ಬೆಂಗಳೂರು: ಕೊಲೆ, ದರೋಡೆ, ಸರಗಳ್ಳತನ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ತೊಡಗಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿರುವ ರೌಡಿಶೀಟರ್‌ಗಳ ಪರೇಡ್ ನಡೆಸಿದ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಅಪರಾಧ ಚಟುವಟಿಕೆಗಳಲ್ಲಿ ತೊಡಗದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಯಡಿಯೂರು ಕೆರೆಯ ವಾಜಪೇಯಿ ಮೈದಾನದಲ್ಲಿ ಜಯನಗರ ಉಪವಿಭಾಗದ ಐದು ಪೊಲೀಸ್ ಠಾಣೆಗಳ 145ಕ್ಕೂ ಹೆಚ್ಚು ರೌಡಿಶೀಟರ್‌ಗಳನ್ನು ಪರೇಡ್ ನಡೆಸಿದ ಅವರು, ಸಾರ್ವಜನಿಕರಿಗೆ ತೊಂದರೆ ಕೊಡುವುದು, ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವುದು, ಪ್ರಚೋದನೆ ನೀಡಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪರೇಡ್‌ನಲ್ಲಿ ಪ್ರತಿಯೊಬ್ಬ ರೌಡಿಯ ಪೂರ್ವಪರ ಪರಿಶೀಲನೆ ನಡೆಸಿದ ಅವರು, ಇಷ್ಟು ದಿನಗಳು ಅಪರಾಧ ಕೃತ್ಯಗಳಲ್ಲಿ ತೊಡಗಿದ್ದು ಸಾಕು. ಇನ್ಮುಂದೆ ಕುಟುಂಬದ ಜತೆ ಸಮಾಜದಲ್ಲಿ ಗೌರವಯುತವಾಗಿ ಬದುಕಿ. ಇಲ್ಲವಾದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬಿಸಿ ಮುಟ್ಟಿಸಿದರು.
ಅಲ್ಲದೆ, ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುವುದು ಸರಿಯಲ್ಲ. ಜನರಿಗೆ ಬೆದರಿಸಿ ಭಯದ ವಾತಾವರಣ ಸೃಷ್ಟಿಸುವುದು ಕಂಡು ಬಂದರೆ ಸುಮ್ಮನಿರುವುದಿಲ್ಲ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು ಕಂಡು ಬಂದಲ್ಲಿ ಗೂಂಡಾ ಕಾಯ್ದೆ ಜಾರಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮತ್ತೂಂದೆಡೆ ಪರೇಡ್‌ಗೆ ಗೈರಾದ ರೌಡಿಗಳ ಪಟ್ಟಿ ತಯಾರಿಸಿ. ಅಪರಾಧ ಹಿನ್ನೆಲೆಯುಳ್ಳ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾವಹಿಸಿ. ಜನರಿಗೆ ತೊಂದರೆ ಕೊಡುವುದು ಕಂಡು ಬಂದರೆ, ಕೂಡಲೇ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಮ್ಮ ವಿಭಾಗದ ಪೊಲೀಸರಿಗೆ ಸೂಚಿಸಿದರು.