ಬೆಂಗಳೂರು: ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಬ್ಲಾಕಿಂಗ್ ಆರೋಪ ಸಂಬಂಧ ಐಟಿ ದಾಳಿಗೊಳಗಾದ ಮಾಜಿ ಉಪ ಮುಖ್ಯಮಂತ್ರಿ ಡಾ ಜಿ.ಪರಮೇಶ್ವರ್ ಅವರು ಮಂಗಳವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆಗೆ ಬೆಳಗ್ಗೆ 11 ಗಂಟೆಗೆ ಆಗಮಿಸಿದ ಪರಮೇಶ್ವರ್ ಅವರನ್ನು ಮಧ್ಯಾಹ್ನ ಒಂದು ಗಂಟೆವರೆಗೆ ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದರು.
ದಾಳಿ ವೇಳೆ ಪರಮೇಶ್ವರ್ ಮನೆಯಲ್ಲಿ ಪತ್ತೆಯಾದ ನಗದು ಹಾಗೂ ದಾಖಲೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಐಟಿ ಅಧಿಕಾರಿಗಳು, ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ನಡೆಯುತ್ತಿದ್ದ ಸೀಟು ಬ್ಲಾಕಿಂಗ್ ಬಗ್ಗೆ ತಮಗೆ ಮಾಹಿತಿ ಇತ್ತೇ? ಇಲ್ಲವೇ? ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಿದರು. ಹವಾಲಾ ವ್ಯವಹಾರ ಕುರಿತೂ ಪ್ರಶ್ನಿಸಿದರು. ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿರುವ ಪರಮೇಶ್ವರ್, ದಾಖಲೆ ನೀಡಲು ಕಾಲಾವಕಾಶ ಕೋರಿದ್ದಾರೆಂದು ಐಟಿ ಮೂಲಗಳು ತಿಳಿಸಿವೆ.
ವಿಚಾರಣೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪರಮೇಶ್ವರ್, ದಾಳಿ ಸಂಬಂಧ ಇನ್ನಷ್ಟು ಮಾಹಿತಿ ಪಡೆಯಲು 3-4 ದಿನಗಳ ಕಾಲಾವಕಾಶ ಕೇಳಿದ್ದೇನೆ. ಅದಕ್ಕೆ ಅವರು ಕೂಡ ಒಪ್ಪಿಗೆ ನೀಡಿದ್ದಾರೆ. ಅಲ್ಲದೆ, ಕಾಲೇಜಿನಿಂದ ಪಡೆದುಕೊಂಡಿರುವ ದಾಖಲೆಗಳ ಪರಿಶೀಲನೆಯನ್ನು ಐಟಿ ಅಧಿಕಾರಿಗಳು ಮಾಡಬೇಕಿದೆ. ತಮ್ಮ ಆಪ್ತ ರಮೇಶ್ ಮೃತಪಟ್ಟಿದ್ದಾರೆ. ಈ ಎಲ್ಲ ಕಾರಣಗಳಿಂದ ಕಾಲಾವಕಾಶ ಕೋರಲಾಗಿದೆ. ದಾಳಿ ವೇಳೆ ಪಡೆದುಕೊಂಡ ದಾಖಲೆಗಳಿಗೆ ಐಟಿ ಅಧಿಕಾರಿಗಳು ತಮ್ಮಿಂದ ಸಹಿ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ನನ್ನ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಪ್ರಕರಣ ನಾನಾ ರೀತಿಯ ವಿಶ್ಲೇಷಣೆಗಳಿಗೆ ಕಾರಣವಾಗಿದೆ. “ಕೆಲವರು ನಾನೇ ಕೊಲೆ ಮಾಡಿಸಿದ್ದು. ಬೇನಾಮಿ ಆಸ್ತಿಯನ್ನು ಆತನ ಹೆಸರಿನಲ್ಲಿ ಮಾಡಿದ್ದು, ಆ ಮಾಹಿತಿ ಪಡೆಯಲು ಐಟಿ ಅಧಿಕಾರಿಗಳು ಮುಂದಾಗಿದ್ದರು. ಅದಕ್ಕೆ ಹೆದರಿ ರಮೇಶ್ ಮೃತಪಟ್ಟಿದ್ದಾರೆ’ ಎಂದು ಸುದ್ದಿ ಹರಡಿಸುತ್ತಿದ್ದಾರೆ. ಹೀಗಾಗಿ, ರಮೇಶ್ ಸಾವಿನ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಈ ಸಂಬಂಧ ಮುಖ್ಯಮಂತ್ರಿಗಳು, ಗೃಹ ಸಚಿವರಿಗೆ ಒತ್ತಾಯ ಮಾಡುತ್ತೇನೆ. ಸಮರ್ಥ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಸತ್ಯ ಬಹಿರಂಗ ಪಡಿಸಬೇಕು. ಯಾವುದೇ ರೀತಿಯ ತನಿಖೆಗೆ ನಾನು ಸಿದ್ಧ.
-ಡಾ.ಜಿ.ಪರಮೇಶ್ವರ್, ಮಾಜಿ ಡಿಸಿಎಂ