Advertisement

ಪನೋರಮಾಗೆ ಈ ಬಾರಿ ಕನ್ನಡದಿಂದ ಒಂದೇ ಚಿತ್ರ!

04:26 PM Nov 11, 2017 | Team Udayavani |

ಕಳೆದ ಒಂದು ವರ್ಷದ ಅವಧಿಯಲ್ಲಿ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದ ಹಲವು ಕನ್ನಡ ಚಿತ್ರಗಳು ಬಂದಿವೆ. ಆ ಚಿತ್ರಗಳ ಕುರಿತು ಚರ್ಚೆಯಾಗುವುದರ ಜೊತೆಗೆ, ಹಲವು ಚಿತ್ರಗಳು ಯಶಸ್ವಿಯೂ ಆಗಿದೆ. ಆದರೆ, ವಿಚಿತ್ರವೆಂದರೆ ಈ ಬಾರಿಯ ಪನೋರಮಾ ವಿಭಾಗಕ್ಕೆ ಕನ್ನಡದಿಂದ ಒಂದೇ ಒಂದು ಚಿತ್ರ ಮಾತ್ರ ಆಯ್ಕೆಯಾಗಿದ್ದು. 

Advertisement

ಗೋವಾದ ಪಣಜಿಯಲ್ಲಿ ನವೆಂಬರ್‌ 20ರಿಂದ 28ರವರೆಗೂ ನಡೆಯುವ 48ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾ ವಿಭಾಗದಲ್ಲಿ, ಒಟ್ಟು 26 ಚಿತ್ರಗಳು ಆಯ್ಕೆಯಾಗಿದ್ದು, ಅದರಲ್ಲಿ ಕನ್ನಡದ “ರೈಲ್ವೇ ಚಿಲ್ಡ್ರನ್‌’ ಮಾತ್ರ ಆಯ್ಕೆಯಾಗಿದೆ. ಈ ಬಾರಿ ದೇಶಾದ್ಯಂತ ನೂರಾರು ಚಿತ್ರಗಳು ಈ ಪನೋರಮಾ ವಿಭಾಗದಲ್ಲಿ ಸ್ಪರ್ಧಿಸಿದ್ದವು.

ಆ ಪೈಕಿ 26 (21 ಹೊಸ ಅಲೆಯ + 5 ಕಮರ್ಷಿಯಲ್‌) ಚಿತ್ರಗಳು ಮಾತ್ರ ಆಯ್ಕೆಯಾಗಿವೆ. ಮೂಲಗಳ ಪ್ರಕಾರ ಕನ್ನಡದ 24 ಚಿತ್ರಗಳು ಭಾಗವಹಿಸಿದ್ದು, ಆ ಪೈಕಿ “ರೈಲ್ವೇ ಚಿಲ್ಡ್ರನ್‌’ ಮಾತ್ರ ಆಯ್ಕೆಯಾಗಿದೆ. ಮಿಕ್ಕಂತೆ 26 ಚಿತ್ರಗಳ ಪೈಕಿ ಹಿಂದಿಯ ಆರು, ಮರಾಠಿಯ ಒಂಬತ್ತು, ಬಂಗಾಲಿಯ ಮೂರು, ಅಸ್ಸಾಮಿಯ ಎರಡು, ಮಿಕ್ಕಂತೆ ಕನ್ನಡ, ತಮಿಳು, ತೆಲುಗು, ಮಲಯಾಳಂ ಚಿತ್ರಗಳಿಂದ ಒಂದೊಂದು ಚಿತ್ರವನ್ನು ಆಯ್ಕೆ ಮಾಡಲಾಗಿದೆ.

ಈ ಪೈಕಿ ಜನಪ್ರಿಯ ಚಿತ್ರಗಳ ಪೈಕಿ, ಅಕ್ಷಯ್‌ ಕುಮಾರ್‌ ಅಭಿನಯದ “ಜಾಲಿ ಎಲ್‌ಎಲ್‌ಬಿ 2′, ಪ್ರಭಾಸ್‌ ಮತ್ತು ರಾಣಾ ದಗ್ಗುಬಾಟಿ ಅಭಿನಯದ “ಬಾಹುಬಲಿ 2′, ಪ್ರಿಯಾಂಕಾ ಚೋಪ್ರಾ ನಿರ್ಮಾಣದ “ವೆಂಟಿಲೇಟರ್‌’ ಮುಂತಾದ ಚಿತ್ರಗಳಿವೆ. ಪ್ರತಿ ವರ್ಷ, ಕನ್ನಡ ಚಿತ್ರರಂಗದಿಂದ ಪನೋರಮಾಗೆ ಹಲವು ಚಿತ್ರಗಳು ಆಯ್ಕೆಯಾದ ಉದಾಹರಣೆಗಳಿವೆ. ಕಳೆದ ವರ್ಷವೇ, ಪನೋರಮಾ ವಿಭಾಗದಲ್ಲಿ ಕನ್ನಡದ “ಹರಿಕಥಾ ಪ್ರಸಂಗ’ “ಯೂ ಟರ್ನ್’ ಮತ್ತು “ಅಲ್ಲಮ’ ಚಿತ್ರಗಳು ಪ್ರದರ್ಶನಗೊಂಡಿದ್ದವು.

ಆದರೆ, ಈ ಬಾರಿ ಮಾತ್ರ ಕನ್ನಡದಿಂದ ಕೇವಲ ಒಂದೇ ಒಂದು ಚಿತ್ರ ಮಾತ್ರ ಆಯ್ಕೆಯಾಗಿದೆ. ಅದರಲ್ಲೂ ಈ ಬಾರಿ “ರಿಸರ್ವೇಶನ್‌’, “ಉಪ್ಪಿನ ಕಾಗದ’, “ಅಮರಾವತಿ’, “ಮೂಡಲ ಸೀಮೆಯಲಿ’, “ಜೀರ್‌ಜಿಂಬೆ’, “ರಾಮಾ ರಾಮಾ ರೇ’, “ಮದಿಪು’ ಸೇರಿದಂತೆ ರಾಜ್ಯ ಸೇರಿದಂತೆ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾದ ಹಲವು ಚಿತ್ರಗಳಿವೆ. ಆದರೆ, ಅಷ್ಟೆಲ್ಲಾ ಚಿತ್ರಗಳ ಪೈಕಿ ಒಂದೇ ಒಂದು ಚಿತ್ರ ಮಾತ್ರ ಆಯ್ಕೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

Advertisement

ಬರೀ ಕನ್ನಡವಷ್ಟೇ ಅಲ್ಲ, ದಕ್ಷಿಣ ಭಾರತದ ನಾಲ್ಕೂ ಪ್ರಮುಖ ಭಾಷೆಗಳಿಂದ ಕೇವಲ ಒಂದೊಂದೇ ಚಿತ್ರವನ್ನು ಆಯ್ಕೆ ಮಾಡಲಾಗಿದ್ದು, ಮಿಕ್ಕಂತ ಉತ್ತರ ಭಾರತಕ್ಕೆ ಹೆಚ್ಚು ಪ್ರಾತಿನಿಧ್ಯ ನೀಡಲಾಗಿರುವುದು ಸ್ಪಷ್ಟವಾಗಿದೆ. ಸ್ಪರ್ಧೆಯಲ್ಲಿರುವ 26 ಚಿತ್ರಗಳ ಪೈಕಿ ಹಿಂದಿ, ಮರಾಠಿ, ಬೆಂಗಾಲಿ ಮತ್ತು ಅಸ್ಸಾಮಿ ಚಿತ್ರಗಳ ಸಂಖ್ಯೆಯೇ 20 ಆಗುತ್ತದೆ. ಹಾಗಾಗಿ ದಕ್ಷಿಣ ಭಾರತದ, ಅದರಲ್ಲೂ ಕನ್ನಡ ಚಿತ್ರಗಳಿಗೆ ಮಲತಾಯಿ ಧೋರಣೆ ತೋರಿಸಲಾಗುತ್ತಿದೆ ಎಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next