Advertisement

ಕಾನೂನು ಪ್ರಕಾರ ರೌಡಿ ಪರೇಡ್‌ ಮಾಡಿ

09:19 AM Aug 22, 2019 | Lakshmi GovindaRaj |

ಬೆಂಗಳೂರು: ರೌಡಿ ಪರೇಡ್‌ ಹೆಸರಿನಲ್ಲಿ ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು, ಪೊಲೀಸ್‌ ಮ್ಯಾನ್ಯುವಲ್‌ ಮತ್ತು ಕಾನೂನು ಪ್ರಕಾರ ಮಾತ್ರ ಪರೇಡ್‌ ಮಾಡಬೇಕು ಎಂದು ನಗರದ ಎಲ್ಲ ವಿಭಾಗಗಳ ಕಾನೂನು ಸುವ್ಯವಸ್ಥೆ ಮತ್ತು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

Advertisement

ಆ.8ರಂದು ಉತ್ತರ ವಿಭಾಗ ಡಿಸಿಪಿ ಎನ್‌.ಶಶಿಕುಮಾರ್‌ ನೇತೃತ್ವದಲ್ಲಿ ನಡೆದ ರೌಡಿ ಪರೇಡ್‌ನ‌ಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ರೌಡಿಯೊಬ್ಬನ ಮೀಸೆ ಹಿಡಿದು ಎಳೆದು ಕರೆ ತಂದು, ಮೀಸೆ ಹಿಡಿದೆ ಆತನ ಪೂರ್ವಾಪರ ವಿಚಾರಿಸಿದ್ದರು. ಸ್ವತಃ ಡಿಸಿಪಿ ಒಬ್ಬ ವ್ಯಕ್ತಿಗೆ “ಕಪಾಳ ಮೋಕ್ಷ’ ಮಾಡಿದ್ದರು. ಇನ್ನೊಬ್ಬ ಅಧಿಕಾರಿ ಒಬ್ಬನ ಕಿವಿ ಹಿಡಿದು ಎಳೆದಿದ್ದರು. ಈ ಕುರಿತು “ಉದಯವಾಣಿ’ ಆ.9ರಂದು “ಮಾನವ ಹಕ್ಕುಗಳ ಮೇಲೆ ಪರೇಡ್‌?’ ಎಂಬ ಶೀರ್ಷಿಕೆಯಡಿ ಪೋಟೋ ಸಹಿತ ವಿಶೇಷ ವರದಿ ಮಾಡಿತ್ತು.

ಶಾಂತಿ ಕಾಪಾಡುವುದು ನಮ್ಮ ಕೆಲಸವಲ್ಲ: ನಗರ ಪೊಲೀಸ್‌ ಆಯುಕ್ತರ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಹಿರಿಯ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಉದಯವಾಣಿ ವರದಿ ಬಗ್ಗೆ ಪ್ರಸ್ತಾಪಿಸಿ ಹಿರಿಯ ಪೊಲೀಸ್‌ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಗರಂ ಆಗಿದ್ದ ಪೊಲೀಸ್‌ ಆಯುಕ್ತರು, ಪೊಲೀಸ್‌ ಮ್ಯಾನ್ಯೂವಲ್‌ ಮತ್ತು ಕಾನೂನು ಪ್ರಕಾರ ಮಾತ್ರ ರೌಡಿ ಪರೇಡ್‌ ಮಾಡಬೇಕು.

ರೌಡಿಶೀಟರ್‌ಗಳನ್ನು ಕರೆಸಿ ಅವರ ಮೈಮೇಲಿದ್ದ ಟ್ಯಾಟುಗಳ ಬಗ್ಗೆ ಪ್ರಶ್ನಿಸುವುದು, ತಲೆಕೂದಲು, ವಸ್ತ್ರಗಳನ್ನು ಹಿಡಿದು ಎಳೆದಾಡುವುದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ. ಅಲ್ಲದೆ, ಕಟ್ಟಿಂಗ್‌, ಶೇವಿಂಗ್‌ ಮಾಡಿಸುವುದು ನಮ್ಮ ಕೆಲಸ ಅಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿರ್ವಹಿಸುವುದು, ಸಮಾಜದಲ್ಲಿ ಶಾಂತಿ ಕಾಪಾಡುವುದು, ಸಾರ್ವಜನಿಕರಿಗೆ ನ್ಯಾಯ ಕೊಡಿಸುವುದಷ್ಟೇ ನಮ್ಮ ಕೆಲಸ. ಪ್ರತಿಯೊಬ್ಬ ಪೊಲೀಸ್‌ ಅಧಿಕಾರಿ ತಮ್ಮ ಅಧಿಕಾರ ವ್ಯಾಪ್ತಿಯನ್ನು ಅರಿತು ಕೆಲಸ ಮಾಡಬೇಕು ಎಚ್ಚರಿಕೆ ನೀಡಿದ್ದಾರೆ.

ರೌಡಿಪಟ್ಟಿಯಿಂದ ಹೊರಗಿರುವವರ ಬಗ್ಗೆ ನಿಗಾ: ರೌಡಿ ಪರೇಡ್‌ ನಡೆಸುವ ಉದ್ದೇಶ, ರೌಡಿ ಪಟ್ಟಿಯಲ್ಲಿರುವ ವ್ಯಕ್ತಿ ಪ್ರಸ್ತುತ ಯಾವ ಕೆಲಸ ಮಾಡುತ್ತಿದ್ದಾನೆ. ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದಾನೆಯೇ? ಇಲ್ಲವೇ? ಹಾಗೂ ಆತನ ಪೂರ್ವಾಪರ ಏನು? ಎಂಬ ಮಾಹಿತಿ ಸಂಗ್ರಹಿಸಬೇಕು. ಪೊಲೀಸರ ಭಯದಿಂದ ಪ್ರತಿಯೊಬ್ಬ ರೌಡಿಯೂ ರೌಡಿ ಪರೇಡ್‌ನ‌ಲ್ಲಿ ಭಾಗಿಯಾಗುತ್ತಾನೆ. ಆದರೆ, ರೌಡಿಪಟ್ಟಿಯಲ್ಲಿ ಇಲ್ಲದೇ ಅಕ್ರಮ ಚಟುವಟಿಕೆಯಲ್ಲಿ ತೊಡಗಿ, ಸಮಾಜದ ಸ್ವಾಸ್ಥ ಹಾಳು ಮಾಡುವವರು. ಸಾರ್ವಜನಿಕರ ನಿದ್ದಿಗೆಡಿಸುವವರ ಹಿಡಿದು ಪರೇಡ್‌ ಮಾಡಿ, ಅವರ ಮೇಲೆ ನಿಗಾವಹಿಸಿ ಎಂದು ಸೂಚಿಸಿದ್ದಾರೆ.

Advertisement

ಮಾಫಿಯಾಗಳ ಮೇಲೆ ನಿಗಾವಹಿಸಿ: ಬೆಂಗಳೂರಿನಲ್ಲಿ ಮೀಟರ್‌ ಬಡ್ಡಿ, ನೀರು ಮಾರಾಟ ದಂಧೆ, ರಿಯಲ್‌ ಎಸ್ಟೇಟ್‌ ದಂಧೆ ಸೇರಿ ಹತ್ತಾರು ಮಾಫಿಯಾಗಳು ಅವ್ಯಾಹತವಾಗಿ ನಡೆಯುತ್ತಿದೆ. ಅವುಗಳ ಮೇಲೆ ನಿಗಾವಹಿಸಿ, ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಮಾಫಿಯಾಗಳ ಮುಖಂಡರ ಪಟ್ಟಿ ಸಿದ್ಧಪಡಿಸಿ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ ಎಂದು ಸೂಚಿಸಿರುವುದಾಗಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌ ಹೇಳಿದರು.

“ರೌಡಿ ಪೆರೇಡ್‌ನ‌ಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ಅವಕಾಶ ಕೊಡದೆ, ಕಾನೂನು ಬದ್ಧವಾಗಿ ನಡೆಸುವಂತೆ ಎಲ್ಲ ಡಿಸಿಪಿಗಳಿಗೆ ಸೂಚಿಸಲಾಗಿದೆ.’
– ಭಾಸ್ಕರ್‌ರಾವ್‌, ನಗರ ಪೊಲೀಸ್‌ ಆಯುಕ್ತರು

– ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next