ಸಾಗರ: ಶಾಸಕ ಗೋಪಾಲಕೃಷ್ಣ ಬೇಳೂರು ದಲಿತ ಸಂಘಟನೆಗಳ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದ್ದು, ದಲಿತರ ಪರವಾಗಿ ಧ್ವನಿ ಎತ್ತುತ್ತಿರುವ ನನ್ನ ವಿರುದ್ಧ ಮೂರಕ್ಕೂ ಹೆಚ್ಚು ಕೇಸ್ ಹಾಕಿಸಿದ್ದಾರೆಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಪರಮೇಶ್ವರ ದೂಗೂರು ಆರೋಪಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ನಮ್ಮ ಸಂಘಟನೆ ಪ್ರಮುಖರು ಶಾಸಕರ ಬಳಿ ಪ್ರಶ್ನೆ ಮಾಡಿದರೆ ಇನ್ನೂ ಹತ್ತು ಕೇಸ್ ಹಾಕಿಸುತ್ತೇನೆ ಎಂದು ಹೇಳಿದ್ದಾರೆ. ಶಾಸಕರ ಈ ನಿಲುವು ಅತ್ಯಂತ ಖಂಡನೀಯ ಎಂದು ಹೇಳಿದರು.
ಬಳಸಗೋಡು ಜಮೀನು ತೆರವು, ಬಿಎಚ್ ರಸ್ತೆ ಜನಪ್ರಿಯ ಮಟನ್ ಸ್ಟಾಲ್ ತೆರವು, ಚಾಂದಿನಿ ಆಸ್ಪತ್ರೆ ಸಮೀಪ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಶಾಸಕರು ಮತ್ತವರ ಹಿಂಬಾಲಕರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಕೇಸ್ ಹಾಕಲಾಗಿದೆ. ವಾಸ್ತವವಾಗಿ ಘಟನೆ ನಡೆಯುವ ಸಂದರ್ಭದಲ್ಲಿ ನಾನು ಸ್ಥಳದಲ್ಲಿಯೆ ಇರಲಿಲ್ಲ. ಆದರೂ ಪ್ರಕರಣ ದಾಖಲಿಸುವ ಮೂಲಕ ಮುಂದೆ ನಾವು ಬಡವರು, ದಲಿತರು, ಹಿಂದುಳಿದವರ ಪರ ಹೋರಾಟ ಮಾಡದಂತೆ ಪರೋಕ್ಷ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.
ಹಾಗೆ ನೋಡಿದರೆ ಜನಪ್ರಿಯ ಮಟನ್ ಸ್ಟಾಲ್ ಇರುವುದು ನಗರಸಭೆ ಜಾಗದಲ್ಲಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಕಳೆದ ನಲವತ್ತು ವರ್ಷಗಳಿಂದ ನಗರಸಭೆ ಜಾಗ ಹರಾಜು ಹಾಕುತ್ತಿದೆ. ಆದರೆ ವಿಜಯಕುಮಾರ್ ಪಾಟೀಲ್ ಎಂಬುವವರು ಏಕಾಏಕಿ ಜಾಗವನ್ನು ತೆರವು ಮಾಡಿ ಸಿಮೆಂಟ್ ಕಾಂಪೌಂಡ್ ಹಾಕಿಸಿದ್ದಾರೆ. ಈ ಪ್ರಕರಣ ನಡೆಯುವ ಸಂದರ್ಭದಲ್ಲಿ ನಾನು ಯಾವುದೋ ಕಾರ್ಯಕ್ರಮದಲ್ಲಿ ಇದ್ದೆ. ಆದರೆ ಪೊಲೀಸರ ಮೂಲಕ ನನ್ನನ್ನು ವಶಕ್ಕೆ ಪಡೆಯಲಾಗಿತ್ತು ಎಂದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಾನು ಮತ್ತು ನಮ್ಮ ಸಂಘಟನೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದೇವೆ. ಕ್ಷೇತ್ರವ್ಯಾಪ್ತಿಯಲ್ಲಿ ಗೋಪಾಲಕೃಷ್ಣ ಬೇಳೂರು ಗೆಲುವಿಗೆ ಶ್ರಮಿಸಿದ್ದೇವೆ. ಒಂದು ರೂಪಾಯಿ ಪಡೆಯದೆ ಕೆಲಸ ಮಾಡಿದ ನನ್ನ ವಿರುದ್ಧ ಶಾಸಕರ ಬೆಂಬಲಿಗರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸದ್ಯದಲ್ಲಿಯೇ ಶಾಸಕರು ಸುಳ್ಳು ಕೇಸ್ ಹಾಕಿಸುತ್ತಿರುವುದರ ವಿರುದ್ಧ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವ ಜೊತೆಗೆ ಸಾಗರದಲ್ಲಿ ನಡೆಯುತ್ತಿರುವ ದ್ವೇಷದ ರಾಜಕಾರಣವನ್ನು ತಿಳಿಸಲಾಗುತ್ತದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಮಹೇಶ್, ಗಣಪತಿ ಹುತ್ತಾದಿಂಬ, ಬಾಬು, ಪ್ರಭಾಕರ್ ಹಾಜರಿದ್ದರು.
ಇದನ್ನೂ ಓದಿ: Agriculture Expert: Live ಕಾರ್ಯಕ್ರಮದ ವೇಳೆ ಕುಸಿದು ಬಿದ್ದು ಮೃತಪಟ್ಟ ಕೃಷಿ ತಜ್ಞ