ಕುಂದಾಪುರ: ಶಿಕ್ಷಣ ದೊಂದಿಗೆ ಅದಕ್ಕೆ ಪೂರಕವಾದ ಕಲಾ ಪ್ರಕಾರಗಳನ್ನು ಕಲಿಯಬಹುದು. ಕಲಾವಿದನಿಗೆ ಕಲಿಸುವ ಶಕ್ತಿ ಇರುತ್ತದೆ. ಪಠ್ಯಪೂರಕ ಚಟುವಟಿಕೆಗೆ ಪೋಷಕರು ಪ್ರೋತ್ಸಾಹ ನೀಡಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಎಲ್ಲ ಶಾಲೆ ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಇಂದಿರಾ ಶೆಟ್ಟಿ ಹೇಳಿದರು.
ಅವರು ಬುಧವಾರ ಇಲ್ಲಿನ ಜೂನಿಯರ್ ಕಾಲೇಜಿನ ರೋಟರಿ ಲಕ್ಷ್ಮೀನರಸಿಂಹ ಸಭಾಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸ.ಪ.ಪೂ. ಕಾಲೇಜಿನ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ವರ್ಷ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳೂ ಸ್ತಬ್ಧವಾಗಿ ಕಾರಾಗೃಹ ವಾಸದಂತಾಗಿತ್ತು. ಯಕ್ಷಗಾನ, ಪ್ರತಿಭಾ ಕಾರಂಜಿ ಸೇರಿದಂತೆ ಎಲ್ಲ ವಯೋ ಮಾನದವರಿಗೂ ಮನೋರಂಜನ ಕಾರ್ಯಕ್ರಮಗಳನ್ನು ನೇರವಾಗಿ ವೀಕ್ಷಿಸಿ ಆಸ್ವಾದನೆಗೆ ಅನುವು ಇರಲಿಲ್ಲ. ಈಗ ಭಯಮುಕ್ತ ವಾತಾವರಣದೆಡೆಗೆ ಕಾಲಿಡುತ್ತಿದ್ದೇವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ದೇಶದ ಸಾಂಸ್ಕೃತಿಕ ರಾಜಧಾನಿ ಇದ್ದಂತೆ. ತನ್ನ ಅಧ್ಯಕ್ಷ ಅವಧಿಯಲ್ಲಿ ಸಾಹಿತ್ಯ ಪರಿಷತ್ತಿನಿಂದ 57 ಸಾಹಿತ್ಯ ಸಮ್ಮೇಳನಗಳನ್ನು, 1,800 ಕಾರ್ಯಕ್ರಮಗಳನ್ನು ಈವರೆಗೆ ನಡೆಸಲಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ರಾಮಕೃಷ್ಣ ಬಿ.ಜಿ., ಜಾಗತೀಕರಣದಿಂದ ಕಲೆ ವಿಸ್ಮತಿಗೆ ಒಳಗಾಗಿದ್ದು ನಾವು ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಚೇತನ್ ಶೆಟ್ಟಿ ಕೋವಾಡಿ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಸ್ವಾಗತಿಸಿ, ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ಕಾಳಾವರ ನಿರ್ವಹಿಸಿದರು.
ವಿವಿಧೆಡೆಯ 11 ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿವಿಧ ಜಾನಪದ ಹಾಗೂ ಇತರ ಕಲಾ ತಂಡಗಳಿಂದ ಕಂಗೀಲು, ಕರಗ ಕೋಲಾಟ, ಜನಪದ ನೃತ್ಯ, ವೀರಗಾಸೆ, ಸುಗಮ ಸಂಗೀತ, ಜನಪದ ಗಾಯನ, ಸ್ಯಾಕ್ಸೋಫೋನ್ ವಾದನ, ಸಮೂಹ ನೃತ್ಯ, ಶಾಸ್ತ್ರೀಯ ನೃತ್ಯ, ಹರಿಕಥೆ, ಯಕ್ಷಗಾನ ಪ್ರದರ್ಶನ ನಡೆಯಿತು.