ನಾಲ್ಕು ತಲೆಮಾರುಗಳಿಂದ ಯಕ್ಷ ಪರಂಪರೆ ಮುಂದುವರೆಸುತ್ತಿರುವ ಹಳ್ಳಾಡಿ ಮಲ್ಯ ಮನೆತನದ ದಿವಂಗತ ಸುಬ್ರಾಯ ಮಲ್ಯರ ಯಕ್ಷ ಪ್ರತಿಭೆ ಆರಾಧನೆ ಅದ್ವಿತೀಯವಾದುದು. ಇವರ ಅದ್ಭುತ ಯಕ್ಷ ಪ್ರತಿಭೆಯಿಂದಾಗಿ ಇವರನ್ನು “ದಶಾವತಾರ’ ಎಂದು ಸಂಭೋದಿಸಲಾಗುತ್ತಿತ್ತು. ಪ್ರಸ್ತುತ ಈ ಮನೆತನದ ಯಕ್ಷ ಆರಾಧನೆಯನ್ನು ಸುಬ್ರಾಯ ಮಲ್ಯರ ಮಗ ರಾಕೇಶ್ ಮಲ್ಯ (ಚೆಂಡೆ ಕಲಾವಿದ) ಮತ್ತು ಮಗಳು ಅರುಣ್ ಪೈ ಮುಂದುವರಿಸುತ್ತಿದ್ದು, ಅದರಲ್ಲೂ ಕಿರಣ್ ಪೈ ಯಕ್ಷರಂಗದಲ್ಲಿ ಸಾಕಷ್ಟು ಹೆಸರು ಮಾಡುತ್ತಿದ್ದಾರೆ. ಶಿವಮೊಗ್ಗದಲ್ಲಿ “ಸುಮುಖ’ ಕಲಾಕೇಂದ್ರ ಸ್ಥಾಪಿಸಿ ಯಕ್ಷ ತರಬೇತಿ ನೀಡುತ್ತಿದ್ದಾರೆ. ಶಿವಮೊಗ್ಗದ “ಶ್ರೀ ವಾಗೆªàವಿ ಮಹಿಳಾ ಯಕ್ಷ ಮಂಡಳಿ’ಯ ಕಲಾವಿದೆ “ಸುಮುಖ’ ಕಲಾಕೇಂದ್ರದ ಪ್ರಥಮ ವಾರ್ಷಿಕೋತ್ಸವದಂದು ತನ್ನ ತಂದೆಯ ಹೆಸರಿನಲ್ಲಿ “ಹಳ್ಳಾಡಿ ಸುಬ್ರಾಯ ಮಲ್ಯ ಸ್ಮಾರಕ ಪ್ರಶಸ್ತಿ’ ನೀಡುವ ಪರಂಪರೆಯನ್ನು ಪ್ರಾರಂಭಿಸಿದ್ದಾರೆ. ಯಕ್ಷ ಕಲಾವಿದ ಐನಬೈಲ್ ಪರಮೇಶ್ವರ ಹೆಗಡೆಯವರಿಗೆ ಈ ಚೊಚ್ಚಲ ಪ್ರಶಸ್ತಿಯನ್ನು ಇತ್ತೀಚೆಗೆ ಪ್ರದಾನಿಸಲಾಯಿತು.
ಮೂವತ್ತಕ್ಕೂ ಅಧಿಕ ವರ್ಷಗಳಿಂದ ಯಕ್ಷ ಭಾಗವತ, ಯಕ್ಷಗುರು/ನಿರ್ದೇಶಕ ಪಾತ್ರಧಾರಿ, ಮದ್ದಳೆ – ಚೆಂಡೆ ಕಲಾಕಾರರಾಗಿ ತೊಡಗಿಸಿಕೊಂಡಿರುವ ಐನಬೈಲ್ ಪರಮೇಶ್ವರ ಹೆಗಡೆಯವರು ಉ.ಕ. ಜಿಲ್ಲೆಯ ಸಿದ್ಧಾಪುರ ತಾಲೂಕಿನ ಐನಬೈಲ್ ಗಣಪತಿ ಹೆಗಡೆ ಮತ್ತು ಸುಭದ್ರಾ ದಂಪತಿಯ ಪುತ್ರ. ತಂದೆಯ ಅಪೇಕ್ಷೆಯಂತೆ ಭಾಗವತರಾಗಿ ಯಕ್ಷರಂಗಕ್ಕೆ ಧುಮುಕಿದರು. ಬಾಳೆಗದ್ದೆ ಕೃಷ್ಣ ಭಾಗವತ, ಶಿರಳಗಿ ಮಂಜುನಾಥ ಭಟ್ಟ ಮತ್ತು ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತ ಇವರ ಯಕ್ಷ ಗುರುಗಳು.
ತಾಳಗಳ ತಳಸ್ಪರ್ಶಿ ಜ್ಞಾನ, ಸುಮಧುರ ಶೈಲಿಯಲ್ಲಿ ಗಾಯನ, ಸುಶ್ರಾವ್ಯ ಶಾರೀರ, ಯಕ್ಷಕಲೆಯಲ್ಲಿ ಪ್ರೌಢಿಮೆ ಹೊಂದಿರುವ ಇವರು ಸೋಂದಾ ಮೇಳದಲ್ಲಿ ಕೆಲವು ವರ್ಷ ಸೇವೆ ಸಲ್ಲಿಸುವುದರೊಂದಿಗೆ ನಾಡಿನಾದ್ಯಂತ ಅಸಂಖ್ಯಾತ ಯಕ್ಷ/ತಾಳ ಮದ್ದಳೆಗಳಲ್ಲಿ ಭಾಗವಹಿಸಿ ಯಕ್ಷ ಕಲಾರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಬಭುವಾಹನ, ಧರ್ಮಾಂಗದ, ಸಾಲ್ವ , ಕೃಷ್ಣ, ಚಂದ್ರಹಾಸ, ಅಭಿಮನ್ಯು ಇತ್ಯಾದಿ ಪಾತ್ರಗಳಲ್ಲಿ ಇವರ ಅನನ್ಯ ಪ್ರತಿಭೆ ಪ್ರತಿಫಲಿಸುತ್ತದೆ. ಹೀಗೆಯೇ ಯಕ್ಷಗುರು/ನಿರ್ದೇಶಕರಾಗಿ ಅದೆಷ್ಟೋ ಪ್ರತಿಭೆಗಳನ್ನು ನೀಡಿದ್ದಾರೆ. “ಯಕ್ಷ ಕಲಾ ಬ್ರಹ್ಮ’, “ಯಕ್ಷ ಗುರು’, “ವೃತ್ತಿ ಕೌಶಲ್ಯ’ ಇವೆಲ್ಲ ಬಿರುದುಗಳ ಜೊತೆಗೆ ಹಲವಾರು ಸನ್ಮಾನ/ಗೌರವಗಳು ಅರಸಿ ಬಂದಿವೆ.
ಸಂದೀಪ್ ನಾಯಕ್ ಸುಜೀರ್