Advertisement

ಕ್ಯಾನ್ಸರ್‌ ಪೀಡಿತ ತಂದೆ ತಾಯಿ ಚಿಕಿತ್ಸೆಗಾಗಿ ಕಳ್ಳತನ

06:04 PM Aug 31, 2017 | Team Udayavani |

ಬೆಂಗಳೂರು: ಕ್ಯಾನ್ಸರ್‌ ಪೀಡಿತ ತಂದೆ ತಾಯಿಗೆ ಚಿಕಿತ್ಸೆ ಕೊಡಿಸಲೆಂದು ಕಳ್ಳತನ ಮಾಡುತ್ತಿದ್ದ ಯುವಕ ಮತ್ತು ಆತನಿಗೆ ನೆರವಾಗುತ್ತಿದ್ದ ವ್ಯಕ್ತಿ ಸೇರಿ ಇಬ್ಬರನ್ನು ಜೆ.ಪಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ತ್ರಿಪುರಾ ಮೂಲದ, ಸದ್ಯ ಬೇಗೂರಿನ ನಿವಾಸಿ ಪರೇಶ್‌ಕುಮಾರ್‌ ಸಿನ್ಹಾ ಹಾಗೂ ಈತನ ಸ್ನೇಹಿತ ಒರಿಸ್ಸಾದ ಬಿಜಯ್‌ದಾಸ್‌ ಬಂಧಿತರು. ಇವರಿಂದ 25 ಲಕ್ಷ ರೂ. ಮೌಲ್ಯದ ಎಲೆಕ್ಟ್ರಾನಿಕ್‌ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ
ಡಿಸಿಪಿ ಶರಣಪ್ಪ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪರೇಶ್‌ ಕುಮಾರ್‌ನ ತಂದೆ-ತಾಯಿ ಇಬ್ಬರೂ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಹಣ ಹೊಂದಿಸಲು ಪರೇಶ್‌ ಕಳ್ಳತನಕ್ಕೆ ಇಳಿದಿದ್ದ. ಆತನಿಗೆ ಬಿಜಯದಾಸ್‌ ನೆರವಾಗುತ್ತಿದ್ದ. ಸಣ್ಣ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿದ್ದ ಪರೇಶ್‌ ಹೆಚ್ಚಿನ
ಹಣ ಸಂಪಾದನೆಗೆ ಕೆಲಸ ಬಿಟ್ಟು ಬೆಂಗಳೂರಿಗೆ ಬಂದು ಕಳ್ಳತನವನ್ನು ವೃತ್ತಿಯನ್ನಾಗಿಸಿಕೊಂಡಿದ್ದ.

 ತಾತ್ಕಾಲಿಕವಾಗಿ ಭದ್ರತಾ ಸಿಬ್ಬಂದಿಯಾಗಿ ಕೆಲಸಕ್ಕೆ ಸೇರಿದ್ದ ಈತ, ತಾನು ಕೆಲಸ ಮಾಡುತ್ತಿದ್ದ ಕಂಪನಿಯಲ್ಲೇ ವಸ್ತುಗಳನ್ನು ಕದ್ದು ಮಾರಾಟ ಮಾಡುತ್ತಿದ್ದ. ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕದಿಯುವ ಸಲುವಾಗಿಯೇ ಸಾಫ್ಟ್‌ವೇರ್‌ ಕಂಪನಿಗಳಲ್ಲಿ
ಸೆಕ್ಯೂರಿಟಿ ಗಾರ್ಡ್‌ ಕೆಲಸಕ್ಕೆ ಸೇರುತ್ತಿದ್ದ. ಹೀಗೆ ಜೆ.ಪಿ.ನಗರದ ರಿಲೇ-2 ಇಂಡಿಯಾ ಕಂಪನಿಯಲ್ಲಿ ನಡೆದಿದ್ದ 21 ಲ್ಯಾಪ್‌ಟಾಪ್‌, 15 ಟ್ಯಾಬ್‌, 2 ಮೊಬೈಲ್‌ ಕಳ್ಳತನ ಪ್ರಕರಣದಲ್ಲಿ ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಶರಣಪ್ಪ ವಿವರಿಸಿದ್ದಾರೆ.

ಕೆಲಸ ಮಾಡುವ ಕಂಪನಿಯ ಒಳ ಹೋಗುವ ಮತ್ತು ಹೊರಗೆ ಬರುವ ಮಾರ್ಗಗಳನ್ನು ತಿಳಿದುಕೊಂಡಿದ್ದ ಈತ ಎರಡು ಮೂರು ದಿನದಲ್ಲಿ ಕಳ್ಳತನ ಮುಗಿಸಿ ನಾಪತ್ತೆಯಾಗುತ್ತಿದ್ದ. ಈ ಬಗ್ಗೆ ಹಲವು ಕಡೆಗಳಿಂದ ದೂರುಗಳು ಬಂದಿತ್ತು.

Advertisement

ಇತ್ತೀಚೆಗೆ ಸೇರಿಕೊಂಡಿದ್ದ ಸೆಕ್ಯೂರಿಟಿ ಏಜೆನ್ಸಿ ಯಾವುದೇ ಗುರುತಿನ ಚೀಟಿ ನೀಡಿಲ್ಲ. ಅಲ್ಲದೇ ಈತ ಕರ್ತವ್ಯ ನಿರ್ವಹಿಸಿರುವ ಸ್ಥಳಗಳಲ್ಲಿ ರಾತ್ರಿ ಪಾಳಿಯಲ್ಲೇ ಹೆಚ್ಚು ಕೆಲಸ ಮಾಡಿದ್ದಾನೆ.

ಪರಿಶೀಲನೆ ಇಲ್ಲದೆ ಕೆಲಸ: ಆರೋಪಿಗಳು ಭದ್ರತಾ ಸಿಬ್ಬಂದಿ ಕೆಲಸ ಕೇಳಿಕೊಂಡು ಬಂದಾಗ ಸೆಕ್ಯುರಿಟಿ ಏಜೆನ್ಸಿಯವರು ಆರೋಪಿಗಳ ಪೂರ್ವಾಪರ ಪರಿಶೀಲಿಸದೆ ಕೇವಲ ಮೊಬೈಲ್‌ ನಂಬರ್‌ ಪಡೆದು ಕೆಲಸ ಕೊಟ್ಟಿದ್ದರು. ಕಳ್ಳತನ ನಡೆದ ಕಂಪನಿಯ ಸಿಸಿಟಿವಿಯಲ್ಲಿ ದಾಖಲಾಗಿದ್ದ ದೃಶ್ಯ ಮತ್ತು ಏಜೆನ್ಸಿಯಲ್ಲಿದ್ದ ಆರೋಪಿಯ ಫೋಟೋ ಹೊಂದಾಣಿಕೆ ಆಗಿತ್ತು. ಈ ಕಾರಣದಿಂದ ಆರೋಪಿಯ ಸುಳಿವು ಹಿಡಿದು ಬಂದಿಸಿದ್ದೇವೆ. ಪೂರ್ವಾಪರ ಪರಿಶೀಲನೆ ನಡೆಸದೆ ಕೆಲಸಕ್ಕೆ ಸೇರಿಸಿಕೊಂಡ ಆರೋಪಕ್ಕಾಗಿ ಏಜೆನ್ಸಿ ವಿರುದ್ಧವೂ ಕಾನೂನು ಕ್ರಮ ತೆಗೆದುಕೊಳ್ಳಲಾಗು ವುದು ಎಂದು ಶರಣಪ್ಪ ತಿಳಿಸಿದರು. 

ಸೆಕ್ಯೂರಿಟಿ ಏಜೆನ್ಸಿ, ಕಂಪನಿಗಳಿಗೆ ಡಿಸಿಪಿ ಎಚ್ಚರಿಕೆ
ಸೆಕ್ಯೂರಿಟಿ ಏಜೆನ್ಸಿಗಳು ನೇಮಕ ಮಾಡಿಕೊಳ್ಳುವ ಸಿಬ್ಬಂದಿ ಮತ್ತು ಸೆಕ್ಯೂರಿಟಿ ಸೂಪರ್‌ವೈಸರ್‌ಗಳ ಜೊತೆಗೆ ಕಂಪನಿಯ ಹೆಚ್‌ಆರ್‌ ಮ್ಯಾನೇಜರ್‌ ನಿತ್ಯ ಸಂಪರ್ಕದಲ್ಲಿರಬೇಕು. ಸೆಕ್ಯೂರಿಟಿ ಏಜೆನ್ಸಿಗಳು ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿಕೊಳ್ಳುವ ಮುನ್ನ ಗಾರ್ಡ್‌ನ ಪೂರ್ವಪರ ಚರಿತ್ರೆಯ ಬಗ್ಗೆ ತಿಳಿದುಕೊಳ್ಳಬೇಕು. ಕಂಪನಿಯವರು ಸಿಸಿ ಕ್ಯಾಮೆರಾವನ್ನು ಅವಶ್ಯಕ ಸ್ಥಳದಲ್ಲಿ ಅಳವಡಿಸಬೇಕು.

ಅಳವಡಿಸಿರುವ ಸಿಸಿ ಕ್ಯಾಮೆರಾಗಳು ರಾತ್ರಿ ವೇಳೆಯೂ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಮಾನಿಟರಿಂಗ್‌ ಮಾಡಲು ಒಬ್ಬ ಸಿಬ್ಬಂದಿ ನಿಯೋಜಿಸಬೇಕು ಎಂದು ಡಿಸಿಪಿ ಶರಣಪ್ಪ ಎಚ್ಚರಿಕೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next