Advertisement

ವೇದಾವತಿ ನದಿಗೆ ವಿವಿ ಸಾಗರದಿಂದ ನೀರು ಹರಿಸಿ

03:31 PM Mar 08, 2020 | Naveen |

ಪರಶುರಾಂಪುರ: ಆಳುವ ಸರ್ಕಾರಗಳು ಹಳ್ಳಿಗಾಡಿನ ಜಲಮೂಲಗಳಿಗೆ ನದಿಗಳು, ಅಣೆಕಟ್ಟು ಮತ್ತು ಜಲಾಶಯಗಳಿಂದ ನೀರು ಹರಿಸಿ ರೈತರ ಬದುಕನ್ನು ಹಸನು ಮಾಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಒತ್ತಾಯಿಸಿದರು.

Advertisement

ಗ್ರಾಮದ ಮುಖ್ಯ ವೃತ್ತದಲ್ಲಿ ಶನಿವಾರ ವೇದಾವತಿ ನದಿ ಸಂರಕ್ಷಣಾ ವೇದಿಕೆ, ವಿಶ್ವಪಥ, ಜೈ ಭಗತ್‌ ಸಿಂಗ್‌ ಸಂಘ ಸೇರಿದಂತೆ ಹೋಬಳಿ ವ್ಯಾಪ್ತಿಯ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನ ಜೀವನದಿ ವೇದಾವತಿ ನೀರಿಲ್ಲದೆ ಬರಡಾಗಿದೆ. ಕೂಡಲೇ ಜಿಲ್ಲಾಡಳಿತ ನದಿಗೆ ವಿವಿ ಸಾಗರದಿಂದ ನೀರುಣಿಸಬೇಕು. ಒಂದು ವೇಳೆ ನೀರು ಹರಿಸದೇ ಹೋದರೆ ನಮ್ಮ ಹೋರಾಟ ತೀವ್ರಗೊಳ್ಳುತ್ತದೆ ಎಂದು ಎಚ್ಚರಿಸಿದರು.

ಪಿಲ್ಲಹಳ್ಳಿ ಸಿ. ಚಿತ್ರಲಿಂಗಪ್ಪ ಮಾತನಾಡಿ, ಸರ್ಕಾರ ವೇದಾವತಿ ನದಿಗೆ ನೀರು ಬಿಡುವ ಜತೆಗೆ ರಾಜ್ಯದಲ್ಲೇ ಅತ್ಯಂತ ಹೆಚ್ಚು ಭೌಗೋಳಿಕ ವ್ಯಾಪ್ತಿ ಹೊಂದಿರುವ ಪರಶುರಾಂಪುರವನ್ನು ತಾಲೂಕನ್ನಾಗಿ ಘೋಷಿಸಬೇಕು. ಈ ಭಾಗದ ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು.

ಪರಶುರಾಂಪುರ ಹೋಬಳಿಯ ಜನ-ಜಾನುವಾರುಗಳು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ. ಆದ್ದರಿಂದ ಜಿಲ್ಲಾಧಿಕಾರಿಗಳು ವಿವಿ ಸಾಗರದಿಂದ ವೇದಾವತಿ ನದಿಗೆ ನೀರು ಹರಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಚಳ್ಳಕೆರೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್‌ ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರಥಮವಾಗಿ ಭದ್ರಾ ಮೇಲ್ದಂಡೆ ಯೋಜನೆಗೆ ಹಣಕಾಸಿನ ಮಂಜೂರಾತಿ ನೀಡಿ ಕಾಮಗಾರಿಗೆ ಚಾಲನೆ ನೀಡಿದ್ದರು. ಈಗ ಅವರ ಅಧಿಕಾರಾವಧಿಯಲ್ಲೇ ಭದ್ರಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

ಬಿಜೆಪಿ ಮುಖಂಡ ಸೋಮಶೇಖರ ಮಂಡಿಮಠ ಮಾತನಾಡಿ, ಜಿಲ್ಲಾಡಳಿತ ಪರಶುರಾಂಪುರ ಹೋಬಳಿಯ ಜನತೆ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ವೇದಾವತಿ ನದಿ ಹತ್ತಾರು ವರ್ಷಗಳಿಂದ ನೀರನ್ನೇ ಕಂಡಿಲ್ಲ. ಕೂಡಲೇ ವೇದಾವತಿ ನದಿಗೆ ವಿವಿ ಸಾಗರದಲ್ಲಿ ಸಂಗ್ರಹವಾದ ನೀರನ್ನು ಹರಿಸಿ ಜನ-ಜಾನುವಾರುಗಳ ಉಳಿವಿಗೆ ಸಹಕರಿಸಬೇಕು ಎಂದರು. ರೈತ ಮುಖಂಡ ಜೆ.ಓ. ಚನ್ನಕೇಶವ ಮಾತನಾಡಿದರು. ವೇದಾವತಿ ನದಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಡಿ.ವಿ.ಕೆ ಸ್ವಾಮಿ, ಶ್ರೀಕಂಠಪ್ಪ, ಜಿಪಂ ಸದಸ್ಯ ಓಬಳೇಶ್‌, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮದಾಸ್‌, ಪ್ರಧಾನ ಕಾರ್ಯದರ್ಶಿ ಜಯಪಾಲಯ್ಯ, ಬಿಜೆಪಿ ಮಾಜಿ ಅಧ್ಯಕ್ಷರಾದ ಭೂತಲಿಂಗಪ್ಪ, ಮಾತೃಶ್ರೀ ಮಂಜುನಾಥ, ಗ್ರಾಪಂ ಸದಸ್ಯ ತಿಮ್ಮಣ್ಣ, ಚೌಳೂರು ದೇವಣ್ಣ, ನಾಗರಾಜು, ಮಿಲ್ಟ್ರಿ ಸಿದ್ದೇಶಣ್ಣ, ಮಲ್ಲಿಕಾರ್ಜುನ, ಹೂವಿನ ಕುಮಾರ, ಹೊರಕೇರಿ ನಾಗಣ್ಣ,
ಚೌಳೂರು ಸ್ವಾಮಿ ಮತ್ತಿತರರು ಇದ್ದರು. ಪರಶುರಾಂಪುರ ಠಾಣೆ ಪಿಎಸ್‌ಐ ಮಹೇಶ ಹೊಸಕೋಟೆ ಪೊಲೀಸ್‌ ಬಂದೋಬಸ್ತ್ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next