Advertisement

Parameshwara; ಪ್ರಜ್ವಲ್‌ ಪ್ರಕರಣದಲ್ಲಿ ಸಿಬಿಐ ತನಿಖೆ ಅಗತ್ಯವಿಲ್ಲ

11:09 PM May 08, 2024 | Team Udayavani |

ಬೆಂಗಳೂರು: ಪ್ರಜ್ವಲ್‌ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವೇ ಇಲ್ಲ. ಎಸ್‌ಐಟಿ ಸಮರ್ಥವಾಗಿದೆ ಎಂದು ಗೃಹ ಸಚಿವ ಡಾ| ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಟಿ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದು ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಕುಮಾರಸ್ವಾಮಿ ಅವರಿಗೆ ಗೊತ್ತಿದೆ. ನಮ್ಮ ಪೊಲೀಸರು ಸಮರ್ಥರಿದ್ದಾರೆ. ತನಿಖೆ ಯಾವ ರೀತಿ ಮುಂದುವರಿದಿದೆ ಎಂಬುದನ್ನು ಜನರೂ ಗಮನಿಸುತ್ತಿದ್ದಾರೆ. ಕೆಲವು ರಾಜಕೀಯ ಹೇಳಿಕೆಗಳನ್ನು ಹೊರತುಪಡಿಸಿದರೆ, ತನಿಖೆ ಸರಿಯಾದ ದಾರಿಯಲ್ಲಿ ಹೋಗುತ್ತಿದೆ. ಸಿಬಿಐಗೆ ವಹಿಸುವ ಅಗತ್ಯವಿಲ್ಲ ಎಂದು ತಿಳಿಸಿದರು.

ಪ್ರಕರಣವನ್ನು ಎಸ್‌ಐಟಿ ಅಧಿಕಾರಿಗಳು ಗಂಭೀರವಾಗಿ ತನಿಖೆ ಮಾಡುತ್ತಿದ್ದಾರೆ. ಪ್ರಜ್ವಲ್‌ ರನ್ನು ಕರೆತರಲು ಬ್ಲೂ ಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ. ಇಂಟರ್‌ಪೋಲ್‌ನವರು 197 ದೇಶಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.
ಅಷ್ಟಕ್ಕೂ 2008-2013ರ ವರೆಗೆ ಅಂದಿನ ಸರಕಾರ ಒಂದೇ ಒಂದು ಪ್ರಕರಣ ವನ್ನು ಸಿಬಿಐಗೆ ವಹಿಸಿಲ್ಲ. ಕೆಲವು ಪ್ರಕರಣಗಳಲ್ಲಿ ಸಿಬಿಐ ಕೊಟ್ಟ ವರದಿಯನ್ನು ಜನರು ಒಪ್ಪಿಲ್ಲ. ಅಂತಹ ಪ್ರಕರಣಗಳ ಸಿಬಿಐ ಕಾರ್ಯವೈಖರಿಯನ್ನು ಟೀಕಿಸಿದ್ದನ್ನು ನೋಡಿದ್ದೇವೆ. ಸಿಬಿಐ ಅಂದ ತತ್‌ಕ್ಷಣ ಏನೋ ಆಗಿ ಬಿಡುತ್ತದೆ ಎಂಬ ಪರಿಕಲ್ಪನೆ ಬೇಡ ಎಂದು ಸೂಚ್ಯವಾಗಿ ಹೇಳಿದರು.

ಮೂಳೆ ಇರುವುದರಿಂದಲೇ 135 ಸೀಟು
ನಮಗೆ ಬೆನ್ನು ಮೂಳೆ ಇರುವುದರಿಂದಲೇ ರಾಜ್ಯದ ಜನ 135 ಸೀಟುಗಳನ್ನು ಗೆಲ್ಲಿಸಿ ಅಧಿಕಾರ ಕೊಟ್ಟಿದ್ದಾರೆ ಎಂದು ಎಚ್‌.ಡಿ. ಕುಮಾರಸ್ವಾಮಿಗೆ ಡಾ| ಪರಮೇಶ್ವರ್‌ ತಿರುಗೇಟು ನೀಡಿದರು.

ಎಸ್‌ಐಟಿ ಅಧಿಕಾರಿಗಳಿಗೆ ಪ್ರಕರಣದ ತನಿಖೆಯನ್ನು ಹೀಗೆಯೇ ಮಾಡಿ ಅಂತ ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರಿಗೆ, ಗೃಹ ಸಚಿವರಿಗೆ ಪ್ರಕರಣದ ಮಾಹಿತಿ ಇರಬೇಕಲ್ಲವೇ? ಹೀಗಾಗಿ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next