Advertisement

ಮಕ್ಕಳ ಬೆಳವಣಿಗೆಗೆ ಪಾಲಕರ ಕಾಳಜಿ ಅಗತ್ಯ; ಶ್ರೀ ಶಾಂತಲಿಂಗ ಸ್ವಾಮಿ

04:12 PM Feb 25, 2023 | Team Udayavani |

ನರಗುಂದ: ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು, ಪಾಲಕರ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ. ಈ ಹಂತದಲ್ಲಿ ಪಾಲಕರು ಅತಿ ಹೆಚ್ಚು ಕಾಳಜಿ ವಹಿಸಬೇಕು. ವಿದ್ಯಾರ್ಥಿಗಳಿಗೆ ಮೊಬೈಲ್‌ ಮತ್ತು ಟಿ.ವಿ.ಯಿಂದ ದೂರವಿಡಬೇಕು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಸಲಹೆ ನೀಡಿದರು.

Advertisement

ಪಟ್ಟಣದ ಭಾರತ ರೂರಲ್‌ ಡೆವಲೆಪ್‌ಮೆಂಟ್‌ ಟ್ರಸ್ಟ್‌ ಆಶ್ರಯದ ಜ್ಞಾನ ಮುದ್ರಾ ಪಬ್ಲಿಕ್‌ ಸ್ಕೂಲ್‌ನ 8ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜ್ವಾನಮುದ್ರಾ ಶಿಕ್ಷಣ ಸಂಸ್ಥೆ ಸಮಾನ ಮನಸ್ಕ ಗೆಳೆಯರಿಂದ ಪ್ರಾರಂಭಗೊಂಡ ಶಾಲೆಯಾಗಿದೆ. ಇದು ಬೃಹತ್‌ ಹೆಮ್ಮರವಾಗಿ ಬೆಳೆಯಲೆಂದು ಶ್ರೀಗಳು ಹಾರೈಸಿದರು.

ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ, ಕಲೆ, ಸಾಹಿತ್ಯ, ಸಂಗೀತ ಎಲ್ಲ ರಂಗಗಳಲ್ಲೂ ಪ್ರತಿಭೆಗಳು ಹೊರಹೊಮ್ಮುತ್ತಿದ್ದು, ಈ ಶಿಕ್ಷಣ ಸಂಸ್ಥೆ ಇದೇ ರೀತಿ ಮುಂದುವರೆದು ತಾಲೂಕಿಗೆ ಕೀರ್ತಿ ತರಲಿ ಎಂದು ಶುಭ ಕೋರಿದರು. ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ರಾಜು ಅವರು ಮಾತನಾಡಿ, ಜ್ಞಾನಮುದ್ರಾ ಪಬ್ಲಿಕ್‌ ಸ್ಕೂಲ್‌ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ನೈತಿಕ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಭೀಮಪ್ಪ ಹಳಕಟ್ಟಿ, 577/600, ಶೇ.96.16 ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ನವೀನಗೌಡ ಮಲ್ಲನಗೌಡ್ರ, 624/625, ಶೇ.99.84 ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಾಲೆಯ ಮಕ್ಕಳು ವಿವಿಧ ನೃತ್ಯ, ಸಮಾಜಕ್ಕೆ ಉತ್ತಮ ಸಂದೇಶ
ಸಾರುವ ಪೌರಾಣಿಕ ಹಾಗೂ ಹಾಸ್ಯಭರಿತ ರೂಪಕ ಮತ್ತು ನಾಟಕಗಳನ್ನು ಪ್ರದರ್ಶಿಸಿದರು.

ಮಕ್ಕಳಿಂದ ಪ್ರದರ್ಶಿಸಲ್ಪಟ್ಟ ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಲು ನರಗುಂದ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಆಗಮಿಸಿದ್ದ ಜನಸಾಗರದ ಮಧ್ಯೆ ವಿದ್ಯಾರ್ಥಿಗಳಿಂದ ಪ್ರದರ್ಶಿಸಲ್ಪಟ್ಟ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದವು.

Advertisement

ಪ್ರಾರಂಭದಲ್ಲಿ ನಡೆದಾಡುವ ದೇವರು ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಖ್ಯಾತ ಚಿತ್ರನಟ ಡಾ|ಪುನೀತ್‌ ರಾಜಕುಮಾರ್‌ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯ ಅತಿಥಿಗಳಾಗಿ ಸಿಪಿಐ ಮಲ್ಲಯ್ಯ ಮಠಪತಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿ.ಜಿ.ಮಮಟಗೇರಿ, ಉಪಾಧ್ಯಕ್ಷ ಸಿ.ಎನ್‌.ಮಂಟೂರ, ಕಾರ್ಯದರ್ಶಿ ಎ.ಸಿ.ವಿರಕ್ತಮಠ, ಖಜಾಂಚಿ ಜಿ.ಎಸ್‌.ಜವಳಿ, ನಿರ್ದೇಶಕರಾದ ಮಾರುತಿ ಚವ್ಹಾಣ, ಕಿರಣಕುಮಾರ ಕಳಸ್ಕರ, ಎಸ್‌.ಎಸ್‌.ಹೊಸಕೇರಿಮಠ, ಎಸ್‌ .ಸಿ.ಕಲ್ಮಠ, ಜೀವ ವೈವಿಧ್ಯ ಸಂಶೋಧಕರೂ ಆಗಿರುವ ಪ್ರಾಚಾರ್ಯ ಮಂಜುನಾಥ ಎಸ್‌. ನಾಯಕ ಹಾಗೂ ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಪುಷ್ಪಾ ಪಾವಲಿ, ಭಾಗ್ಯಶ್ರೀ ಜವಳಿಮಠ, ಸುಜಾತಾ ಪಾಟೀಲ, ರಜೀಯಾ ಶೇಖ್‌, ಮಹಾಲಕ್ಷ್ಮೀ, ಗಿರಿಜಾ ಕವಲೂರ, ರಮ್ಯಾ, ವೀಣಾ ಮರಾಠೆ, ಬಹಾದ್ದೂರ ಖಾನ ಕಾರ್ಯಕ್ರಮದ ನಿರೂಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next