ಪೋರ್ಟ್ ಮೋಸ್ಬೇ:ಜಗತ್ತಿನ ಹೆಚ್ಚಿನ ದೇಶಗಳಲ್ಲಿ ಕೃಷಿ ಖಾತೆ ಇರುತ್ತದೆ. ಈಗೀಗ ಕೆಲವು ದೇಶಗಳಲ್ಲಿ ಸಂತೋಷಕ್ಕಾಗಿ ಒಂದು ಸಚಿವಾಲಯ ಶುರು ಮಾಡಿದ್ದಾರೆ. ಆದರೆ, ಕಾಫಿ ಮತ್ತು ತಾಳೆ ಬೆಳೆಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಿದ್ದು ಕೇಳಿದ್ದೀರಾ?
ಪಪುವಾ ನ್ಯೂ ಗಿನಿಯಾದಲ್ಲಿ ಹೊಸತಾಗಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರದಲ್ಲಿ ಇಂಥ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಲ್ಲಿನ ಪ್ರಧಾನಮಂತ್ರಿ ಜೇಮ್ಸ್ ಪರಾಮೆ ಹೇಳಿದ್ದಾರೆ.
ಎರಡೂ ಸಚಿವಾಲಯಗಳು ಪ್ರತ್ಯೇಕವಾದರೂ, ಅವುಗಳು ಕೃಷಿ ಖಾತೆಯ ಸಚಿವರ ಜತೆಗೆ ಕುಳಿತು ಕೆಲಸ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಕಾಫಿ ಬೆಳೆಯನ್ನು ಮತ್ತಷ್ಟು ಹೆಚ್ಚಿಸಿ,ಅದನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಿ ಆದಾಯ ಗಳಿಸುವ ನಿಟ್ಟಿನಲ್ಲಿ ಹೊಸ ಖಾತೆ ಪ್ರಯತ್ನ ನಡೆಸಲಿದೆ. ಸಂಸದ ಜೋ ಕುಲಿ ಅವರನ್ನು ಸಚಿವರನ್ನಾಗಿ ನೇಮಕ ಮಾಡಲಾಗಿದೆ. ಜಗತ್ತಿನಲ್ಲಿಯೇ ಇಂಥ ಒಂದು ಕ್ರಮ ಮೊದಲು ಎಂದು ಹೇಳಿದ್ದಾರೆ.
ಆ ದೇಶದಲ್ಲಿ ಬೆಳೆಯಲಾಗುವ ಕಾಫಿ ಪ್ರಬೇಧಕ್ಕೆ ಆಸ್ಟ್ರೇಲಿಯಾ, ಅಮೆರಿಕ, ಜಪಾನ್‌ಗಳಲ್ಲಿ ಬೇಡಿಕೆ ಇದೆ. ಪಪುವಾ ನ್ಯೂ ಜಿನಿಯಾದಲ್ಲಿ ಶೇ. 85ರಷ್ಟು ಕಾಫಿಯನ್ನು ಬೆಳೆಯಲಾಗುತ್ತದೆ.
ತಾಳೆ ಎಣ್ಣೆ ಸಚಿವ:
ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುವ ತಾಳೆ ಎಣ್ಣೆ ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಹೊಸ ಸಚಿವಾಲಯ ಸೃಷ್ಟಿಸಲಾಗಿದೆ. ಈ ಹಿಂದೆ ಭೂತಾನ್‌ನಲ್ಲಿ ಜೀವನದಲ್ಲಿ ಸಂತೋಷ ಹೆಚ್ಚಿಸುವ ನಿಟ್ಟಿನಲ್ಲಿ ಆಯೋಗ ರಚಿಸಿದ್ದು, ಯುಎಇನಲ್ಲಿ ಸಂತೋಷಕ್ಕಾಗಿ ಸಂಪುಟ ದರ್ಜೆ ಸಚಿವ ಸ್ಥಾನ ಸೃಷ್ಟಿ ಮಾಡಿದ್ದು, ಮಧ್ಯಪ್ರದೇಶದಲ್ಲಿ ಕೂಡ ಇದೇ ಮಾದರಿಯ ಖಾತೆಯ ರಚಿಸಿದ್ದು ಜಗತ್ತಿನಾದ್ಯಂತ ಸುದ್ದಿಯಾಗಿತ್ತು.