Advertisement

Paralympics: 20 ಪ್ಲಸ್‌ ಪದಕಗಳ ದಾಖಲೆಯ ಹೊತ್ತು…

11:25 PM Sep 04, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಪ್ಯಾರಾ ಲಿಂಪಿಕ್ಸ್‌ ನಲ್ಲಿ ಭಾರತ ನೂತನ ಎತ್ತರ ತಲುಪಿದೆ. ಮಂಗಳವಾರ ರಾತ್ರಿಯ 5 ಪದಕ ಬೇಟೆಯೊಂದಿಗೆ ಪ್ಯಾರಾ ಲಿಂಪಿಕ್ಸ್‌ ಕೂಟವೊಂದರಲ್ಲಿ ಗರಿಷ್ಠ 20 ಪದಕಗಳನ್ನು ಗೆದ್ದು ಮೆರೆದಿದೆ. ಟೋಕಿಯೊದಲ್ಲಿ ಜಯಿಸಿದ 19 ಮೆಡಲ್‌ಗ‌ಳ ದಾಖಲೆಯನ್ನು ಮೀರಿ ನಿಂತಿದೆ. ಬುಧವಾರ ಇನ್ನಷ್ಟು ಪದಕಗಳು ಈ ಯಾದಿಗೆ ಸೇರ್ಪಡೆಗೊಂಡಿವೆ.

Advertisement

ಭಾರತ ಪ್ಯಾರಿಸ್‌ಗೆ ಆಗಮಿಸುವ ಮುನ್ನ ಪ್ಯಾರಾಲಿಂಪಿಕ್ಸ್‌ನಲ್ಲಿ ಗೆದ್ದದ್ದು 31 ಪದಕ ಮಾತ್ರ. ಇದರಲ್ಲಿ 19 ಪದಕ ಕಳೆದ ಟೋಕಿಯೊ ಕೂಟವೊಂದರಲ್ಲೇ ಒಲಿದಿತ್ತು. ಉಳಿದಂತೆ 1972ರ ಹಿಡೆಲ್‌ಬರ್ಗ್‌ ಕೂಟದಲ್ಲಿ ಒಂದು, 1984ರ ನ್ಯೂಯಾರ್ಕ್‌ ಕೂಟದಲ್ಲಿ 4, 2004ರ ಅಥೇನ್ಸ್‌ ಕೂಟದಲ್ಲಿ 2, 2012ರ ಲಂಡನ್‌ ಪಂದ್ಯಾವಳಿಯಲ್ಲಿ ಒಂದು ಹಾಗೂ 2016ರ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ 4 ಪದಕ ಜಯಿಸಿತ್ತು. ಪ್ಯಾರಿಸ್‌ ಸಾಧನೆ ಇವೆಲ್ಲವನ್ನೂ ಮೀರಿ ನಿಂತಿದೆ.

ದೀಪ್ತಿಯೊಂದಿಗೆ ಆರಂಭ
ಮಂಗಳವಾರ ರಾತ್ರಿಯ ವಿವಿಧ ಸ್ಪರ್ಧೆ ಗಳಲ್ಲಿ ಭಾರತ 5 ಪದಕಗಳ ಮಾಲೆ ಧರಿಸಿತು. ಮೊದಲ ಪದಕ ವನಿತೆಯರ 400 ಮೀ. ಟಿ20 ರೇಸ್‌ನಲ್ಲಿ ಬಂತು. ಇಲ್ಲಿ ದೀಪ್ತಿ ಜೀವನ್‌ಜಿ ಕಂಚಿನ ಪದಕ ಗೆದ್ದರು. 20 ವರ್ಷದ ದೀಪ್ತಿ 400 ಮೀ. ಓಟದ ವಿಶ್ವ ಚಾಂಪಿಯನ್‌ ಹಾಗೂ ವಿಶ್ವ  ದಾಖಲೆ ಯೊಂದಿಗೆ ಪ್ಯಾರಿಸ್‌ಗೆ ಆಗಮಿ ಸಿದ್ದರು. ಇಲ್ಲಿ ಉಕ್ರೇನ್‌ನ ಯುಲಿಯಾ ಶುಲಿಯಾರ್‌ ಚಿನ್ನ (55.16 ಸೆಕೆಂಡ್ಸ್‌), ಟರ್ಕಿಯ ಐಸೆಲ್‌ ಆನ್‌ಡರ್‌ ಬೆಳ್ಳಿ ಗೆದ್ದರು (55.23 ಸೆಕೆಂಡ್ಸ್‌). ದೀಪ್ತಿ ಈ ದೂರ ಪೂರೈಸಲು 55.82 ಸೆಕೆಂಡ್ಸ್‌ ತೆಗೆದು ಕೊಂಡರು.

ಶರದ್‌, ತಂಗವೇಲು ಯಶಸ್ವಿ ಜಂಪ್‌
ಪುರುಷರ ಟಿ63 ಹೈಜಂಪ್‌ ಸ್ಪರ್ಧೆ ಯಲ್ಲಿ ಭಾರತ ಅವಳಿ ಪದಕಗಳನ್ನು ಗೆದ್ದು ಸಂಭ್ರಮಿಸಿತು. ಶರದ್‌ ಕುಮಾರ್‌ ಬೆಳ್ಳಿ ಗೆದ್ದರೆ, ಮರಿಯಪ್ಪನ್‌ ತಂಗವೇಲು ಕಂಚನ್ನು ತಮ್ಮದಾಗಿಸಿಕೊಂಡರು. ಭಾರತದ ಮತ್ತೋರ್ವ ಸ್ಪರ್ಧಿ ಶೈಲೇಶ್‌ ಕುಮಾರ್‌ 4ನೇ ಸ್ಥಾನ ಪಡೆದರು.

ಟೋಕಿಯೊದಲ್ಲಿ ಕಂಚು ಜಯಿಸಿದ್ದ ಶರದ್‌ ಇಲ್ಲಿ ಬೆಳ್ಳಿಯೊಂದಿಗೆ ಬೆಳಗಿದರು (1.88 ಮೀ.). ಏಷ್ಯನ್‌ ಪ್ಯಾರಾ ಗೇಮ್ಸ್‌ ನಲ್ಲಿ ಸತತ 2 ಚಿನ್ನದ ಪದಕ ಗೆದ್ದ ದಾಖಲೆ ಯನ್ನು ಇವರು ಹೊಂದಿದ್ದಾರೆ.

Advertisement

ಇನ್ನೊಂದೆಡೆ ಮರಿಯಪ್ಪನ್‌ ತಂಗವೇಲು ಪ್ಯಾರಾಲಿಂಪಿಕ್ಸ್‌ ಪದಕಗಳ ಹ್ಯಾಟ್ರಿಕ್‌ ಸಾಧಿಸಿದರು. ಆದರೆ ರಿಯೋ ದಿಂದ ಆರಂಭಿಸಿ, ಟೋಕಿಯೊ ಪೂರೈಸಿ, ಪ್ಯಾರಿಸ್‌ನಲ್ಲಿ ಸ್ಪರ್ಧೆ ಮುಗಿಸುವ ವೇಳೆ ಇವರ ಪದಕ ಕಂಚಾಗಿ ಮಾರ್ಪಟ್ಟಿತ್ತು. ಮರಿಯಪ್ಪನ್‌ ರಿಯೋದಲ್ಲಿ ಚಿನ್ನ ಗೆಲ್ಲುವ ಮೂಲಕ ಅಭಿಯಾನ ಆರಂಭಿಸಿದ್ದರು. ಟೋಕಿಯೊದಲ್ಲಿ ಬೆಳ್ಳಿ ಜಯಿಸಿದ್ದರು.

ಫೈನಲ್‌ನಲ್ಲಿ ಅಮೆರಿಕದ ವಿಶ್ವ ದಾಖಲೆಯ ವೀರ ಸ್ಯಾಮ್‌ ಗ್ರೂé (1.77 ಮೀ.) ಅವರ ಆಘಾತಕಾರಿ ನಿರ್ಗಮನ ದಿಂದಾಗಿ ತಂಗವೇಲು ಮೇಲೆ ಚಿನ್ನದ ನಿರೀಕ್ಷೆ ದಟ್ಟವಾಗಿತ್ತು. ಅವರು 1.85 ಮೀ. ಎತ್ತರದಲ್ಲಿ ಯಶಸ್ಸು ಕಂಡಿದ್ದರು. ಆದರೆ 1.88 ಮೀ. ಪ್ರಯತ್ನದಲ್ಲಿ ವಿಫ‌ಲರಾದರು. ಇಲ್ಲಿ ಶರದ್‌ಗೆ ಯಶಸ್ಸು ಕೈಹಿಡಿಯಿತು. ತಂಗವೇಲು ಕಂಚನ್ನು ನೆಚ್ಚಿಕೊಳ್ಳಬೇಕಾಯಿತು.

ಚಿನ್ನದ ಪದಕ ಅಮೆರಿಕದ ಎಝÅ ಫ್ರೆಕ್‌ ಪಾಲಾಯಿತು. ಇವರು 1.94 ಮೀ. ಎತ್ತರಕ್ಕೆ ನೆಗೆದರು.

ಅಜಿತ್‌, ಗುರ್ಜರ್‌ ಜಾವೆಲಿನ್‌ ಹೀರೋಸ್‌
ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಜಾವೆಲಿನ್‌ ಎಸೆತದಲ್ಲಿ ಭಾರತ 3ನೇ ಪದಕಕ್ಕೆ ಮುತ್ತಿಕ್ಕಿತು. ಸುಮಿತ್‌ ಅಂತಿಲ್‌ ಚಿನ್ನದ ಸಾಧನೆಗೈದ ಬಳಿಕ ಎಫ್46 ವಿಭಾಗದಲ್ಲಿ ಅಜಿತ್‌ ಸಿಂಗ್‌ ಯಾದವ್‌ ಬೆಳ್ಳಿ ಹಾಗೂ ಸುಂದರ್‌ ಸಿಂಗ್‌ ಗುರ್ಜರ್‌ ಕಂಚಿನ ಪದಕ ಗೆದ್ದರು.

ಅಜಿತ್‌ 65.62 ಮೀಟರ್‌ ದೂರದ ಸಾಧನೆ ಯೊಂದಿಗೆ ದ್ವಿತೀಯ ಸ್ಥಾನಿ ಯಾದರು. ಇದು ಅವರ ಮೊದಲ ಪ್ಯಾರಾ ಲಿಂಪಿಕ್ಸ್‌ ಪದಕ. ಇಲ್ಲೇ ನಡೆದ 2023ರ ವಿಶ್ವ ಪ್ಯಾರಾ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಹಿರಿಮೆ ಇವರದಾಗಿತ್ತು. 2019 ಮತ್ತು 2021ರ ವರ್ಲ್ಡ್ ಪ್ಯಾರಾ ಗ್ರ್ಯಾನ್‌ಪ್ರಿಕ್ಸ್‌ನಲ್ಲಿ ಬಂಗಾರ ಜಯಿಸಿದ ಸಾಧಕರೂ ಹೌದು.

3 ವರ್ಷಗಳ ಹಿಂದೆ ಟೋಕಿಯೊದಲ್ಲಿ ಕಂಚಿನ ಪದಕ ಜಯಿಸಿದ್ದ ಸುಂದರ್‌ ಸಿಂಗ್‌ ಗುರ್ಜರ್‌ ಪ್ಯಾರಿಸ್‌ ಎಫ್46 ವಿಭಾಗದಲ್ಲೂ ಇದನ್ನು ಪುನರಾ ವರ್ತಿ ಸಿದರು. ಅವರು ತೃತೀಯ ಸ್ಥಾನಿಯಾದರು (64.96 ಮೀ.). ಕ್ಯೂಬಾದ ವರೋನ ಗೊಂಜಾಲೆಸ್‌ ಗುಲೆರ್ಮೊ ಚಿನ್ನ ಗೆದ್ದರು (66.14 ಮೀ.).

ನಕಲಿ ಪೋಲಿಯೋ ಲಸಿಕೆಯಿಂದ ಪಾರ್ಶ್ವವಾಯು
2 ವರ್ಷದ ಮಗುವಾಗಿದ್ದಾಗ ನೀಡಲಾದ ನಕಲಿ ಪೋಲಿಯೋ ಲಸಿಕೆಯಿಂದಾಗಿ ಶರದ್‌ಗೆ ಪಾರ್ಶ್ವವಾಯು ಬಡಿಯಿತು. ಆದರೂ ಹೆತ್ತವರು ಅಕ್ಕರೆಯಿಂದಲೇ ಸಲಹಿದರು. ಶಾಲೆಗೆ ಸೇರಿಸಿದರು. 7ನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಶರದ್‌ಗೆ ಕ್ರೀಡೆಯತ್ತ ಆಸಕ್ತಿ ಬೆಳೆಯಿತು. ಹೈಜಂಪ್‌ನಲ್ಲಿ ಸ್ಪರ್ಧಿಸಿ ಪದಕ ಗೆದ್ದರು. ಅಲ್ಲಿಂದಲೇ ಶರದ್‌ ಅವರ ಕ್ರೀಡಾ ನಂಟು ಶುರುವಾಯಿತು.

2014ರ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ಬಂಗಾರ ಗೆದ್ದರು. ಬಳಿಕ 2018ರ ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲೂ ಚಿನ್ನ ಕೊರಳಿಗೇರಿಸಿಕೊಂಡರು. 2017ರಲ್ಲಿ ಲಂಡನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಗೆದ್ದ ಹಿರಿಮೆಯೂ ಶರದ್‌ ಅವರದ್ದಾಗಿದೆ.

ಶೂಟಿಂಗ್‌: ನಿಹಾಲ್‌, ರುದ್ರಾಂಶ್‌ಗೆ ತಪ್ಪಿದ ಫೈನಲ್‌
ಮಿಕ್ಸೆಡ್‌ 50 ಮೀ. ಎಸ್‌ಎಚ್‌1 ಪಿಸ್ತೂಲ್‌ ಸ್ಪರ್ಧೆಯಲ್ಲಿ ಭಾರತದ ನಿಹಾಲ್‌ ಸಿಂಗ್‌ ಮತ್ತು ರುದ್ರಾಂಶ್‌ ಖಾಂಡೇಲ್ವಾಲ್‌ ಫೈನಲ್‌ ತಲುಪಲು ವಿಫ‌ಲರಾದರು.
2023ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದ ನಿಹಾಲ್‌ ಅರ್ಹತಾ ಸುತ್ತಿನಲ್ಲಿ 19ನೇ ಸ್ಥಾನಿಯಾದರು (522 ಅಂಕ). ಇದೇ ಮೊದಲ ಸಲ ಪ್ಯಾರಾ ಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿರುವ ರುದ್ರಾಂಶ್‌ 22ನೇ ಸ್ಥಾನಕ್ಕೆ ಕುಸಿದರು (517 ಅಂಕ).

ಟಿಟಿ: ಭವಿನಾ ಪರಾಭವ
ಟೋಕಿಯೊದಲ್ಲಿ ಬೆಳ್ಳಿ ಪದಕ ಜಯಿಸಿದ್ದ ಭವಿನಾಬೆನ್‌ ಪಟೇಲ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲುವುದರೊಂದಿಗೆ ವನಿತಾ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಸವಾಲು ಕೊನೆಗೊಂಡಿದೆ. ಕ್ಲಾಸ್‌ 4 ವಿಭಾಗದಲ್ಲಿ ಭವಿನಾ ಅವರನ್ನು ಚೀನದ ಯಿಂಗ್‌ ಝೂ 3-1 ಅಂತರದಿಂದ ಮಣಿಸಿದರು (14-12, 11-9, 8-11, 11-6). ಇದಕ್ಕೂ ಮುನ್ನ ಕ್ಲಾಸ್‌ 3 ವಿಭಾಗದ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಸೋನಾಲ್‌ಬೆನ್‌ ಸೋತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next