Advertisement

ಹಠಮಾರಿಗಳ ಲವ್‌ಸ್ಟೋರಿ!

05:35 AM Jul 14, 2017 | Karthik A |

‘ಚಂಡಿ ಗೊತ್ತು, ಚಾಮುಂಡಿ ಗೊತ್ತು. ಆದರೆ, ‘ಪರ್ಚಂಡಿ’ ಅಂದರೆ ಯಾರು? ಈ ಪ್ರಶ್ನೆ ಸಾಮಾನ್ಯವಾಗಿಯೇ ಅಲ್ಲಿ ಕೇಳಿಬಂತು. ಹಠ ಮಾಡುವ ಹೆಣ್ಣಿಗೆ ಚಂಡಿ ಅನ್ನುವುದಾದರೆ, ಹೆಣ್ಣಿನಷ್ಟೇ ಹಠ ಮಾಡುವ ಗಂಡಿಗೆ ‘ಪರ್ಚಂಡಿ’ ಅಂತಾರೆ ಎಂಬ ಉತ್ತರ ಕೂಡ ಅಲ್ಲೇ ಬಂತು. ಅಂದಹಾಗೆ, ಇದು ‘ಪರ್ಚಂಡಿ’ ಚಿತ್ರದ ವಿಷಯ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇತ್ತೀಚೆಗೆ ಆಡಿಯೋ ಸಿಡಿ ಬಿಡುಗಡೆ ಮಾಡುವ ಮೂಲಕ ಚಿತ್ರದ ಪ್ರಚಾರಕ್ಕೆ ಮುಂದಾಯಿತು.

Advertisement

ನಿರ್ದೇಶಕ ಜೂಮ್‌ ರವಿಗೆ ಇದು ಮೊದಲ ಚಿತ್ರ. ಅವರು ಈ ಚಿತ್ರ ಮಾಡಲು ಸಾಕಷ್ಟು ಸೈಕಲ್‌ ತುಳಿದಿದ್ದಾರೆ. ಅಷ್ಟೇ ಅವಮಾನವನ್ನೂ ಅನುಭವಿಸಿದ್ದಾರೆ. ಆದರೆ, ಅಷ್ಟೇ ತಾಳ್ಮೆಯಿಂದ ಇದ್ದುದ್ದಕ್ಕೆ ಇಂದು ‘ಪರ್ಚಂಡಿ’ ಸಿನಿಮಾ ಮಾಡಿ, ರಿಲೀಸ್‌ಗೆ ಅಣಿಯಾಗಿದ್ದಾರೆ. ‘ಇದು ಮೂರು ವರ್ಷದ ಪ್ರಯತ್ನದ ಫ‌ಲ. ಚಿತ್ರಕ್ಕೆ ಕಥೆ ಬರೆಯುವಾಗ, ಮಹದೇವ್‌ ನಾಯಕರನ್ನಾಗಿಸಬೇಕು ಎಂಬ ಮನಸ್ಸಾಯ್ತು. ಯಾಕೆಂದರೆ, ಅವರಲ್ಲಿ ಸಿನಿಮಾ ಪ್ರೀತಿ ಇತ್ತು. ನಿರ್ಮಾಪಕರನ್ನು ಹುಡುಕುವುದರಲ್ಲಿ ಅವರು ಸೈಕಲ್‌ ತುಳಿದಿದ್ದಾರೆ. ಕೊನೆಗೆ ಶಿವಾನಂದ್‌ ಕಥೆ ಕೇಳಿ, ನಮಗೆ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದರಿಂದ ಈ ಚಿತ್ರವಾಗಿದೆ. ಇದೊಂದು ಗ್ರಾಮೀಣ ಸೊಗಡಿನ ಕಥೆ. ಸುಮಾರು ಐದು ದಶಕದ ಹಿಂದೆ ಇದ್ದಂತಹ ಗ್ರಾಮೀಣ ವಾತಾವರಣ, ಅಲ್ಲಿನ ಪರಿಸ್ಥಿತಿ, ಗ್ರಾಮೀಣರ ಮನಸ್ಥಿತಿ ಇಲ್ಲಿ ಕಟ್ಟಿಕೊಡಲಾಗಿದೆ. ಜತೆಗೊಂದು ಮುದ್ದಾದ ಪ್ರೇಮಕಥೆಯೂ ಇದೆ. ಹಳ್ಳಿಕಥೆ ಆದ್ದರಿಂದ, ಅಲ್ಲಿನ ನೇಟಿವಿಟಿ, ಆಗಿನ ಸ್ಥಿತಿಗತಿ ಹೇಗಿತ್ತು ಅನ್ನೋದನ್ನು ಹಾಗೆಯೇ ತೋರಿಸಲು ಪ್ರಯತ್ನಿಸಿದ್ದೇನೆ’ ಅಂದರು ನಿರ್ದೇಶಕರು. ನಿರ್ಮಾಪಕ ಶಿವಾನಂದ್‌ ಅವರಿಗೆ ಸಿನಿಮಾ ಮಾಡುವ ಯೋಚನೆ ಇರಲಿಲ್ಲವಂತೆ. ನಿರ್ದೇಶಕರು ಈ ಕಥೆ ಹೇಳಿದಾಗ, ಗ್ರಾಮೀಣ ಕಥೆಯಲ್ಲಿ ಹೊಸದೇನೋ ಇದೆ ಅಂತೆನಿಸಿ, ಒಂದಷ್ಟು ಹೊಸ ಅಂಶಗಳನ್ನಿಡುವಂತೆ ಸಲಹೆ ಕೊಟ್ಟು ಈ ಚಿತ್ರ ಮಾಡಿದ್ದಾಗಿ ಹೇಳಿಕೊಂಡರು ಅವರು.

ನಾಯಕ ಮಹದೇವ್‌ ಈವರೆಗೆ 54 ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರ ಮಾಡಿದ್ದಾರೆ. ಈಗ ಹೀರೋ ಆಗೋಕೆ ಕಾರಣ, ನಿರ್ದೇಶಕ ಮತ್ತು ನಿರ್ಮಾಪಕರು ಅಂತ ಅವರ ಗುಣಗಾನ ಮಾಡಿದರು. ಅವರಿಗೆ ಚಿಕ್ಕಂದಿನಲ್ಲಿದ್ದಾಗಲೇ ಹೀರೋ ಆಗುವ ಹಠ ಇತ್ತಂತೆ. ಅದು ಈಗ ಈಡೇರಿದೆ. ಇದೊಂದು ಹಳ್ಳಿ ಸೊಗಡು ತುಂಬಿರುವ ಸಿನಿಮಾ. ನೋಡಿದವರಿಗೆ ಖಂಡಿತ ಇಷ್ಟವಾಗುತ್ತೆ ಎಂಬ ವಿಶ್ವಾಸ ಅವರದು. ನಾಯಕಿ ಕಲ್ಪನಾಗೆ ಇದು ಮೊದಲ ಚಿತ್ರ. ಅವರಿಲ್ಲಿ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಚಪ್ಪಲಿ ಇಲ್ಲದೆಯೇ ಇಡೀ ಸಿನಿಮಾ ಕಾಣಿಸಿಕೊಂಡಿದ್ದಾರಂತೆ. ಒಂದೇ ಕಾಸ್ಟ್ಯೂಮ್‌ನಲ್ಲಿ ಸುಮಾರು 15 ದಿನ ಇದ್ದರಂತೆ. ಅದು ಯಾಕೆ ಅಂತ ಅವರು ಈಗ ಸಿನಿಮಾ ಟ್ರೇಲರ್‌, ಸಾಂಗ್‌ ನೋಡಿದ ಮೇಲೆ ಗೊತ್ತಾಯಿತಂತೆ.

ಚಿತ್ರಕ್ಕೆ ವಿನಯ್‌ ರಂಗದೊಳ್‌ ಸಂಗೀತ ನೀಡಿದ್ದಾರೆ. ಅವರಿಗೆ ಇದು ಮೊದಲ ಚಿತ್ರವಂತೆ. “ಚಿತ್ರದಲ್ಲಿ ಎರಡು ಹಾಡುಗಳಿದ್ದು, ನಿರ್ದೇಶಕರೇ ಹಾಡು ಬರೆದಿದ್ದಾರೆ. ವಿಜಯಪ್ರಕಾಶ್‌ ಹಾಗೂ ‘ಸರಿಗಮಪ’ ಖ್ಯಾತಿಯ ಹರ್ಷ ಇಲ್ಲಿ ಹಾಡಿದ್ದಾರೆ. ಇದು ನನ್ನಮಟ್ಟಿಗಿನ ಹೊಸ ಪ್ರಯತ್ನ ಅಂದರು ಅವರು. ನಿರ್ಮಾಪಕರ ತಾಯಿ ಕಮಲಮ್ಮ ಹಾಡು ಬಿಡುಗಡೆ ಮಾಡಿ, ಶುಭಹಾರೈಸಿದರು.

Advertisement

Udayavani is now on Telegram. Click here to join our channel and stay updated with the latest news.

Next