ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಮತ್ತು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಸಿಎಂ ಎಚ್.ಡಿ.ಕುಮಾರಸ್ವಾಮಿ ಅಣತಿಯಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಶನಿವಾರ ದೆಹಲಿಯಲ್ಲಿ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆ ನಡೆದಿದ್ದು, ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜತೆ ಪ್ರತ್ಯೇಕವಾಗಿ ಚರ್ಚೆ ನಡೆಸಿರುವ ಸಿದ್ದರಾಮಯ್ಯ, ಈ ಇಬ್ಬರು ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ. ಕುಮಾರಸ್ವಾಮಿ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಂಡರೂ ಅದನ್ನು ಪ್ರಶ್ನಿಸದೇ ಮೌನವಾಗಿರುವುದರಿಂದ ಪಕ್ಷಕ್ಕೆ ನಷ್ಟವುಂಟಾಗುತ್ತಿದೆ. ಇದು ಕಾರ್ಯಕರ್ತರ ಬೇಸರಕ್ಕೂ ಕಾರಣವಾಗುತ್ತಿದೆ. ಸ್ಥಳೀಯ ಮಟ್ಟದಲ್ಲಿ ಸಿಎಂ ನಿರ್ಧಾರಗಳನ್ನು ಸಮರ್ಥಿಸಿಕೊಳ್ಳುವುದು ಕಾಂಗ್ರೆಸ್ ಕಾರ್ಯಕರ್ತರಿಗೆ ಕಷ್ಟವಾಗುತ್ತಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ಸರ್ಕಾರದ ಮಹತ್ವದ ಯೋಜನೆಗಳಿಗೆ ಹಿನ್ನಡೆಯಾಗುತ್ತಿದ್ದರೂ ಈ ಇಬ್ಬರೂ ನಾಯಕರು ಮಾತನಾಡುತ್ತಿಲ್ಲ ಎಂಬುದನ್ನು ರಾಹುಲ್ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ. ಅನ್ನಭಾಗ್ಯಕ್ಕೆ ಕತ್ತರಿ, ಮಾತೃಪೂರ್ಣವನ್ನು ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆ ಜತೆ ವಿಲೀನಗೊಳಿಸುವ ಚಿಂತನೆ ಸೇರಿದಂತೆ ಸರ್ಕಾರದ ಮತ್ತಿತರ ಧೋರಣೆಗಳು ಸಿದ್ದರಾಮಯ್ಯ ಅವರಿಗೆ ಅತೃಪ್ತಿ ತಂದಿವೆ ಎಂದು ಹೇಳಲಾಗಿದೆ.
ಉತ್ತರದಲ್ಲೂ ಕಷ್ಟ: ಇನ್ನು ಸ್ಥಳೀಯ ಸಂಸ್ಥೆ ಚುನಾವಣೆ ವೇಳೆ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವುದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್‌ಗೆ ನಷ್ಟವಾಗಲಿದೆ. ಇದರಿಂದ ಜೆಡಿಎಸ್ ಬಲವರ್ಧನೆಗೂ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಸದ್ಯ ಇಲ್ಲಿ ಕಾಂಗ್ರೆಸ್‌ಗೆ ಬಿಜೆಪಿ ನೇರ ಸ್ಪರ್ಧಿಯಾಗಿದೆ. ಮೈತ್ರಿ ಮಾಡಿಕೊಂಡರೆ ಈ ಭಾಗದಲ್ಲಿ ಜೆಡಿಎಸ್ ಅನ್ನು ತಳಮಟ್ಟದಿಂದ ಬಲಗೊಳಿಸಲು ಅವಕಾಶ ಕಲ್ಪಿಸಿದಂತಾಗುತ್ತದೆ. ಅದು ಭವಿಷ್ಯದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಸಿದ್ದರಾಮಯ್ಯ ರಾಹುಲ್ ಅವರಿಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ, ಲೋಕಸಭೆ ಚುನಾವಣೆಗೆ ಮುನ್ನವೂ ಮೈತ್ರಿ ಮಾಡಿಕೊಳ್ಳುವ ಮೊದಲು ಸ್ಥಳೀಯ ನಾಯಕರ ಜೊತೆಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ ಎನ್ನಲಾಗಿದೆ. ಆದರೆ, ರಾಹುಲ್ ಗಾಂಧಿ ಮೈತ್ರಿಯ ಬಗ್ಗೆ ಸ್ಪಷ್ಟವಾಗಿ ನಿರಾಕರಿಸದೇ ಲೋಕಸಭೆ ಚುನಾವಣೆಯಲ್ಲಿ ಜಾತ್ಯತೀತ ಶಕ್ತಿಗಳು ಒಂದಾಗಿ ಬಿಜೆಪಿಯನ್ನು ಸೋಲಿಸುವುದಷ್ಟೇ ನಮ್ಮ ಗುರಿ. ಆ ಹಿನ್ನೆಲೆಯಲ್ಲಿ ಕಾರ್ಯ ನಿರ್ವಹಿಸಬೇಕಿದೆ ಎಂದು ಸಲಹೆ ನೀಡಿದ್ದಾರೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.
ಜಿಲ್ಲಾ ಮುಖಂಡರ ಸಭೆಯಲ್ಲೂ ಅಪಸ್ವರ
ಶುಕ್ರವಾರ ಕರೆಯಲಾಗಿದ್ದ ಪಕ್ಷದ ಜಿಲ್ಲಾಧ್ಯಕ್ಷರು, ಸಂಸದರು, ಸಚಿವರು, ಶಾಸಕರು, 2018 ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅಭ್ಯರ್ಥಿಗಳು ಹಾಗೂ 2014 ರ ಲೋಕಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಭೆಯಲ್ಲಿಯೂ ಲೋಕಸಭೆ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಅಪಸ್ವರ ವ್ಯಕ್ತವಾಗಿದೆ. ಸ್ಥಳೀಯ ನಾಯಕರ ಅಭಿಪ್ರಾಯ ಸಂಗ್ರಹಿಸಿ ಕ್ಷೇತ್ರಗಳ ಹೊಂದಾಣಿಕೆ ಮಾಡಿಕೊಳ್ಳುವಂತೆ ಜಿಲ್ಲಾ ಮುಖಂಡರು ಆಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
– ಶಂಕರ ಪಾಗೋಜಿ