ಬೆಂಗಳೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೊಡಗು ನೆರೆ ಹಾವಳಿ ಕುರಿತ ಸಭೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಮೇಲೆ ಕೂಗಾಡಿರುವುದು ಸರಿಯಲ್ಲ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೇರಳ ನೆರೆ ಸಂತ್ರಸ್ತರಿಗಾಗಿ ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಅಗತ್ಯ ವಸ್ತುಗಳನ್ನೊಳಗೊಂಡ 9 ಟ್ರಕ್ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದವರು. ಅವರೇ
ಮುಂದಾಳತ್ವ ವಹಿಸಿ ಸಂಸದರ ನಿಯೋಗದೊಂದಿಗೆ ಪ್ರಧಾನಿ ಬಳಿ ಪರಿಹಾರ ನೀಡುವಂತೆ ಮನವಿ ಮಾಡಬೇಕಿತ್ತು. ಆದರೆ, ಅವರು ತಡವಾಗಿ ಬಂದಿದ್ದಲ್ಲದೇ ಜಿಲ್ಲಾ ಉಸ್ತುವಾರಿ ಸಚಿವರ ಮೇಲೆ ಕೂಗಾಡುವುದು ಸರಿಯಲ್ಲ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಕೇರಳ ಪ್ರವಾಹದ ನಷ್ಟದ ಅಂದಾಜು ಮಾಡುವ ಮೊದಲೇ ಹಣ ಬಿಡುಗಡೆ ಮಾಡಿದಂತೆ ನಮಗೂ ಹಣ ಬಿಡುಗಡೆ ಮಾಡಬೇಕಿತ್ತು. ಆದರೆ, ಅವರು ನಿರಾಸಕ್ತಿ ತೋರಿದ್ದಾರೆ. ಕೊಡಗಿನ ನಷ್ಟ ಭರಿಸಲು ತಕ್ಷಣವೇ 2 ಸಾವಿರ ಕೋಟಿ ಹಣಕಾಸಿನ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.