Advertisement

ಪ್ಯಾರಾಮೆಡಿಕಲ್‌ ಹಲವು ಅವಕಾಶ

10:26 PM Nov 26, 2019 | mahesh |

ಶೈಕ್ಷಣಿಕ ಮತ್ತು ವೃತ್ತಿಪರವಾಗಿ ಇಂದು ಪ್ಯಾರಾಮೆಡಿಕಲ್‌ ಕೋರ್ಸ್‌ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿದೆ. ಮೂರು ವರ್ಷದ ಕೋರ್ಸ್‌ ಇದಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗಗಳಿಗೆ ಅವಕಾಶಗಳಿರುವುದರಿಂದ ಪ್ಯಾರಾಮೆಡಿಕಲ್‌ ಕೋರ್ಸ್‌ಗೆ ಹೆಚ್ಚು ಒತ್ತು ಸಿಕ್ಕಿರುವುದು ಸತ್ಯ. ಹೀಗಾಗಿ ಕೋರ್ಸ್‌ನ ವಿಶೇಷತೆ, ಅವಕಾಶ ಗಳು ಮತ್ತು ಮಾಹಿತಿ ಯನ್ನು ಇಲ್ಲಿ ತಿಳಿಯ ಬಹುದಾಗಿದೆ.

Advertisement

ವೈದ್ಯಕೀಯ ಕ್ಷೇತ್ರ ದಿನದಿಂದ ದಿನಕ್ಕೆ ಬೆಳವಣಿಗೆಯಾಗುತ್ತಿದ್ದು, ಉದ್ಯೋಗ ಸೃಷ್ಟಿಸುವ ಪ್ರಮುಖ ಕ್ಷೇತ್ರವಾಗಿ ಮಾರ್ಪಾಡಾಗುತ್ತಿದೆ. ಅದರಲ್ಲಿಯೂ ವೈದ್ಯಕೀಯ ಕ್ಷೇತ್ರಕ್ಕೆ ತಂತ್ರಜ್ಞರ ಹಾಗೂ ರೋಗಪತ್ತೆ ತಜ್ಞರ ಆವಶ್ಯಕತೆ ಹೆಚ್ಚಿದ್ದು, ಪ್ರಯೋಗಾಲಯ ತಂತ್ರಜ್ಞರು, ವೈದ್ಯ ಸಹಾಯಕರು, ಶುಶ್ರೂಷಕರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಎಸೆಸೆಲ್ಸಿ ಮತ್ತು ಪಿಯುಸಿ ಕಲಿತ ಬಳಿಕ ಮುಂದೇನು? ಎಂಬ ಯೋಚನೆ ವಿದ್ಯಾರ್ಥಿಗಳನ್ನು ಮತ್ತು ಹೆತ್ತವರನ್ನು ಕಾಡದೇ ಇರದು. ಇತ್ತೀಚಿನ ದಿನಗಳಲ್ಲಿ ಪ್ಯಾರಾ ಮೆಡಿಕಲ್‌ ಕೋರ್ಸ್‌ (ವೈದ್ಯಕೀಯ ಪೂರಕ)ಗೆ ಹೆಚ್ಚಿನ ಬೇಡಿಕೆ ಇದ್ದು, ವಿದ್ಯಾರ್ಥಿಗಳು ಈ ಕೋರ್ಸ್‌ ಆಯ್ಕೆ ಮಾಡುತ್ತಿದ್ದಾರೆ. ಇದನ್ನು ಕಲಿತ ಮಂದಿ ಮೆಡಿಕಲ್‌ ಲ್ಯಾಬ್‌ ಟೆಕ್ನೀಶಿಯನ್‌, ಮೆಡಿಕಲ್‌ ರೆಕಾರ್ಡ್ಸ್‌

ಟೆಕ್ನಾಲಜಿ, ಎಕ್ಸ್‌ರೇ ಟೆಕ್ನಾಲಜಿ, ಡೆಂಟಲ್‌ ಮೆಕ್ಯಾನಿಕ್‌, ಹೆಲ್ತ್‌ ಇನ್‌ಸ್ಪೆಕ್ಟರ್‌ ಸಹಿತ ವಿವಿಧ ವೃತ್ತಿಯಲ್ಲಿ ಗುರುತಿಸಿಕೊಳ್ಳಬಹುದಾಗಿದೆ.

ಪ್ಯಾರಾಮೆಡಿಕಲ್‌ ಡಿಪ್ಲೊಮಾ ಕೋರ್ಸ್‌ಗಳಲ್ಲಿ ವಿವಿಧ ವಿಭಾಗಗಳಿವೆ. ಅದರಲ್ಲೂ ಒಂದು ವರ್ಷದ ಎಎನ್‌ಎಂ ಸರ್ಟಿಫಿಕೇಟ್‌ ಕೋರ್ಸ್‌, ಆರೋಗ್ಯ ನಿರೀಕ್ಷಕರ ಕೋರ್ಸ್‌, ನರ್ಸಿಂಗ್‌ ಜನರಲ್‌, ನರ್ಸಿಂಗ್‌ ಡಿಪ್ಲೊಮಾ ಮುಂತಾದ ಅವಕಾಶಗಳಿವೆ. ಇನ್ನು, ಆರೋಗ್ಯ ಕ್ಷೇತ್ರದಲ್ಲಿ ತಪಾಸಣೆ, ರೋಗ ವಿಧಾನ, ಕೌನ್ಸೆಲಿಂಗ್‌, ಫಾರ್ಮಸಿ, ರೇಡಿಯೋಲಜಿ ಕ್ಷೇತ್ರಗಳಲ್ಲಿಯೂ ಸರ್ಟಿಫಿಕೇಟ್‌ ಡಿಪ್ಲೊಮಾ ಕೋರ್ಸ್‌ಗಳಿವೆ. ಪ್ಯಾರಾ ಮೆಡಿಕಲ್‌ ಕೋರ್ಸ್‌ನ ಸೂಚನೆಗಳು, ಅರ್ಜಿ ಆಹ್ವಾನ ಸೇರಿದಂತೆ ಹೆಚ್ಚಿನ ಮಾಹಿತಿಗೆ ಕರ್ನಾಟಕ ಸರಕಾರ ಪ್ಯಾರಾ ಮೆಡಿಕಲ್‌ ಬೋರ್ಡ್‌ ನ್‌ www.pmbkarnataka.org ಅಂತರ್ಜಾಲ ತಾಣದಿಂದಲೂ ಮಾಹಿತಿ ಪಡೆಯಬಹುದು.

Advertisement

ಈ ಕೋರ್ಸ್‌ಗೆ ಸೇರಲು ಕನಿಷ್ಠ ಹತ್ತನೇ ತರಗತಿ ಉತ್ತೀರ್ಣರಾಗಬೇಕು. ಇದಾದ ಅನಂತರ ಮೂರು ವರ್ಷಗಳ ತರಬೇತಿಯ ನಂತರ ನಿರ್ದಿಷ್ಟ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬಹುದಾಗಿದೆ. ರಾಜ್ಯದ 150ಕ್ಕೂ ಹೆಚ್ಚಿನ ಸರಕಾರಿ ಮತ್ತು ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ಯಾರಾ ಮೆಡಿಕಲ್‌ ಕೋರ್ಸ್‌ ಕಲಿಯಲು ಅವಕಾಶವಿದೆ. ಕರ್ನಾಟಕ ರಾಜ್ಯ ಪ್ಯಾರಾ ಮೆಡಿಕಲ್‌ ಬೋರ್ಡ್‌ ಇದನ್ನು ನಿಯಂತ್ರಣ ಮಾಡುತ್ತದೆ.

ಹತ್ತನೇ ತರಗತಿ ಕಲಿತರೆ ಅನಂತರ ಮೂರು ವರ್ಷದ ಡಿಪ್ಲೊಮಾ ಕೋರ್ಸ್‌ ಮಾಡಬಹುದು. ಒಂದು ವೇಳೆ ಪಿಯುಸಿ ವಿದ್ಯಾಭ್ಯಾಸದ ಬಳಿಕ ಸೇರಿದರೆ ಎರಡು ವರ್ಷದ ಡಿಪ್ಲೊಮಾ ಕೋರ್ಸ್‌ಗೆ ಸೇರಬಹುದಾಗಿದೆ. ಎಸೆಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಯಾವ ರೀತಿ ಅಂಕ ಗಳಿಸುತ್ತೇವೆ ಎನ್ನುವುದರ ಮೇಲೆ ಸೀಟು ಸಿಗುತ್ತದೆ. ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್‌ ತಿಂಗಳಿನಿಂದ ಪ್ಯಾರಾ ಮೆಡಿಕಲ್‌ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಕೌನ್ಸೆಲಿಂಗ್‌ ಮುಖೇನ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

ವೆನ್ ಲಾಕ್ ಆಸ್ಪತ್ರೆಯಲ್ಲಿ ಏಳು ಕೋರ್ಸ್‌
ವೆನ್ ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ಅವರು ಪ್ರತಿಕ್ರಿಯಿಸಿ “ಎಸೆಸೆಲ್ಸಿ ಉತ್ತೀರ್ಣರಾದವರಿಗೆ 3 ವರ್ಷಗಳ ಸರ್ಟಿಫಿಕೇಟ್‌ ಕೋರ್ಸ್‌ಗಳು ಹಾಗೂ ಪಿಯುಸಿ ಉತ್ತೀರ್ಣರಾದವರಿಗೆ ಡಿಪ್ಲೊಮಾ ಕೋರ್ಸ್‌ ಗಳು ವೆನ್ ಲಾಕ್  ಆಸ್ಪತ್ರೆಯಲ್ಲಿವೆ. ರೇಡಿಯಾಲಜಿ ಟೆಕ್ನಿಶಿಯನ್‌ ಮೆಡಿಕಲ್‌ಲ್ಯಾಬ್‌ ಟೆಕ್ನೀಶಿಯನ್‌, ಡಯಾಲಿಸಿಸ್‌ ಟ್ರೀಟ್‌ಮೆಂಟ್‌, ಮೆಡಿಕಲ್‌ ರೆಕಾರ್ಡ್‌ ನಿರ್ವಹಣೆ, ಆರೋಗ್ಯ ನಿರೀಕ್ಷಕರು, ಆಪರೇಶನ್‌ ಥಿಯೇಟರ್‌ ಟೆಕ್ನೀಶಿಯನ್‌ ಸಹಿತ 7 ಕೋರ್ಸ್‌ಗಳನ್ನು ಒಳಗೊಂಡಿದೆ ಎಂದಿದ್ದಾರೆ.

ಎಲ್ಲಿಲ್ಲಿ ಅವಕಾಶ
ಈ ಕೋರ್ಸ್‌ ಕಲಿತ ಮಂದಿ ಕ್ಲಿನಿಕ್‌ಗಳಲ್ಲಿ, ಆಸ್ಪತ್ರೆಗಳಲ್ಲಿ, ಖಾಸಗಿ ಆಸ್ಪತ್ರೆಗಳಲ್ಲಿ ಅಪಘಾತ ಚಿಕಿತ್ಸೆ ಕೇಂದ್ರಗಳಲ್ಲಿ ತುರ್ತುನಿಗಾ ಘಟಕಗಳಲ್ಲಿ, ರೋಗ ಪತ್ತೆ ಮಾಡುವಂತಹ ಪ್ರಯೋಗಾಲಯಗಳಲ್ಲಿ, ಸ್ಕ್ಯಾನಿಂಗ್‌ ಸೆಂಟರ್‌ಗಳಲ್ಲಿ, ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ, ನರ್ಸಿಂಗ್‌ ಹೋಂಗಳಲ್ಲಿ, ಡಯಾಲಿಸಿಸ್‌ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಲು ಅವಕಾಶವಿದೆ.

- ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next