ಪಾಂಡವಪುರ: ಲಿಂಗಾಪುರ ಗ್ರಾಮಕ್ಕೂ ನಮ್ಮ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದ್ದು ಗ್ರಾಮದಲ್ಲಿ ಸಹೋದರ ಚಿಕ್ಕರಾಮೇಗೌಡರ ಶ್ರೀರಾಮಮಂದಿರ ನಿರ್ಮಾಣದ ಕನಸು ಪುತ್ರ ಜಿಪಂ ಸದಸ್ಯ ಅಶೋಕ್ ಸ್ವಂತ ಖರ್ಚಿನಲ್ಲಿ ಶ್ರೀರಾಮಮಂದಿರ ನಿರ್ಮಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಹೇಳಿದರು.
ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ನಿರ್ಮಾಣಗೊಂಡಿದ್ದ ಶ್ರೀರಾಮಮಂದಿರ ದೇವಸ್ಥಾನ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಲಿಂಗಾಪುರದ ಎಲ್ಲಾ ರಸ್ತೆಗಳ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸಿದ್ದೇವೆ. ಜತೆಗೆ ಗ್ರಾಮದ ಕೆರೆ ಅಭಿವೃದ್ಧಿಗೂ ಸಣ್ಣ ನೀರಾವರಿ ಇಲಾಖೆಯಿಂದಲೇ 80 ಲಕ್ಷ ರೂ. ಬಿಡುಗಡೆ ಮಾಡಿಸಿದ್ದು ಕೆರೆ ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
ಸಮರ್ಥವಾಗಿ ನಿಭಾಯಿಸುವೆ: ನಮಗೇನು ರಾಜಕೀಯದ ಅಗತ್ಯವಿರಲಿಲ್ಲ, ನಮ್ಮೆದುರು ಇದ್ದಂತಹ ಹಲವಾರು ಸಮಸ್ಯೆಗಳಿಂದ ನಾವು ರಾಜಕೀಯಕ್ಕೆ ಬರಬೇಕಾದಂತಹ ಪರಿಸ್ಥಿತಿ ಎದುರಾಯಿತು. ನಾವು ರಾಜಕೀಯಕ್ಕೆ ಬಂದು ಹಲವಾರು ಸಮಸ್ಯೆಗಳನ್ನು ನಾವೇ ಮೈಮೇಲೆಳೆದುಕೊಂಡು ಜವಾಬ್ದಾರಿ ನಿರ್ವಹಿಸುವಂತಹ ಅನಿವಾರ್ಯತೆ ಎದುರಾಗಿದೆ. ಆದರೆ ಯಾವುದೇ ಸಮಸ್ಯೆಗಳನ್ನು ಎದುರಿಸುವಂತಹ ಶಕ್ತಿ ಆ ದೇವರು ನಮಗೆ ಕೊಟ್ಟಿದ್ದಾನೆ. ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ಇದೇ ವೇಳೆ ಗ್ರಾಮದಲ್ಲಿ ಸಿಮೆಂಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವ ಪುಟ್ಟರಾಜು ಭೂಮಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಅಶೋಕ್, ಉಪ ವಿಭಾಗಾಧಿಕಾರಿ ವಿ.ಆರ್.ಶೈಲಜಾ, ಗ್ರಾಪಂ ಅಧ್ಯಕ್ಷೆ ವರಲಕ್ಷ್ಮೀ, ಸದಸ್ಯ ಸಿ.ಶಿವಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ರಾಮಕೃಷ್ಣೇಗೌಡ, ಗ್ರಾಮಸ್ಥರಾದ ರಾಜೇಗೌಡ, ದೇವೇಗೌಡ, ಲಕ್ಷ್ಮೇಗೌಡ, ಯೋಗೇಂದ್ರ, ಶಶಿಧರ್, ಜಿಲ್ಲಾ ಅರಣ್ಯಾಧಿಕಾರಿ ಶಿವರಾಜ್, ಸಿಪಿಐ ರವೀಂದ್ರ ಮತ್ತಿತರರು ಹಾಜರಿದ್ದರು.