ಉಡುಪಿ: ಬೈಲೂರು ಉಮಿಕಲ್ ಬೆಟ್ಟದ ಮೇಲೆ ನಿರ್ಮಿಸಿರುವ ಪರಶುರಾಮಥೀಮ್ ಪಾರ್ಕ್ ನಲ್ಲಿನ ಪರಶುರಾಮ ಮೂರ್ತಿ ನಿರ್ಮಾಣದ ಹಿಂದಿನ ಅಕ್ರಮ ವಿಳಂಬವಾಗಿ ಬೆಳಕಿಗೆ ಬಂದಿದೆ.
ವಂಚನೆ ಮಾಡಿದ ಶಿಲ್ಪಿ ಕೃಷ್ಣ ನಾಯ್ಕ ಈಗಾಗಲೇ ಬಂಧನಕ್ಕೊಳಗಾಗಿದ್ದು , ಉಳಿದ ಆರೋಪಿಗಳನ್ನು ಪೊಲೀಸರು ತತ್‌ಕ್ಷಣವೇ ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಆಗ್ರಹಿಸಿದರು.
ಪರಶುರಾಮನ ಮೂರ್ತಿಯ ಸೊಂಟದ ಮೇಲ್ಭಾಗ ಎಲ್ಲಿಗೆ ಹೋಗಿದೆ ಎಂಬ ಬಗ್ಗೆಯೂ ಪೊಲೀಸರು ಸೂಕ್ತ ತನಿಖೆ ನಡೆಸಬೇಕು. ಈ ಅಕ್ರಮದಲ್ಲಿ ಹಲವರ ಕೈವಾಡವಿದ್ದು ಪೊಲೀಸರು ಎಲ್ಲರನ್ನು ವಿಚಾರಣೆಗೆ ಒಳಗಪಡಿಸಬೇಕು. ಪ್ರಕರಣವನ್ನು ಅತಿ ಶೀಘ್ರದಲ್ಲಿ ಇರ್ತ್ಯಪಡಿಸಿ. ಉಮಿಕಲ್ ಬೆಟ್ಟದ ಮೇಲೆ ಹೊಸ ಮೂರ್ತಿಯನ್ನು ನಿರ್ಮಿಸಿ ಪ್ರವಾಸಿಗರಿಗೆ ಮುಕ್ತಗೊಳಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪರಶುರಾಮನ ಮೂರ್ತಿ ವಿಚಾರದಲ್ಲಿ ಶಿಲ್ಪಿ ಕೃಷ್ಣ ನಾಯ್ಕಗೆ ತೊಂದರೆ ನೀಡುವುದು ನಮ್ಮ ಉದ್ದೇಶವಲ್ಲ. ತಪ್ಪಿಗೆ ನೇರ ಹೊಣೆಯಾಗಿರುವವರು ವಿಧಾನಸಭೆ ಸದಸ್ಯರಾಗಿದ್ದು, ಕಲಾವಿದ ಮಾತ್ರ ಜೈಲುಪಾಲಾಗಿದ್ದಾನೆ. ಮೂರ್ತಿ ನಿರ್ಮಾಣಕ್ಕೆಂದು ಮಂಜೂರಾದ 1.25 ಕೋಟಿ ರೂ.ಗಳನ್ನು ಟೆಂಡರ್‌ಗೂ ಮೊದಲೇ ಕೃಷ್ಣ ನಾಯ್ಕಗೆ ನೀಡಿದ್ದಾರೆ. ಕೇವಲ 45 ದಿನಗಳಲ್ಲಿ 33 ಅಡಿ ಕಂಚಿನ ಮೂರ್ತಿ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಇದು ಕೃಷ್ಣ ನಾಯ್ಕ ಒಬ್ಬರ ಕೆಲಸವಲ್ಲ , ನಿರ್ಮಿತಿ ಕೇಂದ್ರದ ಎಂಜಿನಿಯರ್‌ಗಳು ಇದರಲ್ಲಿ ಭಾಗಿಯಾಗಿದ್ದಾರೆ. ಮೂರ್ತಿ ನಿರ್ಮಾಣದ ಹಣ ಎಲ್ಲಿಗೆ ಹೋಯಿತು ಎಂದು ಶಾಸಕ ಸುನಿಲ್ ಕುಮಾರ್ ಕಾರ್ಕಳದ ಜನರಿಗೆ ಸ್ಪಷ್ಟನೆ ನೀಡುವ ಜತೆಗೆ ಜನರ ಎದುರು ಕ್ಷಮೆಯಾಚಿಸಬೇಕು. ಈ ಅಕ್ರಮದಲ್ಲಿ ಶಾಸಕರೂ ಇರುವುದು ಸಾಬೀತಾದಲ್ಲಿ ಶಾಸಕರನ್ನೂ ಪೊಲೀಸರು ಬಂಧಿಸಬೇಕು ಎಂದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭೋದ್ ರಾವ್, ತಾ.ಪಂ ಮಾಜಿ ಸದಸ್ಯ ಸುಧಾಕರ್ ಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಸುಬೀತ್ ಎನ್.ಆರ್., ಪುರಸಭೆಯ ಸದಸ್ಯ ವಿವೇಕಾನಂದ ಶೆಣೈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.