ಹೊಸದಿಲ್ಲಿ: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ವಿಶ್ವದಾಖಲೆಯೊಂದಿಗೆ ಚಿನ್ನದ ಪದಕ ಗೆಲ್ಲುವುದು ತನ್ನ ಗುರಿ ಎಂಬುದಾಗಿ ಜಾವೆಲಿನ್ ತ್ರೋವರ್ ಸುಮಿತ್ ಅಂಟಿಲ್ ಹೇಳಿದ್ದಾರೆ.
ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಿತ್ ಅಂಟಿಲ್ 3 ಸಲ ವಿಶ್ವದಾಖಲೆ ನಿರ್ಮಿಸಿದ್ದರು. ಅಂತಿಮವಾಗಿ 68.55 ಮೀಟರ್ ದೂರದ ಸಾಧನೆಯೊಂದಿಗೆ ಚಿನ್ನ ಜಯಿಸಿದ್ದರು.
ಅನಂತರ 2023ರ ಪ್ಯಾರಾ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಇದನ್ನು 70.83 ಮೀ. ದೂರಕ್ಕೆ ವಿಸ್ತರಿಸುವಲ್ಲಿ ಯಶಸ್ವಿಯಾದರು. ಬಳಿಕ ಹ್ಯಾಂಗ್‌ಝೂ ಪ್ಯಾರಾ ಏಷ್ಯಾಡ್‌ನಲ್ಲಿ 73.29 ಮೀ. ದೂರದ ಸಾಧನೆಯೊಂದಿಗೆ ಬಂಗಾರ ಗೆದ್ದರು. ಈ 70 ಪ್ಲಸ್ ದೂರವನ್ನು ಗಮನಿಸುವಾಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಸುಮಿತ್ ಅಂಟಿಲ್ ನೂತನ ದಾಖಲೆ ನಿರ್ಮಿಸುವ ಎಲ್ಲ ಸಾಧ್ಯತೆ ಇದೆ.
“ನನ್ನ ಬಹು ದೊಡ್ಡ ಗುರಿಯೆಂದರೆ 80 ಮೀ. ದೂರವನ್ನು ಕ್ರಮಿಸುವುದು. ಆದರೆ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ 75 ಮೀ.ಗಳ ಗುರಿಯೊಂದಿಗೆ ಚಿನ್ನದ ಪದಕ ಗೆಲ್ಲುವುದು ನನ್ನ ಯೋಜನೆ’ ಎಂದು ಎಫ್64 ವಿಭಾಗದಲ್ಲಿ ಸ್ಪರ್ಧಿಸಲಿರುವ, 26 ವರ್ಷದ ಸುಮಿತ್ ಅಂಟಿಲ್ ಹೇಳಿದರು. 2015ರಲ್ಲಿ ಸಂಭವಿಸಿದ ರಸ್ತೆ ಅಪಘಾತಲ್ಲಿ ಅವರು ಒಂದು ಕಾಲನ್ನು ಕಳೆದುಕೊಂಡಿದ್ದರು.
ಸುಮಿತ್ ಅಂಟಿಲ್ ಪ್ಯಾರಾಲಿಂಪಿಕ್ಸ್ ಉದ್ಘಾಟನ ಸಮಾರಂಭದಲ್ಲಿ ಶಾಟ್‌ಪುಟರ್ ಭಾಗ್ಯಶ್ರೀ ಜಾಧವ್ ಅವರೊಂದಿಗೆ ಭಾರತದ ಧ್ವಜಧಾರಿಯ ಗೌರವ ಸಂಪಾದಿಸಿದ್ದಾರೆ.