ಮೊನ್ನೆಯಷ್ಟೇ ದುನಿಯಾ ವಿಜಯ್ ಅವರ “ಕನಕ’ ಸಿನಿಮಾ ಶುರುವಾಗಿತ್ತು. ಅದಾದ ಬಳಿಕ ತೆಲುಗಿನ ಖ್ಯಾತ ನಟ ಜೂನಿಯರ್ ಎನ್‌ಟಿಆರ್ ಸಿನಿಮಾದಲ್ಲಿ ದುನಿಯಾ ವಿಜಯ್ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಯೂ ಹೊರಬಿತ್ತು. ಆ ಸಿನಿಮಾದಲ್ಲಿ ಇನ್ನೇನು ದುನಿಯಾ ವಿಜಯ್ ನಟಿಸುವ ತಯಾರಿ ಮಾಡಿಕೊಳ್ಳುತ್ತಿರುವಂತೆಯೇ, ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಅವರು. ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಈ ಹೊತ್ತಿನ ವಿಶೇಷ.
ಈ ಹಿಂದೆ ಪ್ರೀತಂ ಗುಬ್ಬಿ, ದುನಿಯಾ ವಿಜಯ್‌ಗಾಗಿ ‘ಜಾನಿ ಮೇರಾ ನಾಮ್’ ಚಿತ್ರ ಮಾಡಿದ್ದರು. ಜಯಣ್ಣ ನಿರ್ಮಾಣದ ಆ ಚಿತ್ರ ಸಕ್ಸಸ್ ಆಗಿತ್ತು. ಈಗ ಪ್ರೀತಂ ಗುಬ್ಬಿ ಮತ್ತು ದುನಿಯಾ ವಿಜಯ್ ಮತ್ತೆ ಜೊತೆಯಾಗಿದ್ದಾರೆ. ಆ ಚಿತ್ರಕ್ಕೆ “ಜಾನಿ ಜಾನಿ ಎಸ್ ಪಪ್ಪಾ” ಎಂದು ನಾಮಕರಣ ಮಾಡಲಾಗಿದೆ. ಈ ಶೀರ್ಷಿಕೆ ಕೇಳಿದರೆ, ಇದು “ಜಾನಿ ಮೇರಾ ನಾಮ್’ ಚಿತ್ರದ ಮುಂದುವರೆದ ಭಾಗ ಇರಬಹುದಾ? ಎಂಬ ಪ್ರಶ್ನೆ ಎದುರಾಗೋದು ನಿಜ. ಆದರೆ, ಅದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ ದುನಿಯಾ ವಿಜಯ್.
ಹೌದು, “ಜಾನಿ ಮೇರಾ ನಾಮ್’ ಸಿನಿಮಾ ಬಳಿಕ ಇನ್ನೊಂದು ಚಿತ್ರ ಮಾಡಬೇಕು ಅಂತ ಮಾತುಕತೆ ನಡೆದಿತ್ತಾದರೂ, ಅದಕ್ಕೆ ಸರಿಯಾದ ಕಥೆ, ಸಮಯ ಸಿಕ್ಕಿರಲಿಲ್ಲ. ಈಗ ಅದಕ್ಕೆ ಕಾಲ ಕೂಡಿಬಂದಿದೆ. “ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ ಕಥೆ ತುಂಬಾ ಚೆನ್ನಾಗಿದೆ. ನಿಜವಾಗಿಯೂ ಇದು ದೊಡ್ಡ ಮಟ್ಟದಲ್ಲೇ ಚಿತ್ರವಾಗಿ ಹೊರಬರಲಿದೆ. ನನಗೂ ಇಷ್ಟು ದಿನ ಬ್ಯಾಕ್ ಟು ಬ್ಯಾಕ್ ಬರೀ ಆ್ಯಕ್ಷನ್ ಸಿನಿಮಾಗಳನ್ನೇ ಮಾಡಿ ಸಾಕಾಗಿತ್ತು. ಒಂದೊಳ್ಳೆಯ ಮನರಂಜನೆ ಸಿನಿಮಾ ಮಾಡುವ ಆಸೆ ಇತ್ತು.
ಪ್ರೀತಂ ಗುಬ್ಬಿ “ಜಾನಿ ಜಾನಿ ಎಸ್ ಪಪ್ಪಾ’ ಕಥೆ ಹೇಳಿದರು. ನಿಜವಾಗಿಯೂ ಅದು ಸಖತ್ ಫನ್ನೀಯಾಗಿದೆ. ಹ್ಯೂಮರ್ ಸಿನಿಮಾ ಮಾಡುವ ಆಸೆ ಇದ್ದುದರಿಂದ, ಆ ಕಥೆ ಒಪ್ಪಿ ಮಾಡುತ್ತಿದ್ದೇನೆ. ಸದ್ಯಕ್ಕೆ ಈ ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶನ ಮಾಡುತ್ತಾರೆ. ನಾನು ನಟಿಸುತ್ತೇನೆ. “ಕನಕ’ ಬಳಿಕ ಶುರುವಾಗಲಿದೆ ಎಂಬುದಷ್ಟೇ ಪಕ್ಕಾ. ಉಳಿದಂತೆ ನಾಯಕಿ ಯಾರಾಗುತ್ತಾರೆ, ಯಾರ್ಯಾರು ಇರುತ್ತಾರೆ, ತಂತ್ರಜ್ಞರು ಯಾರು ಎಂಬಿತ್ಯಾದಿ ವಿಷಯಗಳು ಗೌಪ್ಯ.
ಅದಕ್ಕೆ ಎಲ್ಲಾ ತಯಾರಿಯೂ ನಡೆಯುತ್ತಿದೆ’ ಎಂದು ವಿವರ ಕೊಡುತ್ತಾರೆ ದುನಿಯಾ ವಿಜಯ್. ಎಲ್ಲಾ ಸರಿ, ಈ ಚಿತ್ರಕ್ಕೆ ನಿರ್ಮಾಪಕರ್ಯಾರು? ಇಷ್ಟರಲ್ಲೇ ಅದಕ್ಕೆ ಉತ್ತರ ಸಿಗುತ್ತೆ ಎನ್ನುವ ದುನಿಯಾ ವಿಜಯ್, “ಜಾನಿ ಮೇರಾ ನಾಮ್’ ಚಿತ್ರಕ್ಕೆ ಹೇಗೆ ಸೆಟ್ ಹಾಕಲಾಗಿತ್ತೋ, ಅಂಥದ್ದೇ ಅದ್ಭುತ ಸೆಟ್‌ನಲ್ಲಿ “ಜಾನಿ ಜಾನಿ ಎಸ್ ಪಪ್ಪಾ’ ಸಿನಿಮಾದ ಚಿತ್ರೀಕರಣವಾಗಲಿದೆ ಎನ್ನುತ್ತಾರೆ.
ಹಾಗಾದರೆ, ಇಲ್ಲಿ ನಾಯಕಿ ರಮ್ಯಾ ಆಗುತ್ತಾರಾ? ಎಂಬ ಪ್ರಶ್ನೆಗೆ, ನಮಗೂ ಅವರಿದ್ದರೆ ಚೆನ್ನಾಗಿರುತ್ತೆ. ಆದರೆ, ಅವರೀಗ ಬಿಜಿಯಾಗಿರಬಹುದೇನೋ, ಕಥೆ, ಪಾತ್ರ ಕೇಳಿದರೆ ಒಪ್ಪಬಹುದೇನೋ? ಆದರೆ, ಆ ಬಗ್ಗೆ ನಿರ್ದೇಶಕರು ನಿರ್ಧರಿಸಲಿದ್ದಾರೆ ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ವಿಜಯ್. ಸದ್ಯ “ಮಾಸ್ತಿಗುಡಿ’ ಚಿತ್ರ ಪ್ರೇಕ್ಷಕರ ಮುಂದೆ ಬರಲು ರೆಡಿಯಾಗಿದೆ. ಸಣ್ಣದ್ದೊಂದು ಸಿಜಿ ಕೆಲಸ ನಡೆಯುತ್ತಿದೆ. ಇಷ್ಟರಲ್ಲೇ ತೆರೆಗೆ ಬರುವುದಾಗಿ ಹೇಳುತ್ತಾರೆ.