ಕಾಬೂಲ್: ತಾಲಿಬಾಬ್ ಉಗ್ರರ ವಿರುದ್ಧ ತೀವ್ರ ಪ್ರತಿರೋಧ ತೋರಿದ್ದ ಅಫ್ಘಾನಿಸ್ತಾನದ ಪಂಜ್ ಶೀರ್ ಪ್ರಾಂತ್ಯವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ತಾಲಿಬಾನ್ ಉಗ್ರರು ಲಗ್ಗೆ ಇಟ್ಟಿದ್ದಾರೆ. ಆದರೆ ಅಫ್ಘಾನಿಸ್ತಾನದ ಸದ್ಯದ ಬೆಳವಣಿಗೆಯ ವಿಶ್ಲೇಷಣೆ ಪ್ರಕಾರ, ತಾಲಿಬಾನ್ ಉಗ್ರರು ಪಂಜ್ ಶೀರ್ ಮೇಲೆ ದಾಳಿ ನಡೆಸಲು ಹರಸಾಹಸ ಪಡುತ್ತಿರುವುದಾಗಿ ವರದಿಯಾಗಿದೆ.
ಕಾಬೂಲ್ ನ ಉತ್ತರ ಹಿಂದು ಕುಶ್ ಪ್ರದೇಶದಲ್ಲಿ ಬೃಹತ್ ಬಂಡೆಗಳಿಂದ ಆವೃತ್ತವಾಗಿರುವ ಪಂಜ್ ಶೀರ್ ಪ್ರಾಂತ್ಯದೊಳಕ್ಕೆ ನುಗ್ಗಿ ದಾಳಿ ನಡೆಸುವುದು ತಾಲಿಬಾನ್ ಉಗ್ರರಿಗೂ ಸವಾಲಾಗಿದೆ. ಪೂರ್ಣ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ತಾಲಿಬಾನ್ ಉಗ್ರರು ಪಂಜ್ ಶೀರ್ ಬಳಿ ಬೀಡುಬಿಟ್ಟಿದ್ದಾರೆನ್ನಲಾಗಿದೆ.
ಪಂಜ್ ಶೀರ್ ಜನರು ಶರಣಾಗಬೇಕು ಎಂಬುದು ತಾಲಿಬಾನ್ ಉಗ್ರರ ಆಗ್ರಹವಾಗಿದೆ. ಏತನ್ಮಧ್ಯೆ ಪಂಜ್ ಶೀರ್ ಜನರಿಗೆ ಅಫ್ಘಾನ್ ಸೇನೆ, ವಿದೇಶಿ ಪಡೆಗಳು ಸಹಕಾರ ನೀಡಿರುವುದಾಗಿ ವರದಿ ತಿಳಿಸಿದೆ. ಮಿಲಿಟರಿ ದಂತಕಥೆ ಕಮಾಂಡರ್ ದಿ. ಅಹ್ಮದ್ ಶಾ ಮಸೌದ್ ಕಳೆದ ನಾಲ್ಕು ದಶಕಗಳ ಕಾಲ ತಾಲಿಬಾನ್ ಬಂಡುಕೋರರಿಗೆ ಪಂಜ್ ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಅವಕಾಶ ನೀಡಿಲ್ಲವಾಗಿತ್ತು.
ತಾಲಿಬಾನ್ ಉಗ್ರರ ಹಿಡಿತ ಅಫ್ಘಾನಿಸ್ತಾನದಲ್ಲಿ ಬಿಗಿಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ಥಾನದ ಉಪಾಧ್ಯಕ್ಷ ಅಮ್ರುಲ್ಲಾ ಸಲೇಹ್ ಮತ್ತು ಅಹ್ಮದ್ ಶಾ ಮಸೌದ್ ಪುತ್ರ ಅಹ್ಮದ್ ಮಸೌದ್ ಅವರನ್ನು ನಿರಾಶ್ರಿತರ ಶಿಬಿರದಲ್ಲಿ ಇಡಲಾಗಿದೆ ಎಂದು ವರದಿ ಹೇಳಿದೆ.
ಪಂಜ್ ಶೀರ್ ಪ್ರಾಂತ್ಯವನ್ನು ಸುತ್ತುವರಿದು ಲಾಕ್ ಡೌನ್ ಮಾಡೋದು ತಾಲಿಬಾನ್ ಉಗ್ರರ ಉದ್ದೇಶವಾಗಿದ್ದು, ಇನ್ನೂ ಪಂಜ್ ಶೀರ್ ಒಳಗೆ ಲಗ್ಗೆ ಇಟ್ಟಿಲ್ಲ. ಈಗಾಗಲೇ ತಾಲಿಬಾನ್ ಪಂಜ್ ಶೀರ್ ಪ್ರಾಂತ್ಯವನ್ನು ಎಲ್ಲಾ ಕಡೆಯಿಂದಲೂ ಸುತ್ತುವರೆದಿದೆ. ಆದರೆ ಈ ಬಾರಿ ಮಸೌದ್ ಹಾಗೂ ಬೆಂಬಲಿಗರಿಗೆ ತಾಲಿಬಾನ್ ಅನ್ನು ಪ್ರಬಲವಾಗಿ ವಿರೋಧಿಸುವ ಸಾಧ್ಯತೆ ಕಡಿಮೆ ಇದ್ದು, ಅವರಿಗೆ ಹೆಚ್ಚಿನ ಬೆಂಬಲದ ಕೊರತೆಯೂ ಇದ್ದಿರುವುದಾಗಿ ಅಬ್ದುಲ್ ಸೈಯದ್ ಎಎಫ್ ಪಿಗೆ ತಿಳಿಸಿದ್ದಾರೆ.