Advertisement

ಮಂಗಳೂರು : ಪಾಠದ ಜತೆಗೇ ಪದವಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ!

03:31 PM Oct 10, 2022 | Team Udayavani |

ಮಂಗಳೂರು: ಪದವಿ ಕಾಲೇಜು ಸೋಮವಾರ ಮರು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳ ಕಲಿಕೆಗೆ ಸಮಸ್ಯೆ ಆಗದಂತೆ ತಡೆಯಲು ಮೌಲ್ಯಮಾಪನ ಸ್ಥಗಿತ ಮಾಡಲಾಗಿದೆ. ಆದರೆ ಮುಂಬರುವ ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿಪಡಿಸುವ ಇರಾದೆ ಯಿಂದ ಪ್ರಾಧ್ಯಾಪಕರು ಪಾಠ ಮಾಡುತ್ತ ಬಿಡುವಿನ ವೇಳೆಯಲ್ಲಿ ಮೌಲ್ಯಮಾಪನವನ್ನು ಆಯಾ ಕಾಲೇಜಿ ನಲ್ಲೇ ನಡೆಸುವ ಮಹತ್ತರ ತೀರ್ಮಾನ ವನ್ನು ಕೈಗೊಳ್ಳಲು ಮಂಗಳೂರು ವಿಶ್ವವಿದ್ಯಾನಿಲಯ ಮುಂದಡಿ ಇಟ್ಟಿದೆ.

Advertisement

ನಿಗದಿತ ಕೇಂದ್ರಕ್ಕೆ ಉತ್ತರ ಪತ್ರಿಕೆಗಳನ್ನು ತರಿಸಿ ಪ್ರಾಧ್ಯಾಪಕರು ಅಲ್ಲಿಯೇ ಕುಳಿತು ಮೌಲ್ಯಮಾಪನ ನಡೆಸುವುದು ಕ್ರಮ. ಆದರೆ ಕೊರೊನಾ ಕಾರಣದಿಂದ 2 ವರ್ಷಗಳಿಂದ ಹಳಿ ತಪ್ಪಿರುವ ಶೈಕ್ಷಣಿಕ ವೇಳಾಪಟ್ಟಿಯನ್ನು ಸರಿಪಡಿಸುವ ಉದ್ದೇಶದಿಂದ ಕಾಲೇಜುಗಳಿಗೆ ಉತ್ತರ ಪತ್ರಿಕೆಗಳನ್ನು ಕಳುಹಿಸಿ ಮೌಲ್ಯಮಾಪನ ಮಾಡುವುದು ಹಾಗೂ ಬೋಧನೆಗೂ ಅನುಕೂಲ ಕಲ್ಪಿಸುವುದು ಈಗಿನ ಚಿಂತನೆ. ಒಬ್ಬ ಪ್ರಾಧ್ಯಾಪಕ ದಿನಕ್ಕೆ 35 ಅಥವಾ 40 ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇದಕ್ಕೆ ಪ್ರತ್ಯೇಕ ಭತ್ತೆ ನೀಡಲಾಗುತ್ತದೆ. ಅಂಕಗಳನ್ನು ಅಪ್‌ಲೋಡ್‌ ಮಾಡುವುದು ಹೇಗೆ ಎಂಬ ಬಗ್ಗೆ ತೀರ್ಮಾನ ಇನ್ನಷ್ಟೇ ನಡೆಯಬೇಕಿದೆ.

ಆ. 17ರಿಂದಲೇ 2022-23ರ ಪದವಿ ಶೈಕ್ಷಣಿಕ ವರ್ಷ ಆರಂಭ ಮಾಡುವಂತೆ ಈ ಹಿಂದೆ ಸರಕಾರ ಸೂಚಿಸಿತ್ತು. ಆದರೆ 2021-22ರ ಶೈಕ್ಷಣಿಕ ಅವಧಿ ಪೂರ್ಣಗೊಳ್ಳದೆ ತರಗತಿ ಆರಂಭವಾಗಿರಲಿಲ್ಲ. ಬಳಿಕ ಸೆ. 1ರಂದು ಮೊದಲ ಸೆಮಿಸ್ಟರ್‌ ಆರಂಭವಾಗಿತ್ತು. ಇದೀಗ ದಸರಾ ರಜೆ/ ಪರೀಕ್ಷೆ ಮುಗಿದ ಬಳಿಕ ಎಲ್ಲ ಸೆಮಿಸ್ಟರ್‌ಗಳ ತರಗತಿ ಮರು ಆರಂಭ ಅ. 10ಕ್ಕೆ ನಡೆಯಲಿದೆ.

6ನೇ ಸೆಮಿಸ್ಟರ್‌ನ ಫಲಿತಾಂಶ ವಿಳಂಬ?
ಅಂತಿಮ ಸೆಮಿಸ್ಟರ್‌ (6ನೇ)ನ ಮೌಲ್ಯಮಾಪನ ಈಗಾಗಲೇ ನಿಗದಿತ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಅಲ್ಲೇ ಮುಂದುವರಿಯಲಿದೆ. ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ತೊಂದರೆಯಾಗದಂತೆ 6ನೇ ಸೆಮಿಸ್ಟರ್‌ ಫಲಿತಾಂಶವನ್ನು ತುರ್ತಾಗಿ ನೀಡುವುದು ಅನಿವಾರ್ಯ. ಆದ್ದರಿಂದ ಇತರ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳ ಪಾಠಪ್ರವಚನಗಳಿಗೂ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಮೌಲ್ಯಮಾಪನಕ್ಕೆ ಸಂಬಂಧಪಟ್ಟ ಪ್ರಾಧ್ಯಾಪಕರನ್ನು ಕಳುಹಿಸುವ ನಿಟ್ಟಿನಲ್ಲಿ ಪ್ರಾಂಶುಪಾಲರು ಕ್ರಮ ಕೈಗೊಳ್ಳುವಂತೆ ವಿ.ವಿ. ಸೂಚಿಸಿದೆ. ಆದರೆ ಮೌಲ್ಯಮಾಪನ ಮುಗಿದು ಫಲಿತಾಂಶ ದೊರೆತು ಅಂಕಪಟ್ಟಿ ಸಿಗಬೇಕಾದರೆ 1 ತಿಂಗಳಿಗೂ ಹೆಚ್ಚಿನ
ಸಮಯ ಬೇಕಾಗಬಹುದು.

ಪದವಿ ತರಗತಿ ಪ್ರಾರಂಭವಾಗುತ್ತಿರುವುದರಿಂದ ಆರನೇ ಸೆಮಿಸ್ಟರ್‌ ಹೊರತುಪಡಿಸಿ ಉಳಿದ ಎಲ್ಲ ಸೆಮಿಸ್ಟರ್‌ಗಳ ಮೌಲ್ಯಮಾಪನವನ್ನು ಸ್ಥಗಿತಗೊಳಿಸಲು ಆದೇಶಿಸಲಾಗಿದೆ. ಪ್ರಾಂಶುಪಾಲರ ಮೇಲುಸ್ತುವಾರಿಯಲ್ಲಿ ಕಾಲೇಜುಗಳಲ್ಲಿಯೇ ಅವುಗಳ ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಒಂದೆರಡು
ದಿನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು.
– ಪ್ರೊ| ಪಿ.ಎಲ್‌.ಧರ್ಮ, ಕುಲಸಚಿವರು (ಪರೀಕ್ಷಾಂಗ), ಮಂಗಳೂರು ವಿ.ವಿ.

Advertisement

– ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next