ರವಿವಾರ ಹಾಕಿ ದೇವರು ಮೇಜರ್ ಧ್ಯಾನ್‌ಚಂದ್ ಅವರ 116ನೇ ಜನ್ಮದಿನ. ಅವರು ಹುಟ್ಟಿದ ದಿನವನ್ನು ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದಲ್ಲಿ ಈ ರೀತಿಯ ಸಂಭ್ರಮ ಜಾರಿಯಲ್ಲಿ ರುವಾಗಲೇ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿರುವ ಭಾರತೀಯ ಕ್ರೀಡಾಪಟುಗಳು ಅದ್ಭುತ ಕೊಡುಗೆ ನೀಡಿದ್ದಾರೆ. ಈ ಒಂದೇ ದಿನ ಭಾರತೀಯರು 2 ಬೆಳ್ಳಿ, 1 ಕಂಚಿನ ಸಹಿತ ಮೂರು ಪದಕಗಳನ್ನು ಗೆದ್ದಿದ್ದಾರೆ. ರವಿವಾರ ಬೆಳಗ್ಗೆ ನಡೆದ ಮಹಿಳಾ ಟೇಬಲ್ ಟೆನಿಸ್ ಫೈನಲ್‌ನಲ್ಲಿ ಗುಜರಾತ್‌ನ ಭವಿನಾಬೆನ್ ಪಟೇಲ್, ಚೀನದ ಯಿಂಗ್ ಝೌ ವಿರುದ್ಧ ಸೋತರು. ಈ ಸೋಲಿನ ಹೊರತಾಗಿಯೂ ಪ್ಯಾರಾಲಿಂಪಿಕ್ಸ್ ಟಿಟಿಯಲ್ಲಿ ಬೆಳ್ಳಿ ಗೆದ್ದ ದೇಶದ ಮೊದಲ ಸಾಧಕಿ ಎನಿಸಿಕೊಂಡರು. ದೇಶೀಯರು ಈ ಗೆಲುವಿನ ಸಂಭ್ರಮದಲ್ಲಿದ್ದಾಗಲೇ ನಿಶಾದ್ ಕುಮಾರ್ ಮತ್ತೂಂದು ಸಿಹಿ ಸುದ್ದಿಯನ್ನು ನೀಡಿದರು. ಅವರು ಎತ್ತರ ಜಿಗಿತದ ಟಿ47 ವಿಭಾಗದಲ್ಲಿ 2.06 ಮೀಟರ್‌ನಷ್ಟು ಮೇಲೆ ಜಿಗಿದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡು ತಮ್ಮದೇ ಏಷ್ಯಾ ದಾಖಲೆಯನ್ನು ಸರಿಗಟ್ಟಿದರು.
ಈ ಇಬ್ಬರ ಅಪೂರ್ವ ಸಾಧನೆಯಲ್ಲಿ ಭಾರತೀಯರು ತೇಲಾಡು ತ್ತಿದ್ದಾಗಲೇ ಅದನ್ನು ಇನ್ನೂ ಹೆಚ್ಚಿಸಿದ್ದು ವಿನೋದ್ ಕುಮಾರ್. ಅವರು ಡಿಸ್ಕಸ್ ಎಸೆತದ ಎಫ್52 ಫೈನಲ್‌ನಲ್ಲಿ ಏಷ್ಯಾ ದಾಖಲೆಯನ್ನು ನಿರ್ಮಿಸಿದರು. ಎಸೆದಿದ್ದು 19.91 ಮೀ. ದೂರ. ಅವರಿಗೆ ಕಂಚಿನ ಪದಕ ಲಭಿಸಿತು. ಇದೊಂದು ರೀತಿಯಲ್ಲಿ ಭಾರತೀಯ ಕ್ರೀಡಾ ಮಾಂತ್ರಿಕ ಧ್ಯಾನ್‌ಚಂದ್‌ಗೆ ನೀಡಿದ ಗೌರವ ಪುರಸ್ಕಾರವೆಂದರೂ ಸರಿಯೇ. ಇದೊಂದು ಸಾರ್ಥಕ ಸಾಧನೆ.
ಭಾರತದಲ್ಲಿನ ಈಗಿನ ಪೀಳಿಗೆಯೂ ಧ್ಯಾನ್‌ಚಂದ್ ಹೆಸರನ್ನು ಕೇಳಿಕೊಂಡೇ ಬೆಳೆದಿರುತ್ತದೆ. ಇದಕ್ಕೆ ಕಾರಣಗಳು ಹಲವಿವೆ. ಈ ವ್ಯಕ್ತಿ ಮೂರು ಒಲಿಂಪಿಕ್ಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಜರ್ಮನಿಯ ಮಾಜಿ ಸರ್ವಾಧಿಕಾರಿ ಹಿಟ್ಲರ್; ಅವರ ಆಟವನ್ನು ನೋಡಿ ವಿಸ್ಮಿತರಾಗಿ, ತಮ್ಮ ದೇಶಕ್ಕೇ ಬಂದು ನೆಲೆಸಿ ಎಂದು ಎಲ್ಲರೆದುರೇ ಆಹ್ವಾನ ನೀಡಿದ್ದರು. 1928, 1932, 1936ರಲ್ಲಿ ಅವರಿದ್ದ ಭಾರತೀಯ ಹಾಕಿ ತಂಡ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕವನ್ನೇ ಗೆದ್ದಿತ್ತು. ಈ ಮೂರೂ ಕೂಟಗಳಲ್ಲಿ ಅವರು ಗೋಲಿನ ಸುರಿಮಳೆಯನ್ನೇ ಸುರಿಸಿದ್ದರು. ಅವರ ಆಟದ ಮಾಂತ್ರಿಕತೆ ಹಾಗಿತ್ತು. ಇತ್ತೀಚೆಗೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದಿತ್ತು. ಅದಾದ ಮೇಲೆ ಕೂಡಲೇ ದೇಶದ ಪರಮೋಚ್ಚ ಕ್ರೀಡಾಪ್ರಶಸ್ತಿ ಖೇಲ್‌ರತ್ನಕ್ಕೆ; ಧ್ಯಾನ್‌ಚಂದ್ ಖೇಲ್‌ರತ್ನ ಎಂದು ನಾಮಕರಣ ಮಾಡಲಾಯಿತು. ಅದಕ್ಕೂ ಮುನ್ನ ಅದನ್ನು ರಾಜೀವ್ ಖೇಲ್‌ರತ್ನ ಎಂದು ಕರೆಯಲಾಗುತ್ತಿತ್ತು. ವಿಶ್ವದ ಇನ್ನೊಂದು ರಾಷ್ಟ್ರದಲ್ಲಿ ಅಂತಹ ಹಾಕಿ ಮಾಂತ್ರಿಕ ಮತ್ತೆ ಕಾಣಿಸಿಕೊಂಡಿಲ್ಲ ಎನ್ನುವುದು ಧ್ಯಾನ್‌ಚಂದ್ ಸಾಮರ್ಥ್ಯಕ್ಕೆ ಸಾಕ್ಷಿ.
ಧ್ಯಾನ್‌ಚಂದ್ 1905, ಆ.29ರಂದು ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಜನಿಸಿದರು. 1979, ಡಿ.3ರಂದು ಹೊಸದಿಲ್ಲಿಯಲ್ಲಿ ನಿಧನ ಹೊಂದಿದರು. ಇಂತಹ ಮಹಾನ್ ಚೇತನಕ್ಕೆ ಭಾರತರತ್ನ ಸಿಗಲಿಲ್ಲ ಎಂಬ ಕೊರಗು ದೇಶವಾಸಿಗಳಿಗಿದ್ದೇ ಇದೆ. ಆದರೆ ಕೆಲವರು ಪ್ರಶಸ್ತಿಗಳನ್ನೂ ಮೀರಿರುತ್ತಾರೆ. ಅವರ ಸಾಧನೆಯನ್ನು ಪುರಸ್ಕಾರಗಳಿಂದ ಅಳೆಯಲು ಸಾಧ್ಯವೇ ಅಲ್ಲ. ಅಂತಹ ಅಪೂರ್ವ ಚೇತನಕ್ಕೆ ಪ್ಯಾರಾಲಿಂಪಿಕ್ಸ್‌ನಲ್ಲಿ ರವಿವಾರ ಭಾರತೀಯರು ಗೆದ್ದ ಮೂರು ಪದಕಗಳೇ ಹೂವಿನಂತೆ ಅರ್ಪಿತವಾಗಲಿ.