Advertisement
ಭಾರತದ ಸರ್ಕಾರಿ ಅಧಿಕಾರಿಯೊಬ್ಬರ ನಿರ್ದೇಶನದ ಮೇರೆಗೆ ಸುಪಾರಿ ಹಂತಕನೊಬ್ಬ ಖಲಿಸ್ತಾನಿ ಉಗ್ರ, ಸಿಖ್ಸ್ ಫಾರ್ ಜಸ್ಟಿಸ್ ನಾಯಕ ಪನ್ನುನ್‌ನನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದ್ದ ಎಂಬ ವಿಚಾರ ಬೆಳಕಿಗೆ ಬಂದ ಕೂಡಲೇ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆ(ಸಿಐಎ) ನಿರ್ದೇಶಕ ವಿಲಿಯಂ ಬರ್ನ್ಸ್ ಅವರು ಭಾರತಕ್ಕೆ ಆಗಮಿಸಿ, ಭಾರತದ ರಾ ಮುಖ್ಯಸ್ಥರನ್ನು ಭೇಟಿಯಾಗಿದ್ದರು. ಜತೆಗೆ, ಈ ಆರೋಪ ಕುರಿತು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಿ ಎಂದೂ ಸಲಹೆ ನೀಡಿದ್ದರು ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಸರ್ಕಾರಿ ಅಧಿಕಾರಿ ವಿರುದ್ಧ ಕೇಳಿಬಂದಿರುವ ಆರೋಪ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದಾಗಿ ಘೋಷಿಸಿರುವ ಭಾರತ ಸರ್ಕಾರದ ನಿರ್ಧಾರವನ್ನು ಅಮೆರಿಕ ಸ್ವಾಗತಿಸಿದೆ. ಇದೊಂದು ಉತ್ತಮ ಮತ್ತು ಸಮರ್ಪಕ ನಿರ್ಧಾರವಾಗಿದ್ದು, ಇದರ ಒಟ್ಟಾರೆ ಫಲಿತಾಂಶವನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅಮೆರಿಕ ಶುಕ್ರವಾರ ಹೇಳಿದೆ. ಜತೆಗೆ, ಈ ಪ್ರಕರಣವು ಭಾರತ ಮತ್ತು ಅಮೆರಿಕದ ಬಾಂಧವ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.