ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಮತ್ತು ಬಕ್ರೀದ್ ಹಬ್ಬದ ಹಿನ್ನೆಲೆ ಹಾಗೂ ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉತ್ತರ ವಿಭಾಗದ ಪೊಲೀಸರು ಗುರುವಾರ 379 ರೌಡಿಶೀಟರ್‌ಗಳ ಪರೇಡ್ ನಡೆಸಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿ ಯಾಗದಂತೆ ಎಚ್ಚರಿಕೆ ನೀಡಿದರು.
ರೌಡಿಶೀಟರ್‌ಗಳ ಪರೇಡ್ ಹೆಸರಿನಲ್ಲಿ ಪೊಲೀಸರು ‘ಮಾನವ ಹಕ್ಕು ಉಲ್ಲಂಘನೆ’ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅಲ್ಲದೆ, ಈ ರೀತಿಯ ಪರೇಡ್‌ಗೆ ಕೆಲ ನಿವೃತ್ತ ಪೊಲೀಸ್ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಪರೇಡ್‌ನಲ್ಲಿ ರೌಡಿಗಳಿಗೆ ಪರಿವರ್ತನೆ ಆಗುವಂತೆ ಎಚ್ಚರಿಕೆ ನೀಡಬೇಕೇ ಹೊರತು ಅವರನ್ನು ಪ್ರಚೋದಿಸಬಾರದು. ಇತ್ತೀಚೆಗೆ ಇದೊಂದು ‘ಶೋ ಅಪ್ ‘ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಉತ್ತರ ವಿಭಾಗದ ಪೊಲೀಸರು ಬುಧವಾರ ತಡರಾತ್ರಿ ಡಿಸಿಪಿ ಎನ್.ಶಶಿಕುಮಾರ್ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 779 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಗುರುವಾರ ಮಧ್ಯಾಹ್ನ ಮಲ್ಲೇಶ್ವರಂ ಆಟದ ಮೈದಾನದಲ್ಲಿ 379 ರೌಡಿಗಳ ಪರೇಡ್ ನಡೆಸಿದರು. ಈ ವೇಳೆ ಅವರ ಪೂರ್ವಪರ, ಪ್ರಸ್ತುತ ಕೆಲಸ, ಮನೆ ವಿಳಾಸ, ಸಂಬಂಧಿಕರ ವಿಳಾಸ, ಉದ್ಯೋಗ, ಮೊಬೈಲ್ ನಂಬರ್ ಹಾಗೂ ಇತರೆ ಮಾಹಿತಿ ಪಡೆದುಕೊಂಡರು. ಅವರ ವಿರುದ್ಧ ಇರುವ ಇತ್ತೀಚಿನ ಅಪರಾಧ ಕೃತ್ಯಗಳ ಬಗ್ಗೆಯೂ ಮಾಹಿತಿ ಪಡೆಯಲಾಯಿತು. ನಂತರ ಮತ್ತೂಮ್ಮೆ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಪೊಲೀಸರು ಎಚ್ಚರಿಕೆ ನೀಡಿದರು ಎನ್ನಲಾಗಿದೆ.
ಉತ್ತರ ವಿಭಾಗದಲ್ಲಿ ಕಳೆದ ಮೂರು ತಿಂಗಳಲ್ಲಿ 93 ಕೊಲೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಭಾಗಿಯಾಗಿದ್ದ 50 ಮಂದಿ ರೌಡಿಗಳು ಪರೇಡ್‌ನಲ್ಲಿ ಇದ್ದರು. 81 ಮಂದಿ ನ್ಯಾಯಾಂಗ ಬಂಧನದಲ್ಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ 313 ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳ 152 ಮಂದಿ ರೌಡಿಗಳು ಪರೇಡ್‌ನಲ್ಲಿದ್ದರು. ಕೊಲೆ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ 358 ಮಂದಿ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದ್ದು, 368 ಮಂದಿ ವಿರುದ್ಧ ರೌಡಿ ಪಟ್ಟಿ ತೆರೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.
Advertisement
ಈ ಸಂದರ್ಭದಲ್ಲಿ ಮೀಸೆ ಬಿಟ್ಟಿರುವುದು, ಕ್ಷೌರ ಮಾಡಿಸದಿರುವುದು ಹಾಗೂ ರೌಡಿ ಶೀಟರ್‌ಗಳ ವೇಷ-ಭೂಷಣ, ವರ್ತನೆ ಬಗ್ಗೆ ಪೊಲೀಸ್ ಅಧಿ ಕಾರಿಗಳು ಹೀಯಾಳಿಸುವ ರೀತಿಯಲ್ಲಿ ಮಾತನಾಡಿ ದ್ದಾರೆ ಎನ್ನಲಾಗಿದ್ದು ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.
Related Articles
Advertisement
ಸ್ಥಳದಲ್ಲೇ ಶೇವಿಂಗ್, ಕಟಿಂಗ್: ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪರೇಡ್‌ಗೆ ಆಗಮಿಸಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್, ರೌಡಿಗಳ ಪೂರ್ವಪರ ವಿಚಾರಣೆ ವೇಳೆ ರೌಡಿಗಳ ಹೇರ್‌ಸ್ಟೈಲ್, ಗಡ್ಡ, ಮೀಸೆ ಹಾಗೂ ಟ್ಯಾಟೂ ಕಂಡು ಆಕ್ರೋಶಕೊಂಡರು. ವಿಭಿನ್ನ ಹೇರ್‌ಸ್ಟೈಲ್ ಮಾಡಿಕೊಂಡ ರೌಡಿಗಳಿಗೆ ಸ್ಥಳದಲ್ಲೇ ಕಪಾಳಮೋಕ್ಷ ಹಾಗೂ ಲಾಠಿ ರುಚಿ ಕೂಡ ತೋರಿಸಿದರು. ನಂತರ ಕ್ಷೌರಿಕರನ್ನು ಕರೆಸಿ ಸ್ಥಳದಲ್ಲೇ ಕಟಿಂಗ್, ಶೇವಿಂಗ್ ಮಾಡಿಸಿ, ರೌಡಿಗಳಿಂದಲೇ ಹಣ ಕೊಡಿಸಿದರು. ಇನ್ನು ಟ್ಯಾಟೂ ಹಾಕಿಕೊಂಡವರಿಗೆ ಮುಂದಿನ ಪರೇಡ್‌ನಲ್ಲಿ ಈ ರೀತಿಯ ಟ್ಯಾಟೂಗಳು ಇರಬಾರದು ಎಚ್ಚರಿಕೆ ನೀಡಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದಾರಾ?: ರೌಡಿಗಳ ಪರೇಡ್ ಮಾಡುವ ಉದ್ದೇಶ, ಅವರನ್ನು ಮಖ್ಯವಾಹಿನಿಗೆ ತರುವುದು ಹಾಗೂ ಮತ್ತೂಮ್ಮೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಂತೆ ಎಚ್ಚರಿಕೆ ನೀಡುವುದು. ಆದರೆ, ಇತ್ತೀಚಿನ ರೌಡಿಗಳ ಪರೇಡ್ ಇದ್ಕಕೆ ಭಿನ್ನವಾಗಿವೆ.ಯಾಕೆಂದರೆ, ಪರೇಡ್‌ನಲ್ಲಿ ರೌಡಿಗಳ ಪೂರ್ವಾಪರ ವಿಚಾರಣೆ ಪಡೆಯುವುದರ ಜತೆಗೆ ಅವರ ಕೂದಲು, ಗಡ್ಡ, ಮೀಸೆ ಎಳೆಯುವುದು, ಟ್ಯಾಟೂ ಅಳಿಸುವುದು ಮಾಡುತ್ತಿದ್ದಾರೆ. ದೃಶ್ಯ ಮಾಧ್ಯಮಗಳಲ್ಲಿ ತಮ್ಮನ್ನು ‘ಸೂಪರ್ ಕಾಪ್’ ಎಂದು ಬಿಂಬಿಸಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾದರೂ, ಸಾರ್ವಜನಿಕವಾಗಿ ಆತನಿಗೆ ಅವಮಾನ ಮಾಡುವ ಮೂಲಕ ಆತನನ್ನು ಪರೋಕ್ಷವಾಗಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇದೊಂದು ಮಾನವ ಹಕ್ಕು ಉಲ್ಲಂಘನೆ ಎನ್ನಲಾಗಿದೆ.
ಇದು ಶೋ-ಅಫ್ ಕಾರ್ಯಕ್ರಮ: ನಿವೃತ್ತ ಅಧಿಕಾರಿಗಳ ಆಕ್ಷೇಪ
ರೌಡಿಗಳ ಪರೇಡ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡುವ ಕಾರ್ಯಕ್ರಮ ಆಗಬೇಕು. ಆದರೆ, ಅಧಿಕಾರಿಯ ‘ಶೋ ಅಪ್’ ಕಾರ್ಯಕ್ರಮ ಆಗಬಾರದು ಎಂದು ಅಭಿಪ್ರಾಯವ್ಯಕ್ತಪಡಿಸುತ್ತಾರೆ ನಿವೃತ್ತ ಪೊಲೀಸ್ ಅಧಿಕಾರಿಗಳು. ‘ರೌಡಿಪರೇಡ್ ಎಂದರೇ ಅರ್ಥ ಆಗುವುದಿಲ್ಲ. ಯಾಕೆ ಮಾಡಬೇಕು? ಪ್ರಯೋಜನ ಏನು? ಅದು ಶೋ ಅಪ್?’ ಎಂದು ಪ್ರಶ್ನಿಸುತ್ತಾರೆ ಬೆಂಗಳೂರಿನ ನಿವೃತ್ತ ಪೊಲೀಸ್ ಆಯುಕ್ತ ಮತ್ತು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಎಸ್.ಮರಿಸ್ವಾಮಿ. ‘ರೌಡಿಗಳ ಪೂರ್ವಾಪರ ವಿಚಾರಣೆ ನಡೆಸಬೇಕು. ತಪ್ಪು ಮಾಡಿದಾಗ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ರೌಡಿಗಳ ಮೇಲೆ ಹೆಚ್ಚು ನಿಗಾವಹಿಸಬೇಕು. ಆದರೆ, ಪರೇಡ್ ಮಾಡುವುದರಿಂದ ಯಾವುದೇ ಪ್ರಯೋಜನೆ ಇಲ್ಲ’ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದರು. ‘ಇತ್ತೀಚೆಗೆ ರಿಯಲ್ ಪೊಲೀಸಿಂಗ್ ಇಲ್ಲ. ಪರೇಡ್‌ನಲ್ಲಿರುವ ರೌಡಿಯ ಮೂರರಿಂದ ಒಂದು ವರ್ಷದೊಳಗಿನ ಆತನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಯಾರೊಂದಿಗೆ ಗುರುತಿಸಿಕೊಂಡಿದ್ದಾನೆ.
ಆತ ರೌಡಿ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡಿದ್ದಾನೆಯೇ? ಇಲ್ಲವೇ? ಎಂದು ಪರಿಶೀಲಿಸಬೇಕು. ಆತ ಅಕ್ರಮ ಚಟುವಟಿಕೆಯಿಂದ ದೂರವಾಗಿ ಹೊಸ ಬದುಕು ಕಟ್ಟಿಕೊಂಡಿದ್ದರೆ ಅದಕ್ಕೆ ಅವಕಾಶ ಕೊಡಬೇಕು. ಆದರೆ, ಈ ರೀತಿ ಕರೆತಂದು ಸಾರ್ವಜನಿಕವಾಗಿ ಅವಮಾನ ಮಾಡುವುದು ಹೇಯ ಕೃತ್ಯ.ಆತನಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಆದರೆ, ಇತ್ತೀಚೆಗೆ ಅರ್ಥವೇ ಇಲ್ಲದಂತೆ ಪರೇಡ್ ಮಾಡುತ್ತಾರೆ’ ಎಂದು ಬೆಂಗಳೂರಿನ ನಿವೃತ್ತ ಪೊಲೀಸ್ ಆಯುಕ್ತ ಮತ್ತು ನಿವೃತ್ತ ಪೊಲೀಸ್ ಮಹಾನಿರ್ದೇಶಕ ರೇವಣ್ಣ ಸಿದ್ದಯ್ಯ ಅಭಿಪ್ರಾಯವ್ಯಕ್ತಪಡಿಸಿದರು.
ಮಾನವ ಹಕ್ಕು ಉಲ್ಲಂಘನೆ: ರೌಡಿ ಪರೇಡ್‌ನಲ್ಲಿ ಸಾರ್ವಜನಿಕವಾಗಿ ರೌಡಿಗಳಿಗೆ ಹೊಡೆಯುವುದು, ಮೀಸೆ ಹಿಡಿದು ಎಳೆಯುವುದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ. ರೌಡಿಗಳ ಮೇಲೆ ನಿಗಾವಹಿಸಬಹುದು. ಆದರೆ, ಅವರನ್ನು ಕರೆಸಿ ಅವರೊಂದಿಗೆ ಕಾನೂನು ಬಾಹಿರವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಈ ಸಂಬಂಧ ದೂರು ಬಂದರೆ ಸಂಬಂಧಿಸಿದ ಅಧಿಕಾರಿಯನ್ನು ಕರೆದು ವಿಚಾರಣೆ ನಡೆಸುತ್ತೇವೆ. ನಂತರ ಪೊಲೀಸ್ ಮ್ಯಾನ್ಯುವಲ್ ಅಥವಾ ಯಾವ ಕಾನೂನು ಪ್ರಕಾರ ಈ ರೀತಿ ಮಾಡುತ್ತಿರಾ ಎಂದು ಪ್ರಶ್ನಿಸಲಾಗುವುದು. ● ಆರ್.ಕೆ.ದತ್ತಾ, ಮಾನವ ಹಕ್ಕುಗಳ ಆಯೋಗದ ಸದಸ್ಯರು (ರಾಜ್ಯದ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ)
● ಮೋಹನ್ ಭದ್ರಾವತಿ