Advertisement

ಪೇಪರ್‌ ಆರ್ಟ್‌ನ ಭರವಸೆ: ರವಿ ಪ್ರಸಾದ್‌ ಆಚಾರ್‌!

11:02 PM Mar 04, 2020 | mahesh |

ಪೇಪರ್‌ ಅರ್ಟ್‌ ಅತೀ ಸೂಕ್ಷ್ಮ, ಅಷ್ಟೇ ನಾಜೂಕಿನ ವಿಭಿನ್ನ ಈ ಕಲಾ ಮಾಧ್ಯಮ. ನಿರಂತರ ಕ್ರಿಯಾಶೀಲತೆ, ಅಪಾರ ತಾಳ್ಮೆ, ಸ್ವ ಪ್ರಯತ್ನ, ಸೂಕ್ಷ್ಮ ಮನಸ್ಸಿದ್ದವರಷ್ಟೇ ಈ ಕಲಾಭಿವ್ಯಕ್ತಿಯನ್ನು ದಕ್ಕಿಸಿಕೊಂಡು ಪ್ರಸ್ತುತಪಡಿಸಲು ಸಾಧ್ಯ. ಅಂತಹ ಕಲಾ ಕ್ಷೇತ್ರದಲ್ಲಿ 2 ಸಾವಿರಕ್ಕೂ ಹೆಚ್ಚು ಕಣ್ಮನ ಸೆಳೆಯುವ ಸುಂದರ ಪೇಪರ್‌ ಚಿತ್ರಕಲೆಯನ್ನು ರಚಿಸಿ ಕಲಾಭಿಮಾನಿಗಳ ಮನಗೆದ್ದಿರುವ ಕರಾವಳಿಯ ಅಪರೂಪದ ಪ್ರತಿಭೆ ಯೇ ರವಿ ಪ್ರಸಾದ್‌ ಆಚಾರ್‌

Advertisement

ರವಿ ಪ್ರಸಾದ್‌ ಆಚಾರ್‌ ಕುಂದಾಪುರ ತಾಲೂಕಿನ ಹೆಂಗವಳ್ಳಿ ಗ್ರಾಮದ ತೊಂಬತ್ತು ಪರಿಸರದ ಯುವಕ. ದಿ| ಬಾಬು ಆಚಾರ್‌ ಮತ್ತು ಶಾರದಾ ದಂಪತಿಯ ಪುತ್ರ. ಬಡತನದ ಕಾರಣಕ್ಕಾಗಿ ಶಿಕ್ಷಣವನ್ನು ಹೈಸ್ಕೂಲ್‌ ಹಂತದಲ್ಲಿಯೇ ಮೊಟಕುಗೊಳಿಸಿ ಮನೆಯ ಜವಾಬ್ದಾರಿಯನ್ನು ಹೊತ್ತವರು. ಹಗಲಿಡೀ ಹೊರಗೆ ದುಡಿದು ಸಂಜೆ ಮನೆಗೆ ಬರುವ ರವಿ ಪ್ರಸಾದ್‌ ಈ ಕಲೆಯನ್ನು ಹವ್ಯಾಸವಾಗಿ ಬೆಳೆಸಿಕೊಂಡವರು. ಆದರೆ ಇದೀಗ ಆ ಹವ್ಯಾಸ ಅವರನ್ನು ಸಾಧನೆಯ ಪಥದಲ್ಲಿ ಸಾಗುವಂತೆ ಮಾಡಿದೆ.

2 ಸಾವಿರ ಚಿತ್ರಕಲೆಗಳ ರಚನೆ
ನೂರಾರು ಬಗೆಯ ದೇವ ದೇವತೆಯರು, ಪ್ರಕೃತಿಯ ಸೊಬಗು, ಮಹಾವಿಷ್ಣುವಿನ ದಶಾವತಾರ, ನವಗ್ರಹಗಳು, ಪವನಸುತ ಹನುಮಂತ, ಶಿವಲಿಂಗ, ಯಕ್ಷಕೀರಿಟ, ನೂರಾರು ತೆರನಾದ ಚಿಟ್ಟೆ-ಮಾಮರ ಪಕ್ಷಿಗಳು, ಕನ್ನಡ ನೆಲ, ಸ್ವತ್ಛ ಭಾರತ, ದೇಶಪ್ರೇಮಿ ರಾಷ್ಟ್ರ ನಾಯಕರು-ಹೀಗೆ ಎರಡು ಸಾವಿರಕ್ಕೂ ಮಿಕ್ಕಿ ಅತೀ ಸುಂದರ ಪೇಪರ್‌ ಕಲೆಯನ್ನು ತನ್ನ ಕುಂಚದಲ್ಲಿ ಅರಳಿಸಿದ ರವಿ ಪ್ರಸಾದ್‌ ತೀರಾ ಗ್ರಾಮೀಣ ಪರಿಸರದಲ್ಲಿ ಅರಳಿದ ಅದ್ಭುತ ಪ್ರತಿಭೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಗುರುವಿಲ್ಲದೇ ಕಲಿತ ವಿದ್ಯೆ
ಪೇಪರ್‌ ಕಲೆಯ ಬಗ್ಗೆ ಗುರುವಿನ ಮಾರ್ಗದರ್ಶನ ಇಲ್ಲದೇ ಬಾಲ್ಯದಿಂದಲೇ ಕಲೆ ಕುರಿತಾಗಿ ಇದ್ದ ಸ್ವಆಸಕ್ತಿ ಯಿಂದ ಬೆಳೆದಿದ್ದಾರೆ. ಈಗಾಗಲೇ ಕರಾವಳಿಯ ಬೇರೆ ಬೇರೆ ಕಡೆ ಸಾಕಷ್ಟು ಪ್ರದರ್ಶನವನ್ನು ನಡೆಸಿರುವ ಇವರು ಸ್ಥಳೀಯ ಶಾಲಾ-ಕಾಲೇಜು ಮಕ್ಕಳಿಗೆ ಈ ಕಲೆಯ ಬಗ್ಗೆ ತರಬೇತಿಯನ್ನು ನೀಡುತ್ತಿದ್ದಾರೆ. ಅನೇಕ ಸ್ಥಳೀಯ ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ ಸಮ್ಮಾನಿಸಿವೆ.

- ಮಂಜುನಾಥ್‌ ಹಿಲಿಯಾಣ

Advertisement
Advertisement

Udayavani is now on Telegram. Click here to join our channel and stay updated with the latest news.

Next