Advertisement

ಕೊರಟಗೆರೆಯಿಂದಲೇ ಸ್ಪರ್ಧಿಸಲು ಪರಂ ಸಿದ್ಧತೆ

09:38 AM Sep 23, 2017 | |

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಸೋಲಿನಿಂದ ಕ್ಷೇತ್ರ ಬದಲಾಯಿಸುವ ಆಲೋಚನೆ ಹೊಂದಿದ್ದ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಇದೀಗ ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಅದೇ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗಿಳಿಯಲು ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದು, ವಾರದಲ್ಲಿ ಕನಿಷ್ಠ ಮೂರು ದಿನ ಕೊರಟಗೆರೆ ಕ್ಷೇತ್ರದಲ್ಲಿ ಪ್ರವಾಸ ಮಾಡಲು ನಿರ್ಧರಿಸಿದ್ದಾರೆ.

Advertisement

ಚುನಾವಣೆಗೆ ಸ್ಪರ್ಧಿಸದೇ ಹೋದರೆ, ಮುಂದಿನ ಬಾರಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಬಿಂಬಿಸಿಕೊಳ್ಳಲು ಅವಕಾಶ ದೊರೆಯುವುದಿಲ್ಲ ಎಂಬ ಕಾರಣಕ್ಕೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಚುನಾವಣೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿಯೂ ಸೋತು ಸರ್ಕಾರದಲ್ಲಿ ಸಚಿವರಾಗಲೂ ಸಾಕಷ್ಟು ಪರದಾಡಿದ್ದ ಪರಮೇಶ್ವರ್‌, 2018ರ ಚುನಾವಣೆಗೆ ಸ್ಪರ್ಧಿಸುವುದೋ ಬೇಡವೋ ಎಂಬ ಗೊಂದಲದಲ್ಲಿದ್ದರು. ಈ ನಡುವೆ ಕ್ಷೇತ್ರ ಬದಲಾಯಿಸಿ ಬೆಂಗಳೂರಿನ ಯಾವುದಾದರೂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದರು. ಇದೀಗ ಕೊರಟಗೆರೆಯಲ್ಲೇ ಸ್ಪರ್ಧೆಗೆ ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ, ಕೊರಟಗೆರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಜನರ ನಾಡಿ ಮಿಡಿತ ಏನು ಎಂಬುದನ್ನು ತಿಳಿದುಕೊಳ್ಳಲು ಪರಮೇಶ್ವರ್‌ ಅವರು ಖಾಸಗಿಯಾಗಿ 2 ಬಾರಿ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆಯಲ್ಲಿ ಗೆಲ್ಲುವ ಬಗ್ಗೆ ಸಕಾರಾತ್ಮಕ ವರದಿ ಬಂದಿದ್ದು, ತಮ್ಮ ಕ್ಷೇತ್ರದ ಶಾಸಕರಾಗುವವರು ಮುಖ್ಯಮಂತ್ರಿಯಾಗುವ ಅವಕಾಶ ಸಿಕ್ಕರೆ ಬೆಂಬಲಿಸಬಹುದು ಎಂಬ ಅಭಿಪ್ರಾಯ ಮತದಾರರದ್ದು ಎಂಬ ಅಂಶ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಹೀಗಾಗಿ, ಅದೇ ಕ್ಷೇತ್ರದಲ್ಲಿ ಮತ್ತೂಂದು ಬಾರಿ ಅದೃಷ್ಟ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜನ ಸಂಪರ್ಕ: ಕೊರಟಗೆರೆ ಕ್ಷೇತ್ರದಲ್ಲಿ ಹಾಲಿ ಶಾಸಕ ಸುಧಾಕರ ಲಾಲ್‌ ನಿರಂತರ ಜನ ಸಂಪರ್ಕದಲ್ಲಿರುವುದರಿಂದ ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರಕ್ಕೆ ತೆರಳಿದರೆ, ಜನರ ವಿಶ್ವಾಸ ಗಳಿಸುವುದು ಕಷ್ಟ ಎಂಬುದನ್ನು ಅರಿತಿರುವ ಪರಮೇಶ್ವರ್‌ ಈಗಿನಿಂದಲೇ ನಿರಂತರ ಜನರ ಸಂಪರ್ಕದಲ್ಲಿರಲು ವಾರದಲ್ಲಿ ಕನಿಷ್ಠ ಮೂರು ದಿನ ಕ್ಷೇತ್ರದಲ್ಲಿ ಕಾರ್ಯಕರ್ತರು ಮತ್ತು ಮತದಾರರನ್ನು
ಭೇಟಿ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿಯೇ ಬೆಂಗಳೂರಿನಲ್ಲಿಯೇ ವಾಸ ವಿರುವ ಡಾ. ಜಿ. ಪರಮೇಶ್ವರ್‌ ತಮನ್ನು ಭೇಟಿ ಮಾಡಲು ಕೊರಟಗೆರೆಯಿಂದ ಆಗಮಿಸುವ ಕ್ಷೇತ್ರದ ಜನರನ್ನು ನೋಡಿಕೊಳ್ಳಲು ವಿಶೇಷ ವ್ಯವಸ್ಥೆ ಮಾಡಿದ್ದಾರೆ. ಕ್ಷೇತ್ರದಿಂದ ಬಂದವರನ್ನು ಗಮನಿಸಲೇಂದೇ ಸಿಬ್ಬಂದಿಯನ್ನೂ ನೇಮಿಸಿಕೊಂಡಿದ್ದು, ಅವರ ಸಮಸ್ಯೆ ಆಲಿಸಿ, ಸೂಕ್ತ ಸಹಾಯ, ಸಹಕಾರ ನೀಡಿ ಕಳುಹಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. 

2018ರ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಸೋಲು ಕಾಣಬಾರದೆಂದು ಕ್ಷೇತ್ರದಲ್ಲಿ ಜಾತಿ ಆಧಾರಿತ ಸಂಘಟನೆಗಳನ್ನು ಗುರುತಿಸಿ ಅವುಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಚುನಾವಣೆ ಗೆಲುವಿಗೆ ಹೆಚ್ಚು ಸಹಕಾರಿಯಾಗುವ ಸಾಮಾಜಿಕ ಜಾಲತಾಣವನ್ನೂ ಪ್ರಭಾವಶಾಲಿಯಾಗಿ ಬಳಸಿಕೊಳ್ಳಲು ತಮ್ಮದೇ ಆದ ಜಾಲತಾಣ ನಿರ್ವಹಣಾ ತಂಡವನ್ನು ರಚಿಸಿಕೊಂಡಿದ್ದು, ಆ ತಂಡದ ಮೂಲಕ ಕ್ಷೇತ್ರದಲ್ಲಿ ವಾಟ್ಸ್‌ಆಪ್‌ ಗ್ರೂಪ್‌ಗ್ಳನ್ನು ಮಾಡಿ ನಿರಂತರ ಸಂಪರ್ಕ ದಲ್ಲಿರಲು ಮುಂದಾಗಿದ್ದಾರೆ ಎನ್ನಲಾಗಿದೆ. 

Advertisement

ನಾನು ಕೊರಟಗೆರೆ ಯಿಂದ ಸ್ಪರ್ಧಿಸ ಬೇಕೋ, ಬೇರೆ ಕ್ಷೇತ್ರದಿಂದ ಸ್ಪರ್ಧಿಸಬೇಕೋ ಎನ್ನುವುದನ್ನು ಸೂಕ್ತ ಸಂದರ್ಭದಲ್ಲಿ ಪ್ರಕಟಿಸುತ್ತೇನೆ. 
ಡಾ. ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ

ಶಂಕರ್‌ ಪಾಗೋಜಿ 

Advertisement

Udayavani is now on Telegram. Click here to join our channel and stay updated with the latest news.

Next