Advertisement

ಪನ್ವೆಲ್‌ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವ

01:32 PM Mar 17, 2019 | |

ಪನ್ವೆಲ್‌: ಶ್ರೀ ಕ್ಷೇತ್ರವು ಈಗಾಗಲೇ ಕಾರಣಿಕ ಕ್ಷೇತ್ರವಾಗಿ ಕಂಗೊಳಿಸುತ್ತಿರುವುದಕ್ಕೆ ಇಲ್ಲಿಗೆ ಆಗಮಿಸುವ ಭಕ್ತ ಜನ ಸಾಗರವೇ ಸಾಕ್ಷಿಯಾಗಿದೆ. ಹಾಗೇ ಜಗನ್ಮಾತೆಯೂ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸಿ, ಅವರ ಕಷ್ಟ, ಕಾರ್ಪಣ್ಯಗಳನ್ನು ನಿವಾರಿಸುತ್ತಿರಲಿ ಎಂದು ಶ್ರೀಮದ್‌ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ ಕಟಪಾಡಿ ಇದರ ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಮಹಾಸ್ವಾಮೀಜಿ ಅವರು ಅಭಿಪ್ರಾಯಿಸಿದರು.

Advertisement

ಮಾ. 10ರಂದು ದೇರಾವಲಿಯ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಂಘ ಸಂಚಾಲಕತ್ವದ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪ್ರಥಮ ವಾರ್ಷಿಕ ವರ್ಧಂತಿ ಉತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯ ಆಶೀರ್ವಚನ ನೀಡಿದ ಅವರು, ಪರಿಶುದ್ಧ ಮನಸ್ಸಿನಿಂದ ಸೇವೆ ಸಲ್ಲಿಸಿದಾಗ ದೇವರು ಸಂತೃಪ್ತರಾಗಿ ವಿವಿಧ ರೂಪದಲ್ಲಿ ಖಂಡಿತ ಪ್ರತಿಫಲ ನೀಡುತ್ತಾರೆ. ಇದರಲ್ಲಿ ಯಾವುದೇ ಸಂದೇಹವಿಲ್ಲ. ದೇವರು ಮತ್ತು ಭಕ್ತರ ನಡುವಿನ ಸಂಬಂಧ ತಾಯಿ-ಮಗುವಿನ ಬಂಧುತ್ವ ಇದ್ದಂತೆ. ತನ್ನನ್ನು ಅಪರಿಮಿತವಾಗಿ ಪ್ರೀತಿಸುವ ಮಗುವಿಗಾಗಿ ತಾಯಿ ಮಾರುಕಟ್ಟೆಯಿಂದ ತಿಂಡಿ ತಂದು ಕೊಡುತ್ತಾಳೆ. ಮಗುವಿನ ಮನಸ್ಸು ಪರೀಕ್ಷಿಸಲು ತಿಂಡಿಯಲ್ಲಿ ಒಂದು ಭಾಗವನ್ನು ತನಗೆ ನೀಡುವಂತೆ ಕೇಳುತ್ತಾಳೆ. ಮಗು ತಾಯಿಗೆ ತಿಂಡಿ ನೀಡಿದಾಗ ಖುಷಿಯಿಂದ ತನ್ನಲ್ಲಿದ್ದ ತಿಂಡಿಯನ್ನು ಮಗುವಿಗೆ ನೀಡುತ್ತಾಳೆ, ಇದೆ  ರೀತಿ ಪರಿಶುದ್ಧ ಮನಸ್ಸಿನಿಂದ ಸೇವೆ ಸಲ್ಲಿಸಿದಾಗ ದೇವರು ಸಂತೃಪ್ತರಾಗಿ ಹಲವು ವಿಧಗಳಲ್ಲಿ ಪ್ರತಿಫಲ ನೀಡುತ್ತಾರೆ ಎಂದರು.

ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಂಘ ಪನ್ವೇಲ್‌ ನವಿ ಮುಂಬಯಿ ಅಧ್ಯಕ್ಷ ಕಣ್ಣಪ್ಪ ಎನ್‌. ಆಚಾರ್ಯ ಸಭಾಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ತಂತ್ರಿ ಅಕ್ಷಯ್‌ ಎಸ್‌. ಶರ್ಮಾ,  ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಸದಾನಂದ ಆಚಾರ್ಯ, ಮಾಜಿ ಅಧ್ಯಕ್ಷರುಗಳಾದ ಜಿ. ಟಿ. ಆಚಾರ್ಯ, ನಿಟ್ಟೆ ದಾಮೋದರ ಆಚಾರ್ಯ, ಸಂಸ್ಕೃತ ವಿದ್ವಾನ್‌ ಪಂಡಿತ್‌ ಕೇಶವಾಚಾರ್ಯ ಹುಬ್ಬಳ್ಳಿ ಇವರು ಮಾತನಾಡಿ ಶುಭಹಾರೈಸಿದರು.

ವೇದಿಕೆಯಲ್ಲಿ ಹಿರಿಯ ಹೊಟೇಲ್‌ ಉದ್ಯಮಿಗಳಾದ ಕೃಷ್ಣ ವಿ. ಆಚಾರ್ಯ, ದಹಿಸರ್‌ ನೀಲಯ ಆಚಾರ್ಯ, ಮುಲುಂಡ್‌, ಸುಂದರ್‌ ಆಚಾರ್ಯ ಘಾಟ್‌ಕೋಪರ್‌, ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಂಘ ಪನ್ವೆಲ್‌ ಇದರ ಗೌರವ ಪ್ರಧಾನ ಕೋಶಾಧಿಕಾರಿ ಸಿಎ ಶ್ರೀಧರ ಆಚಾರ್ಯ, ಗೌರವ ಜೊತೆ ಕಾರ್ಯದರ್ಶಿ ಸತೀಶ್‌ ವಿ. ಆಚಾರ್ಯ, ಕಟ್ಟಡ ಸಮಿತಿಯ ಸಂಚಾಲಕ ಶೈಲೇಶ್‌ ಆಚಾರ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅನ್ನಪೂರ್ಣಾ ಶ್ರೀಧರ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಬೆಳ್ಳೆ ನರಸಿಂಹ ಆಚಾರ್ಯ ಸರ್ವರನ್ನು ಸ್ವಾಗತಿಸಿದರು. ಜತೆ ಕಾರ್ಯದರ್ಶಿ ಸುರೇಶ್‌ ಆಚಾರ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರುತಿ ನೃತ್ಯ ಅಕಾಡೆಮಿ ಹುಬ್ಬಳ್ಳಿ ಇದರ  ಕಲಾವಿದರಿಂದ ಭರತನಾಟ್ಯ ಪ್ರದರ್ಶನ, ಸಂಘದ ಮಹಿಳಾ ವಿಭಾಗದ ಸದಸ್ಯೆಯರಿಂದ ಭಕ್ತಿಗೀತೆಗಳ ಗಾಯನ ಹಾಗೂ  ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು.

Advertisement

ಮಂದಿರದ ವರ್ಧಂತಿ ಮಹೋತ್ಸವವು ಮಾ. 9ರಂದು ಪ್ರಾರಂಭಗೊಂಡು ಮಾ. 11 ರವರೆಗೆ ವಿವಿಧ ಧಾರ್ಮಿಕ, ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು. ಮಾ. 9ರಂದು  ಸಂಜೆ ಸಾಮೂಹಿಕ ದೇವತಾ ಪ್ರಾರ್ಥನೆಯೊಂದಿಗೆ ಪ್ರತಿಷ್ಠಾ ವರ್ಧಂತಿ ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ತೋರಣ ಮುಹೂರ್ತ, ತಂತ್ರಿವರಣೆ, ಆಚಾರ್ಯವರಣೆ, ಗುರು ಗಣೇಶ ಪೂಜೆ, ವಾಸ್ತು ಹೋಮ, ಪ್ರಕಾರ ಬಲಿ ಇತ್ಯಾದಿ ಧಾರ್ಮಿಕ ವಿಧಿಗಳು ನಡೆಯಿತು.

ಮಾ. 10ರಂದು ಬೆಳಗ್ಗೆ 7ರಿಂದ ಆದ್ಯ ಗಣಯಾಗ, ಕಲಶಾರಾಧನೆ, ಕಲಾ ಹೋಮ, ಶ್ರೀ ದೇವಿಗೆ ನವೋತ್ತರ ಶತ ಕಲಶಾಭಿಷೇಕ, ಅಲಂಕಾರ ನಡೆದು ಮಧ್ಯಾಹ್ನ 12.30ರಿಂದ ಮಹಾಪೂಜೆ ನೆರವೇರಿದ ಬಳಿಕ ಸಾಮೂಹಿಕ ಮಹಾ ಅನ್ನಸಂತರ್ಪಣೆ ಜರಗಿತು.  ರಾತ್ರಿ 7.30ರಿಂದ ಶ್ರೀ ಕಾಳಿಕಾಂಬಾ ದೇವರಿಗೆ ರಂಗಪೂಜೆ, ಮಹಾಪೂಜೆ, ಅಷ್ಟಾವದಾನ ಸೇವೆ ನಡೆಯಲಿದೆ. ರಾತ್ರಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.

ಮಾ. 11ರಂದು ಬೆಳಗ್ಗೆ 7ರಿಂದ ಗಣಪತಿ ಅಥರ್ವಶೀರ್ಷ ಹೋಮ ಮತ್ತು ನವಚಂಡಿ ಹೋಮ, ಬೆಳಗ್ಗೆ 11.30ರಿಂದ ಮಹಾಪೂಜೆ, ಪೂರ್ಣಾಹುತಿ ನಡೆಯಿತು.  ಮಧ್ಯಾಹ್ನ 12.30ರಿಂದ ಶ್ರೀ ಕಾಳಿಕಾಂಬಾ, ಶ್ರೀ ವಿನಾಯಕ ಮತ್ತು ಶ್ರೀ ಆಂಜನೇಯ ದೇವರ ಗರ್ಭಗುಡಿಯಲ್ಲಿ ಮಹಾಪೂಜೆ ನೆರವೇರಿತು. ಆನಂತರ ಗುರುಪಾದುಕಾ ಪೂಜೆ, ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಮಧ್ಯಾಹ್ನ 4ರಿಂದ ರಾತ್ರಿ 8ರ ವರೆಗೆ ವಿಶ್ವಕರ್ಮ ಸಂಸ್ಕೃತಿ ಪ್ರಸಾರ ಪ್ರತಿಷ್ಠಾನ ಮೂಡಬಿದ್ರೆ ಇವರಿಂದ ಕುಂಜೂರು ಗಣೇಶ ಆಚಾರ್ಯ ವಿರಚಿತ ಅಮರ ಶಿಲ್ಪಿ ಜಕಣಾಚಾರ್ಯ ಯಕ್ಷಗಾನ ತಾಳಮದ್ದಳೆ ಪ್ರದರ್ಶನಗೊಂಡಿತು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡಿದ್ದರು. ಮೂರು ದಿನಗಳ ಕಾಲ ನಡೆದ  ಧಾರ್ಮಿಕ ಮಹೋತ್ಸವದಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯ- ಸದಸ್ಯೆಯರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next