ಮೈಸೂರಲ್ಲಿ ಚಿತ್ರನಗರಿ ಆಗಬೇಕು, ಅಲ್ಲಿ ಸಿನಿಮಾ ಚಟುವಟಿಕೆಗಳು ನಡೆಯಬೇಕು ಎಂಬ ಕೂಗು ಮೊದಲಿನಿಂದಲೂ ಇದೆ. ಅದಕ್ಕೆ ಕಾರಣವಿಷ್ಟೇ. ಮೈಸೂರು ಸಾಂಸ್ಕೃತಿಕ ನಗರಿ, ಅಲ್ಲಿ ಸುಂದರ ತಾಣಗಳಿವೆ, ಸಿನಿಮಾ ಚಿತ್ರೀಕರಣಕ್ಕೆ ಅನುಕೂಲವಾಗುವಂತಹ ಎಲ್ಲಾ ವಾತಾವರಣವೂ ಅಲ್ಲಿದೆ ಅನ್ನೋದು. ಅದೇನೆ ಇರಲಿ, ಮೈಸೂರಿನಲ್ಲಿ ಚಿತ್ರನಗರಿ ಯಾವಾಗ ಆಗುತ್ತೆ ಅನ್ನೋದು ಮುಖ್ಯವಲ್ಲ. ಈಗ ಅಲ್ಲಿನ ಮಂದಿ ಸಿನಿಮಾ ಮಾಡಲು ಮುಂದಾಗಿರುವುದು ಮುಖ್ಯ. ಹಾಗಾಗಿ, ಮೈಸೂರು ಸದ್ಯಕ್ಕೆ ಸಿನಿಮಾ ಚಟುವಟಿಕೆಗಳ ತಾಣವಾಗಿ ಮಾರ್ಪಾಡಾಗುತ್ತಿದೆ.
ಇದಕ್ಕೆ ಉದಾಹರಣೆ ಅಲ್ಲೀಗ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೌದು, ಸಿನಿಮಾ ಮೇಲೆ ಅತಿಯಾದ ಆಸಕ್ತಿ ಹೊಂದಿರುವ ಮೈಸೂರಿನ ಮಂದಿ ಇದೀಗ ಒಂದು ಸಿನಿಮಾ ಮಾಡುತ್ತಿದ್ದಾರೆ.
ಹೆಸರು “ಪರ್ಚಂಡಿ’. ವಿಶೇಷವೆಂದರೆ, ಈ ತ್ರದಲ್ಲಿರೋರೆಲ್ಲರೂ ಮೈಸೂರು ಭಾಗದವರೇ. ಕಲಾವಿದರು, ತಂತ್ರಜ್ಞರು, ನಿರ್ಮಾಪಕರು, ನಿರ್ದೇಶಕರು ಹೀಗೆ ಇಡೀ ಚಿತ್ರತಂಡದಲ್ಲಿ ಇರುವವರೆಲ್ಲರೂ ಮೈಸೂರಿನವರು.
“ಪರ್ಚಂಡಿ’ ಚಿತ್ರದ ನಿರ್ಮಾಪಕ ಶಿವಾನಂದ್ ಮೈಸೂರಿನವರು. ಸಿನಿಮಾ ಮೇಲಿನ ಪ್ರೀತಿಯಿಂದ ತಮ್ಮ ನೆಲದ ಪ್ರತಿಭೆಗಳನ್ನೆಲ್ಲಾ ಸೇರಿಸಿಕೊಂಡು ಚಿತ್ರ ಮಾಡಿದ್ದಾರೆ ಶಿವಾನಂದ್. ಅದಷ್ಟೇ ಆಗಿದ್ದರೆ, ಇದು ಸುದ್ದಿಯಾಗುತ್ತಿರಲಿಲ್ಲ. ಸಿನಿಮಾಗಾಗಿ ಅವರು ಸ್ವಂತ ಯೂನಿಟ್ ಖರೀದಿಸಿರುವುದು ವಿಶೇಷ. ಶಿವಾನಂದ್ ಅವರು ತಮ್ಮ ಚಿತ್ರದ ಚಿತ್ರೀಕರಣ ಶುರುವಾಗಿದ್ದೇ ತಡ, ಸ್ವಂತ ಯೂನಿಟ್ ಇಟ್ಟುಕೊಂಡು ಕೆಲಸ ಶುರುಮಾಡಿದರು. ಇದು ಅವರ ಸಿನಿಮಾಗಾಗಿಯೇ ಅಲ್ಲ, ಮೈಸೂರಿನ ಮಂದಿ ಈಗ ಮೆಲ್ಲನೆ ಚಿತ್ರ ನಿರ್ಮಾಣಕ್ಕೆ ತೊಡಗಿದ್ದಾರೆ.
ಹಾಗಾಗಿ, ಆ ಭಾಗದ ಜನರು ಸಿನಿಮಾ ಮಾಡುವಾಗ, ಯೂನಿಟ್ ಗಾಗಿ ಬೇರೆಡೆ ಹೋಗುವುದು ಬೇಡ ಎಂಬ ಕಾರಣದಿಂದಲೂ ಶಿವಾನಂದ್ ಯೂನಿಟ್ ಇಟ್ಟುಕೊಂಡಿದ್ದಾರೆ. ಈಗ ಮೈಸೂರಿನ ಕೆಲ ಪ್ರತಿಭೆಗಳು ಸಿನಿಮಾಗೆ ಕೈ ಹಾಕಿದ್ದಾರೆ. ಕೆಲವು ಚಿತ್ರಗಳು ಈಗಾಗಲೇ ಚಿತ್ರೀಕರಣ ಮುಗಿಸಿವೆ.
ಅಂದಹಾಗೆ, “ಪರ್ಚಂಡಿ’ ಚಿತ್ರದಲ್ಲಿರುವ ನಿರ್ದೇಶಕ ಜೂಮ್ ರವಿ, ನಾಯಕ ಮಹದೇವ್, ಸಂಗೀತ ನಿರ್ದೇಶಕ ವಿನಯ್ ರಂಗದೊಳ್, ಗಾಯಕರಾದ ವಿಜಯಪ್ರಕಾಶ್, ಸರಿಗಮಪ ಖ್ಯಾತಿಯ ಹರ್ಷ, ಕುರಿರಂಗ ಸೇರಿದಂತೆ ಇನ್ನಿತರೆ ಮೈಸೂರಿನ ಪ್ರತಿಭೆಗಳು ಇಲ್ಲಿ ಕೆಲಸ ಮಾಡಿವೆ. ಅದೇನೆ ಇರಲಿ, ಒಂದು ಸಿನಿಮಾಗಾಗಿ ಯೂನಿಟ್ ಖರೀದಿಸಿ, ಅಲ್ಲಿ ಸಿನಿಮಾ ಚಟುವಟಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡುತ್ತಿರುವುದು ನಿಜಕ್ಕೂ ಒಪ್ಪುವ ಮಾತೇ ಸರಿ. ಅಂತೂ ಮೈಸೂರಲ್ಲೂ ಚಿತ್ರರಂಗ ಬೇರು ಬಿಡುವ ಸೂಚನೆ ನೀಡುತ್ತಿದೆ.