು ಬಂಧಿಸಲಾಗಿದ್ದು ಕಳವು ಮಾಡಿದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
-ಡಾ.ಚೇತನ್‌ಸಿಂಗ್‌ ರಾಥೋರ್‌, ಡಿಸಿಪಿ, ಕೇಂದ್ರ ವಿಭಾಗ

* ಮಂಜುನಾಥ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next