ತುಮಕೂರು: ಕೇಂದ್ರದಲ್ಲಿ ನರೇದ್ರ ಮೋದಿ ಪ್ರಮಾಣ ವಚನ ನಂತರ ಮೈತ್ರಿ ಸರ್ಕಾರ ಪತನ ವಾಗಲಿದೆ ಎಂದು ಭವಿಷ್ಯ ನುಡಿದಿರುವ ಮಾಜಿ ಶಾಸಕ ಕೆ.ಎನ್.ರಾಜಣ್ಣ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜಾತ್ಯತೀತ ಜನತಾದಳದ ಮೈತ್ರಿ ಅಭ್ಯರ್ಥಿ ಪತನಕ್ಕೆ ಝೀರೋ ಟ್ರಾಫಿಕ್ ಕಾರಣ ಎಂದರು.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ಮಾತನಾಡುತ್ತಾ ನನ್ನ ಬೆಂಬಲವಿಲ್ಲದಿದ್ದರೆ ಪರಂ ಗೆಲ್ಲುತ್ತಿರಲಿಲ್ಲ, ನನ್ನ ವಿರುದ್ಧ ಟೌನ್‌ಹಾಲ್ನಲ್ಲಿ ಪ್ರತಿಭಟನೆ ನಡೆಸುವ ಹಂತಕ್ಕೆ ಬಂದಿದ್ದಾರೆ ಎಂದು ವಾಗ್ಧಾಳಿ ಎಂದರು.
ರಾಜ್ಯದಲ್ಲಿ ಇರುವ ಈ ಮೈತ್ರಿ ಸರ್ಕಾರ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಮಾತ್ರ ಮೈತ್ರಿ ಸರ್ಕಾರ ಇರಲಿದೆ. ನಂತರ ಸಮ್ಮಿಶ್ರ ಸರ್ಕಾರ ಉರುಳಲಿದೆ ಎಂದು ಪುನರುಚ್ಚರಿಸಿದರು.
ಮೈತ್ರಿ ಸರ್ಕಾರ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರುದ್ಧ ಹರಿಹಾಯ್ದ ಅವರು. ತುಮಕೂರು ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ. ಬಿಜೆಪಿ ಕೆಲವೇ ಕ್ಷೇತ್ರಕ್ಕೆ ಸೀಮಿತ. ಆದರೂ ಇಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಅಭ‌್ಯರ್ಥಿಜಿ.ಎಸ್.ಬಸವರಾಜುಗೆ ಅಭಿನಂದನೆ ಸಲ್ಲಿಸುತ್ತೇನೆ. ಬಸವ ರಾಜು 20ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಬಿಜೆಪಿಗಿಂತ ಕಾಂಗ್ರೆಸ್ ನಾಯಕರ ಸಂಪರ್ಕ ಹೆಚ್ಚಿದೆ. ಅವರ ವೈಯಕ್ತಿಕ ಸಂಪರ್ಕದಿಂದ ಸಹಾಯ ಪಡೆದು ಗೆಲುವು ಸಾಧಿಸಿದ್ದಾರೆ ಎಂದು ನುಡಿದರು.
ಅಧ್ಯಕ್ಷ ಸ್ಥಾನ ಐದು ವರ್ಷ ಪೂರ್ಣ: ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರು ಏನೇ ಮಾಡಿದರು ನನ್ನ ಅಧಿಕಾರ ಪೂರೈಸುವುದು ಶತಸಿದ್ಧ. ಎಚ್.ಡಿ. ರೇವಣ್ಣ ಕೆಎಂಎಫ್ನಲ್ಲಿ ಸಾವಿರಾರು ಕೋಟಿ ರೂ. ಗೋಲ್ಮಾಲ್ ಮಾಡಿದ ದಾಖಲೆ ನನ್ನ ಬಳಿಯಿದೆ. ಅವರು ಏನು ಮಾಡುತ್ತಾರೋ ಮಾಡಲಿ ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.
ಗ್ರಾಮಾಂತರ ಶಾಸಕರ ಆರೋಪಕ್ಕೆ ಮಾತನಾಡಲ್ಲ: ಗ್ರಾಮಾಂತರ ಶಾಸಕರು ಕರೆದಿದ್ದ ಜೆಡಿಎಸ್ ಆತ್ಮಾವಲೋಕನ ಸಭೆೆಯಲ್ಲಿ ಎಚ್.ಡಿ.ದೇವೇಗೌಡರ ಸೋಲಿನ ಬಗ್ಗೆ ಗ್ರಾಮಾಂತರ ಶಾಸಕರು ರಾಜಣ್ಣ ಬಗ್ಗೆ ಆರೋಪ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿ, ಅವನ ಯೋಗ್ಯತೆಗೆ ಅವರ ಕ್ಷೇತ್ರದಲ್ಲೇ ಎಚ್.ಡಿ. ದೇವೇಗೌಡರಿಗೆ ಲೀಡ್ ಕೊಡಲು ಸಾಧ್ಯವಾಗಲಿಲ್ಲ, ಇನ್ನು ತಮ್ಮ ಬಗ್ಗೆ ಮಾತನಾಡುತ್ತಾನೆ. ಅವನು ನನ್ನ ವಿರುದ್ಧ ಸ್ಪರ್ಧಿಸುವುದಾದರೆ ನಾವು ಸಿದ್ಧ. ಅವನ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಅವಾಚ್ಯ ಶಬ್ಧ ಬಳಸಿದರು.