Advertisement

ಕನ್ನಡಕ್ಕಾಗಿ ಎಂಥವರನ್ನೂ ಎದುರಿಸುವ ಪಾಪು

07:09 AM Jan 12, 2019 | |

ಬೆಂಗಳೂರು: ಹಿರಿಯ ಪತ್ರಕರ್ತ ಹಾಗೂ ಮಾಜಿ ಸಂಸದ ಪಾಟೀಲ ಪುಟ್ಟಪ್ಪ(ಪಾಪು)ಅವರ ಜನ್ಮ ಶತಮಾನೋತ್ಸವವು ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆಯಿತು.

Advertisement

ಬಸವ ಸಮಿತಿ, ಡಾ.ನಾಡೋಜ ಪಾಟೀಲ ಪುಟ್ಟಪ್ಪ ಜನ್ಮಶತಮಾನೋತ್ಸವ ಸಮಿತಿ, ಕರ್ನಾಟಕ ಗಾಂಧಿ ಸ್ಮಾರಕ ನಿಧಿವತಿಯಿಂದ ನಡೆದ ಕಾರ್ಯಕ್ರಮದಲ್ಲಿ  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ಅವರು ಮುಖ್ಯಮಂತ್ರಿ ಅವರ ಲಿಖೀತ ಸಂದೇಶ ಸಭೆಗೆ ಓದಿ ಹೇಳಿದರು.

ಪಾಪು ಅವರು ಹುಡುಗನಾಗಿದ್ದಾಗ ಮಹಾತ್ಮಗಾಂಧಿ ಅವರು ಬೆಳಗಾವಿಯ ಬ್ಯಾಡಗಿಗೆ ಭೇಟಿ ನೀಡಿದ್ದರು. ಆ ವೇಳೆ ಗಾಂಧೀಜಿ ಅವರು ಪಾಪು ಅವರ ಬೆನ್ನು ಸವರಿದ್ದರು. ಅಂದಿನಿಂದ ಪಾಪು ಅವರು ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡರು. ತಾನು ನಂಬಿದ ತತ್ವ ಸಿದ್ಧಾಂತದ ಅನುಸರಣೆಯಲ್ಲಿ ಎಂದೂ ರಾಜಿಯಾಗಿಲ್ಲ. ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ಪಾಪು ಅವರು ಮಾಡಿದ ಕೆಲಸದಿಂದಲೇ ಇವತ್ತು ಆಡಳಿತದಲ್ಲಿ ಕನ್ನಡ ಗಟ್ಟಿಯಾಗಿದೆ ಎಂದು ತಮ್ಮ ಸಂದೇಶದಲ್ಲಿ ಉಲ್ಲೇಖೀಸಿದ್ದರು.

ವಿಧಾನ ಪರಿಷತ್‌ ಮಾಜಿ ಸಭಾಪತಿ ಬಿ.ಎಲ್‌.ಶಂಕರ್‌ ಮಾತನಾಡಿ, ಜಿಲ್ಲೆಯಲ್ಲಿ ಸಮುದಾಯ ಭವನಕ್ಕೆ ಮೀಸಲಿಟ್ಟ ಹಣದಲ್ಲಿ ಜಿಲ್ಲೆಗೊಂದರಂತೆ ವಸ್ತುಸಂಗ್ರಹಾಲಯ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಿದರು. ಜಿಲ್ಲೆ ವ್ಯಾಪ್ತಿಯಲ್ಲಿ ಸಾಹಿತ್ಯ, ಕೃಷಿ, ಸ್ವಾತಂತ್ರ ಹೋರಾಟ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರ ಜೀವನ ಚರಿತ್ರೆಯನ್ನು ವಸ್ತುಸಂಗ್ರಹಾಲಯದ ಮೂಲಕ ಪ್ರಚಾರ ಪಡಿಸಬೇಕು. ಸಾಧಕರ ಜನ್ಮದಿನವನ್ನು ಒಟ್ಟಿಗೆ ಆಚರಿಸುವಂತೆ ಆಗಬೇಕು ಎಂದು ಹೇಳಿದರು.

ಹಿರಿಯ ಸಾಹಿತಿ ಗೋ.ರು.ಚನ್ನಬಸಪ್ಪ, ಬಸವ ಸಮಿತಿ ಅಧ್ಯಕ್ಷರಾದ ಅರವಿಂದ ಜತ್ತಿ, ಜನ್ಮಶತಮಾನೋತ್ಸವ ಸಮಿತಿಯ ಸಂಚಾಲಕ ಲೋಹಿತ್‌ ನಾಯ್ಕರ್‌, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ಹೂಡೇ ಪಿ.ಕೃಷ್ಣ, ಕೇಂದ್ರದ ಮಾಜಿ ಸಚಿವ ಎಂ.ವಿ.ರಾಜಶೇಖರನ್‌, ಮಾಜಿ ಸಂಸದ ಎಚ್‌.ಹನುಮಂತಪ್ಪ, ವಿಶ್ರಾಂತ ಕುಲಪತಿ ಡಾ.ಮಹದೇವಪ್ಪ, ಶಿಕ್ಷಣ ತಜ್ಞ ಕೆ.ಇ.ರಾಧಾಕೃಷ್ಣ ಮೊದಲಾದವರು ಉಪಸ್ಥಿತರಿದ್ದರು.

Advertisement

ಜ.14ಕ್ಕೆ ಪಾಪು ಜನ್ಮದಿನ: ಪಾಪು ಅವರು ವಿದ್ಯಾರ್ಥಿ ಆಗಿದ್ದಾಗಲೇ ಹೋರಾಟದಲ್ಲಿ ತೊಡಗಿಸಿಕೊಂಡವರು, ಪ್ರಪಂಚ ಮತ್ತು ವಿಶ್ವವಾಣಿ ಎಂಬ ಪತ್ರಿಕೆ ನಡೆಸಿದವರು, ಧಾರವಾಡ ವಿದ್ಯಾವರ್ಧಕ ಸಂಘಕ್ಕೆ ದೀಘಕಾಲ ಅಧ್ಯಕ್ಷರಾಗಿದ್ದರು. ಜ.14ರಂದು ಅವರಿಗೆ ನೂರು ವರ್ಷ ತುಂಬಲಿದೆ. ಇದರ ಅಂಗವಾಗಿ ಕಾಸರಗೋಡು, ದೆಹಲಿ, ಧಾರವಾಡ ಸೇರಿ ವಿವಿಧೆಡೆ ಜನ್ಮಶತಮಾನೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಪಾಪು ವ್ಯಕ್ತಿ, ಶಕ್ತಿ ಎಂಬ ಆತ್ಮಚರಿತ್ರೆ ಬಿಡುಗಡೆ ಮಾಡಲಾಗುತ್ತಿದೆ. ಆರು ಕಡೆ ವಿಚಾರ ಸಂಕಿರಣಗಳು ನಡೆಯಲಿದೆ ಎಂದು ಜನ್ಮಶತಮಾನೋತ್ಸವ ಸಮಿತಿಯ ಸಂಚಾಲಕ ಲೋಹಿತ್‌ ನಾಯ್ಕರ್‌ ಮಾಹಿತಿ ನೀಡಿದರು.

ನಾನೊಬ್ಬ ಗಾಂಧಿವಾದಿ, ಗಾಂಧೀಜಿಯವರ ದರ್ಶನದ ನಂತರ ಖಾದಿ ಬಿಟ್ಟು ಬೇರೆ ಬಟ್ಟೆಯನ್ನೇ ತೊಟ್ಟಿಲ್ಲ. ಅಮೆರಿಕಾಕ್ಕೆ  ಹೋದಾಗ ಗಾಂಧಿ ಟೋಪಿ ಧರಿಸಿದ್ದರಿಂದ ಅಲ್ಲಿನವರು ಗಾಂಧಿಯವರ ನಾಡಿನಿಂದ ಬಂದವರು ಎಂದು ಗೌರವಿಸಿದ್ದರು. ನಮ್ಮ ಗುರುಗಳಾದ ಗಂಗಾಧರ ಸವದತ್ತಿಯವರ ಮಾರ್ಗದರ್ಶನವೂ ನನ್ನ ಸಾಧನೆಯ ಹಿಂದಿದೆ 
-ಪಾಟೀಲ ಪುಟ್ಟಪ್ಪ, ಮಾಜಿ ಸಂಸದ 

Advertisement

Udayavani is now on Telegram. Click here to join our channel and stay updated with the latest news.

Next