Advertisement

ಪರೀಕ್ಷೆ ಬಗ್ಗೆ ಹೆಚ್ಚು ಆತಂಕ ಬೇಡ : ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕಿವಿಮಾತು

12:52 AM Apr 08, 2021 | Team Udayavani

ಲಾಕ್‌ಡೌನ್‌, ಶಾಲೆ ಆರಂಭ, ಮತ್ತೆ ತರಗತಿ ಸ್ಥಗಿತ… ಈ ಎಲ್ಲ ಗೊಂದಲಗಳ ನಡುವೆ ಪರೀಕ್ಷೆ ಕಾಲ ಸಮೀಪಿಸಿದೆ. ದೇಶದ ಮಕ್ಕಳಿಗೆ ಧೈರ್ಯ ತುಂಬುವ ಸಲುವಾಗಿ ಪ್ರಧಾನಿ ಬುಧವಾರ “ಪರೀಕ್ಷಾ ಪೇ ಚರ್ಚಾ’ ನಡೆಸಿದರು. ಶಿಕ್ಷಣ ಸಚಿವಾಲಯ ಆಯೋಜಿಸಿದ್ದ ಸಂವಾದದಲ್ಲಿ 9 -10ನೇ ತರಗತಿ ಮಕ್ಕಳೇ ಶೇ. 60ರಷ್ಟು ಪಾಲ್ಗೊಂಡಿದ್ದರು.

Advertisement

ಇದೇ ಅಂತಿಮ ಪರೀಕ್ಷೆ ಅಲ್ಲ… ಭಯ ಬೇಡ
– ಇದೇ ನಿಮ್ಮ ಬದುಕಿನ ಅಂತಿಮ ಪರೀಕ್ಷೆ ಅಲ್ಲ. ಇದು ಸಣ್ಣ ಟೆಸ್ಟ್‌ ಅಷ್ಟೇ. ಹೀಗಾಗಿ ಪರೀಕ್ಷೆ ಬಗ್ಗೆ ಒತ್ತಡವೂ ಬೇಡ. ಭಯವನ್ನೂ ಇಟ್ಟುಕೊಳ್ಳಬೇಡಿ.

– ಎಲ್ಲ ತುಮುಲಗಳನ್ನೂ ಪರೀಕ್ಷಾ ಕೊಠಡಿಯಿಂದ ಹೊರಗೆ ಇಡಿ. ಪ್ರಶಾಂತ ಚಿತ್ತದಿಂದ ಪ್ರಶ್ನೆಗಳ ಮೇಲಷ್ಟೇ ಗಮನ ಕೇಂದ್ರೀಕರಿಸಿ.

– ನಿಮ್ಮ ಕನಸಿನತ್ತ ಕಾರ್ಯೋನ್ಮುಖವಾದಷ್ಟು, ಗುರಿ ಸ್ಪಷ್ಟವಾಗುತ್ತಾ ಹೋಗುತ್ತದೆ.

– ವಿರಾಮದ ಸಮಯ ಸಿಕ್ಕಿದಾಗ ಉತ್ಪಾದನಾತ್ಮಕ ಚಿಂತನೆಗಳತ್ತ ಕುತೂಹಲ ಬೆಳೆಸಿ. ಸಮಯ ತಿನ್ನುವ ಸಂಗತಿಗಳಿಂದ ದೂರ ಇದ್ದು ಬಿಡಿ.

Advertisement

– ಮೊದಲು ಕಠಿನ ವಿಷಯಗಳನ್ನೇ ಓದಿಗೆ ಆರಿಸಿಕೊಳ್ಳಿ. ಅನಂತರ ಸರಳ ವಿಚಾರಗಳತ್ತ ಚಿತ್ತ ನೆಡಿ. ಕಠಿನ ವಿಷಯವೆಂದು ಅದಕ್ಕೆ ಬೆನ್ನು ಹಾಕುವುದರಿಂದ ನಷ್ಟವೇ ಅಧಿಕ.

ಪೋಷಕರಿಗೂ ಟಿಪ್ಸ್‌
– ಮಕ್ಕಳು ಚಿಕ್ಕವರಿದ್ದಾಗ ಪೋಷಕರು ಮಕ್ಕಳಂತೆಯೇ ನಲಿಯುತ್ತಾರೆ. ಅದೇ ಮಕ್ಕಳು ಬೆಳೆಯುತ್ತಿದ್ದಂತೆ ಪೋಷಕರು, ಇನ್‌ಸ್ಟ್ರಕ್ಟರ್‌ ಮತ್ತು ಇನ್‌ಸ್ಪೆಕ್ಟರ್‌ ಆಗುತ್ತಾರೆ. ಇದನ್ನೇ ಮಾಡಿ ಅಂತ ಮಕ್ಕಳಿಗೆ ಸೂಚಿಸಬೇಡಿ. ಅವರೊಂದಿಗೆ ಸ್ನೇಹಿತರಾಗಿರಿ. ಸುತ್ತಲಿನ ಜಗವನ್ನು ಅನ್ವೇಷಿಸಲು ಅವರಿಗೆ ಬಿಡಿ.

– ಮಕ್ಕಳು ತುಂಬಾ ಸ್ಮಾರ್ಟ್‌. ಮಕ್ಕಳೊಳಗೆ ನೀವು ನೋಡಬಯಸುವ ಬೆಳಕನ್ನು ಅವರೊಳಗಿಂದಲೇ ನೀವು ಬೆಳಗಿಸಬೇಕು.

– ಆದಷ್ಟು ಮಕ್ಕಳ ಜತೆಗೇ ಇರಿ. ಅವರನ್ನು ಅರಿತುಕೊಳ್ಳುವ ಕೆಲಸ ಮಾಡಿ. ಅವರ ಧ್ವನಿಗೆ ಕಿವಿಗೊಡಿ.

ಬೆಂಗಳೂರಿನ ವಿದ್ಯಾರ್ಥಿ ಪ್ರಶ್ನೆ
ಬೆಂಗಳೂರಿನ ವಿದ್ಯಾರ್ಥಿ ಅಕ್ಷಯ್‌ ಕೊಕಾಟು³ರೆ, “ಮಕ್ಕಳಲ್ಲಿ ಒಳ್ಳೆಯ ವರ್ತನೆ ರೂಪಿಸಲು ಅತ್ಯಂತ ಸೂಕ್ತ ವಿಧಾನ ಯಾವುದು?’ ಎಂದು ಕೇಳಿದ್ದರು. ಇದಕ್ಕೆ ಪ್ರಧಾನಿ, “ಇದಕ್ಕೆ ಉತ್ತರಿಸುವುದು ತುಸು ಕಠಿನವೇ. ಇದಕ್ಕೂ ಮೊದಲು ನಿಮಗೆ ನೀವೇ ಚಿಂತನೆ ಮಾಡಿ… ಆತ್ಮ ಚಿಂತನೆ ಜತೆಗಿದ್ದರೆ ಈ ಬದುಕನ್ನು ಗೆಲ್ಲುವುದು ಯಾರಿಗೂ ಕಷ್ಟವಾಗದು. ಬದುಕಿನಲ್ಲಿ ಮೌಲ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಿ’ ಎಂದು ಉತ್ತರಿಸಿದರು.

ಅನುಷಾಗೆ ದೊರೆಯದ ಅವಕಾಶ
ಕುಂದಾಪುರ: “ಪರೀಕ್ಷಾ ಪೆ ಚರ್ಚಾ’ಕ್ಕೆ ಆಯ್ಕೆಯಾಗಿದ್ದ ಅಲ್ಬಾಡಿ – ಆರ್ಡಿಯ ಚಾರಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನುಷಾ ಅವರಿಗೆ ಸಮಯದ ಕೊರತೆಯಿಂದಾಗಿ ಮಾತನಾಡಲು ಅವಕಾಶ ದೊರೆಯಲಿಲ್ಲ.

ಸಂಜೆ 7ಕ್ಕೆ ಆರಂಭಗೊಂಡ ಸಂವಾದ 8.30ರ ವರೆಗೆ ನಡೆಯಿತು. ಆದರೆ ವರ್ಚುವಲ್‌ ಸಂವಾದದಲ್ಲಿ ಸಮಯದ ಅಭಾವ‌ದಿಂದ 15 ಮಂದಿಗೂ ಮಾತನಾಡಲು ಅವಕಾಶ ಸಿಗಲಿಲ್ಲ. ಅನುಷಾ ಅವರು ಪ್ರಧಾನಿಯವರಿಗೆ ಪ್ರಶ್ನೆಯನ್ನು ಸಿದ್ಧಪಡಿಸಿಕೊಂಡಿದ್ದರು. ಸಂವಾದಕ್ಕೆ ದೇಶದ 10.39 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದು, 30 ಶಾಲೆಗಳು ಆಯ್ಕೆಯಾಗಿದ್ದವು. ಇದರಲ್ಲಿ ರಾಜ್ಯದ ಆರ್ಡಿ- ಅಲ್ಬಾಡಿ ಶಾಲೆ ಸೇರಿದಂತೆ ಎರಡು ಶಾಲೆಗಳಷ್ಟೇ ಆಯ್ಕೆಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next