Advertisement

ಪಾರೆಂಕಿ: ಕುಸಿದ ಮೋರಿ ತುರ್ತು ಕ್ರಮಕ್ಕೆ ಆಗ್ರಹ

08:35 AM Sep 05, 2017 | Team Udayavani |

ಮಡಂತ್ಯಾರು: ಪಾರೆಂಕಿ ಗ್ರಾಮದ ಶ್ರೀ ಮಹಿಷಮರ್ದಿನಿ ದೇವಸ್ಥಾನದ ದ್ವಾರದ ಬಳಿಯ ಮೋರಿ ಕುಸಿದಿರುವುದರಿಂದ ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.

Advertisement

ಮಡಂತ್ಯಾರು-ಕಕ್ಯಪದವು ಮುಖ್ಯ ರಸ್ತೆಯಲ್ಲೇ ಇದೂ ಬರುತ್ತದೆ. ಈಗಾಗಲೇ ಮುಖ್ಯರಸ್ತೆ ಹದಗೆಟ್ಟಿದ್ದು, ಡಾಮರು ಕಿತ್ತುಹೋಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗಿದೆ. ಹಲವು ಹೊಂಡಗಳು ನಿರ್ಮಾಣವಾಗಿ ನೀರು ನಿಲ್ಲುತ್ತಿದೆ. ಇದೀಗ ಮೋರಿ ಕುಸಿದ ಪರಿಣಾಮ ಸಮಸ್ಯೆ ಇನ್ನಷ್ಟು ಬಿಗಡಾಯಿಸಿದೆ.

ಕಿರಿದಾದ ರಸ್ತೆ
ದೇವಸ್ಥಾನದ ದ್ವಾರದ ಬಳಿ ರಸ್ತೆ ಕಿರಿದಾಗಿದೆ. ವಾಹನಗಳು ತಮ್ಮ ಎದುರಿಗೆ ಬರುವವರಿಗೆ ಬದಿಯನ್ನು ಬಿಡಲು ಸಾಕಷ್ಟು ಜಾಗವಿಲ್ಲ. ರಸ್ತೆ ಬದಿ ಆಳವಾದ ಚರಂಡಿ ಇದ್ದು ತಡೆಬೇಲಿಯೂ ಇಲ್ಲ. ವಾಹನಕ್ಕೆ ಬದಿ ಬಿಡುವ ಸಂದರ್ಭದಲ್ಲಿ ಚರಂಡಿಗೆ ಬೀಳುವ ಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯ ವಾಹನ ಚಾಲಕರು.

ಮಡಂತ್ಯಾರಿನಿಂದ ಪಾರೆಂಕಿ, ಪಾಂಡವರ ಕಲ್ಲು, ಕಜೆಕಾರು, ಕಕ್ಯಪದವು ರಸ್ತೆಯಲ್ಲಿ ನಿತ್ಯ ವಾಹನ ಸಂಚಾರ ಹೆಚ್ಚಿದ್ದು, ಆಟೋ ರಿಕ್ಷಾ ಮತ್ತು ಜೀಪುಗಳ ಓಡಾಟವೂ ಹೆಚ್ಚಿದೆ. ಬೆಳಗ್ಗೆ ಮತ್ತು ಸಂಜೆ ಶಾಲಾ ಮಕ್ಕಳಿಂದ ತುಂಬಿರುವ ಬಸ್‌ಗಳು ಈ ಮೋರಿಯ ಮೇಲೆ ಹಾದುಹೋಗಬೇಕಿದ್ದು ಅಪಾಯವನ್ನು ಆಹ್ವಾನಿಸುತ್ತಿವೆ.

ತಡೆಗೋಡೆ ಇಲ್ಲ
ಕಕ್ಯಪದವಿಗೆ ಮುಖ್ಯ ರಸ್ತೆಯಾಗಿದ್ದು ಸಾವಿರಾರು ಮಂದಿ ಓಡಾಡುತ್ತಿದ್ದಾರೆ. ಆದರೂ ಮೋರಿಯ ಎರಡೂ ಬದಿ ತಡೆಗೋಡೆ ನಿರ್ಮಿಸಿಲ್ಲ. ಜಿಲ್ಲಾ ಪಂ.ರಸ್ತೆಯಾಗಿದ್ದು ಮೇಲ್ದರ್ಜೆಗೇರಿಸಿ ಡಾಮರು ಹಾಕುವುದಾಗಿ ಶಾಸಕರು ಹೇಳಿದ್ದಾರೆ. ಆದರೆ ರಸ್ತೆ ಹದಗೆಟ್ಟು ಮಳೆಗಾಲದಲ್ಲಿ ಸಂಕಷ್ಟ ಅನುಭವಿಸಿದ್ದರು. ಈಗ ಮೋರಿ ಕುಸಿತಗೊಂಡಿದ್ದು, ಕೂಡಲೇ ಇದನ್ನು ಸರಿಪಡಿಸಿ ಅವಘಡವಾಗುವುದನ್ನು ತಪ್ಪಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

Advertisement

ಬೆರಳು ತೋರಿಸುತ್ತದೆ ಪಂಚಾಯತ್‌ಗಳು
ಜಿ.ಪಂ. ರಸ್ತೆಯ ಅಭಿವೃದ್ಧಿ ಬಗ್ಗೆ  ಜಿ.ಪಂ.ಸದಸ್ಯರಲ್ಲಿ ಕೇಳಿದರೆ, ನಮ್ಮಲ್ಲಿ ಅನುದಾನ ಇಲ್ಲ. ಸರಕಾರ 13ನೇ ಹಣಕಾಸು ಯೋಜನೆ ಪರಿವರ್ತನೆಯಾಗಿ 14ನೇ ಹಣಕಾಸು ಮೂಲಕ ಪಂಚಾಯತ್‌ಗೆ ನೀಡುತ್ತದೆ ಎನ್ನುತ್ತಾರೆ. ಪಂಚಾಯತ್‌ ಅಧಿಕಾರಿಗಳಲ್ಲಿ ಕೇಳಿದರೆ ಅದು ಜಿ.ಪಂ. ರಸ್ತೆ. ನಮ್ಮಲ್ಲಿ ಅನುದಾನ ಇಲ್ಲ ಎನ್ನುತ್ತಿರುವುದು ಗ್ರಾಮಸ್ಥರನ್ನು ಗೊಂದಲದಲ್ಲಿ ಮುಳುಗಿಸಿದೆ.

– ಪ್ರಮೋದ್‌ ಬಳ್ಳಮಂಜ

Advertisement

Udayavani is now on Telegram. Click here to join our channel and stay updated with the latest news.

Next